ADVERTISEMENT

ಚಾಮರಾಜನಗರ: ಗೌರಿ ಬಾಗಿನ ಮೊರಗಳ ಚಿತ್ತಾರ

ಮಹಿಳೆಯರಿಗೆ ತವರು ಮನೆಯಿಂದ ದೊರೆಯುವ ಬಾಗಿನ ಉಡುಗೊರೆಯೇ ಶ್ರೇಷ್ಠ

ಬಾಲಚಂದ್ರ ಎಚ್.
Published 26 ಆಗಸ್ಟ್ 2025, 2:48 IST
Last Updated 26 ಆಗಸ್ಟ್ 2025, 2:48 IST
ಚಾಮರಾಜನಗರದ ಮೇದಾರ ಬೀದಿಯಲ್ಲಿ ಬಾಗಿನ ಮೊರಗಳ ತಯಾರಿಕೆಯಲ್ಲಿ ತೊಡಗಿರುವ ಮಾದೇವಿ
ಪ್ರಜಾವಾಣಿ ಚಿತ್ರ: ಸಿ.ಆರ್.ವೆಂಕಟರಾಮು
ಚಾಮರಾಜನಗರದ ಮೇದಾರ ಬೀದಿಯಲ್ಲಿ ಬಾಗಿನ ಮೊರಗಳ ತಯಾರಿಕೆಯಲ್ಲಿ ತೊಡಗಿರುವ ಮಾದೇವಿ ಪ್ರಜಾವಾಣಿ ಚಿತ್ರ: ಸಿ.ಆರ್.ವೆಂಕಟರಾಮು   

ಚಾಮರಾಜನಗರ: ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಗೌರಿ ಹಬ್ಬದಲ್ಲಿ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ಮರೆಯಾಗುತ್ತಿದ್ದರೂ, ಬಾಗಿನ ಮೊರ ತಯಾರಿಸುವ ಕಾಯಕವನ್ನು ಜತನದಿಂದ ಮುಂದುವರಿಸಿಕೊಂಡು ಬಂದಿದೆ ಮೇದಾರ ಸಮುದಾಯ.

ನಗರದ ಮೇದಾರ ಓಣಿಯಲ್ಲಿರುವ 50ಕ್ಕೂ ಹೆಚ್ಚು ‌ಕುಟುಂಬಗಳು ತಲೆ ತಲಾಂತರಗಳಿಂದ ಬಾಗಿನ ಮೊರಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿದ್ದು, ಸಂಸ್ಕೃತಿ– ಪರಂಪರೆಯ ಉಳಿವಿಗೆ ಶ್ರಮಿಸುತ್ತಿದೆ. ಬಿದಿರಿನಿಂದ ಒಪ್ಪ ಓರಣವಾಗಿ ಹೆಣೆದಿರುವ ಮೊರಗಳು ಮೇದಾರ ಗಲ್ಲಿಯ ತುಂಬೆಲ್ಲ ಗಮನ ಸೆಳೆಯುತ್ತಿವೆ. ಹಬ್ಬದ ಸಂಭ್ರಮವೂ

ಗೌರಿ ಹಬ್ಬದ ದಿನ ಸಹೋದರಿಯರನ್ನು ತವರಿಗೆ ಕರೆಸಿ ಬಾಗಿನ ಕೊಡುವ ಸಂಪ್ರದಾಯ ಗ್ರಾಮಾಂತರ ಭಾಗಗಳಲ್ಲಿ ಗಟ್ಟಿಯಾಗಿದೆ. ತವರು ಮನೆಯಿಂದ ದೊರೆಯುವ ಬಾಗಿನ ಉಡುಗೊರೆಯನ್ನು ಅತ್ಯಂತ ಶ್ರೇಷ್ಠ ಎಂದೇ ಭಾವಿಸಲಾಗುತ್ತದೆ.

ADVERTISEMENT

ತವರಿನ ಜೊತೆಗಿನ ಬಂಧ ನ್ನು ಗಟ್ಟಿಗೊಳಿಸುವ, ಸಹೋದರ–ಸಹೋದರಿಯರ ನಡುವಿನ ಬಾಂಧವ್ಯ ವೃದ್ಧಿಸುವ ಬಾಗಿನ ಸಂಪ್ರದಾಯ ಹಬ್ಬದ ಸಂಭ್ರಮವನ್ನು ದುಪಟ್ಟುಗೊಳಿಸುತ್ತದೆ. ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಬಾಗಿನ ಸಂಪ್ರದಾಯದ ಉಳಿವಿಗೆ ಮೇದಾರ ಸಮುದಾಯದ ಕೊಡುಗೆಯೂ ದೊಡ್ಡದು.

ಬೇಸರ: ಬಿದಿರಿನ ಅಲಭ್ಯತೆ, ಕಚ್ಛಾವಸ್ತುಗಳ ದರ ಏರಿಕೆ, ಸಾಗಾಟ ವೆಚ್ಚ ಹೆಚ್ಚಳ, ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ಮೊರಗಳ ಹಾವಳಿ ಸೇರಿದಂತೆ ಹಲವು ಸವಾಲುಗಳು ಎದುರಾಗಿದ್ದು ವೃತ್ತಿ ನಿಭಾಯಿಸುವುದೇ ಕಷ್ಟವಾಗಿದೆ. ಒಂದು ಜೊತೆ ಮೊರಗಳ ತಯಾರಿಕೆಗೆ ₹ 100 ಖರ್ಚು ತಗಲುತ್ತಿದ್ದು, ದಿನಪೂರ್ತಿ ದುಡಿದರೂ ಲಾಭ ನೋಡಲಾಗುತ್ತಿಲ್ಲ.

‘ಕಚ್ಛಾವಸ್ತು, ಸಾಗಾಟ ವೆಚ್ಚ, ಕೂಲಿ ದರ ಹೆಚ್ಚಾದರೂ ಮೊರಗಳ ದರ ಹೆಚ್ಚಳ ಮಾಡಿಲ್ಲ. ಕಳೆದ ವರ್ಷದಂತೆ ಜೊತೆ ಮರಕ್ಕೆ ₹120 ರಿಂದ ₹150 ಬೆಲೆ ನಿಗದಿ ಮಾಡಿದ್ದರೂ ಗ್ರಾಹಕರು ಖರೀದಿಗೆ ಆಸಕ್ತಿ ತೋರುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಬಾಗಿನ ಮೊರಗಳ ಬೇಡಿಕೆ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ’ ಮೇದಾರ ಓಣಿಯ ಮಾದೇವಿ.

ಬಿದಿರಿನ ಮೊರಗಳಿಗೆ ವರ್ಷಪೂರ್ತಿ ಬೇಡಿಕೆ ಇರುವುದಿಲ್ಲ, ಗೌರಿ ಹಬ್ಬದ ಸಂದರ್ಭ ಮಾತ್ರ ಮಾರಾಟವಾಗುತ್ತದೆ. ಕಳೆದ ವರ್ಷ 400 ಜೋಡಿ ಮೊರಗಳನ್ನು ಮಾರಾಟ ಮಾಡಿದ್ದೆವು. ಈ ವರ್ಷ 100 ಜೊತೆ ಮೊರಗಳು ಮಾತ್ರ ಮಾರಾಟವಾಗಿವೆ ಎಂದರು.

ಮಾರುಕಟ್ಟೆಗೆ ಬಗೆ ಬಗೆಯ, ಹಲವು ಮಾದರಿಯ ಪ್ಲಾಸ್ಟಿಕ್ ಮೊರಗಳು ಲಗ್ಗೆಯಿಟ್ಟಿರುವ ಪರಿಣಾಮ ಬಿದಿರಿನ ಮೊರಗಳಿಗೆ ಬೇಡಿಕೆ ಕಡಿಮೆಯಾಗಿದೆ. ಈಚೆಗೆ ಆರ್ಥಿಕವಾಗಿ ಸ್ಥಿತಿವಂತರಾಗಿರುವವರು ದೊಡ್ಡ ಸ್ಟೀಲ್ ತಟ್ಟೆಗಳಲ್ಲಿ ಬಾಗಿನ ಕೊಡುತ್ತಿದ್ದಾರೆ. ಬಿದಿರಿನ ಬಾಗಿನ ಮೊರಗಳು ಕಳೆಗುಂದುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿದಿರಿನ ಮೊರಗಳಲ್ಲಿ ಬಾಗಿನ ಅರ್ಪಿಸುವುದು ಶ್ರೇಷ್ಠ ಎಂಬ ಭಾವನೆ ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿದ್ದು, ನಗರಗಳಲ್ಲೂ ಸಂಪ್ರದಾಯ ಪಾಲನೆಯಾಗಬೇಕು. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮೊರಗಳನ್ನು ಬಿಟ್ಟು ಪರಿಸರ ಸ್ನೇಹಿ ಬಿದಿರಿನ ಬಾಗಿನ ಮೊರಗಳನ್ನು ಖರೀದಿಸಬೇಕು ಎಂದು ಮನವಿ ಮಾಡಿದರು.

ಬಿದಿರು ಅಲಭ್ಯ

ದಶಕಗಳ ಹಿಂದೆ ಜಿಲ್ಲೆಯಲ್ಲೇ ಸಾಕಷ್ಟು ಬಿದಿರು ಲಭ್ಯವಾಗುತ್ತಿತ್ತು. ಬಾಗಿನ ಮೊರಗಳಿಗೆ ಬೇಡಿಕೆಯೂ ಹೆಚ್ಚಾಗಿತ್ತು. ಈಗ ಸ್ಥಳೀಯವಾಗಿ ಬಿದಿರು ಲಭ್ಯವಾಗುತ್ತಿಲ್ಲ. ಕೊಡಗಿನಿಂದ ಬಿದಿರು ತರಿಸಿಕೊಂಡು ಮೊರ ಹೆಣೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಬಿದಿರಿನ ದರ ಹೆಚ್ಚಾದರೂ ತಲೆತಲಾಂತರದಿಂದ ಬಂದಿರುವ ಕಾಯಕ ಮುಂದುವರಿಸಲು ಅನಿವಾರ್ಯವಾಗಿ ವೃತ್ತಿ ನಿಭಾಯಿಸುತ್ತಿದ್ದೇವೆ ಎನ್ನುವರು ಮೊರ ತಯಾರಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.