ADVERTISEMENT

ಚಾಮರಾಜನಗರ | ಅತ್ಯಾಚಾರ ಪ್ರಕರಣ: 7 ಮಂದಿಗೆ 10 ವರ್ಷ ಶಿಕ್ಷೆ

ಕೃತ್ಯಕ್ಕೆ ಸಹಕರಿಸಿದ ಆರು ಮಂದಿಗೂ ಸೆರೆ ವಾಸ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 16:21 IST
Last Updated 31 ಜನವರಿ 2023, 16:21 IST
ಮಹಮದ್ ಮೀನಜ್ ಖಾನ್
ಮಹಮದ್ ಮೀನಜ್ ಖಾನ್   

ಚಾಮರಾಜನಗರ: ಪ್ರೀತಿಸುವ ನಾಟಕವಾಡಿ ಬಾಲಕಿಯನ್ನು ಅಪಹರಿಸಿ, ಆಕೆ ಮೇಲೆ ಅತ್ಯಾಚಾರ ಎಸಗಿದ ಯುವಕ ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ ಆರು ಮಂದಿಗೆ ತಲಾ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ನಗರದ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷ‌ನ್ಸ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

ನಗರದ ಕ್ರಿಶ್ಚಿಯನ್ ಕಾಲೊನಿ ನಿವಾಸಿ ಮಹಮದ್ ಮೀನಜ್ ಖಾನ್ (24) ಅತ್ಯಾಚಾರ ಎಸಗಿ ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಕೃತ್ಯಕ್ಕೆ ನೆರವಾದ ನಗರದ ಎ.ಪಿ.ಮೊಹಲ್ಲಾ ನಿವಾಸಿ ಸಲ್ಮಾನ್ ಖಾನ್ (24), ಮಂಡ್ಯದ ಶಾರುಖ್ ಖಾನ್ (22), ಬೆಂಗಳೂರಿನ ಬೊಮ್ಮನಹಳ್ಳಿಯ ವಹೀದ್ ಅಹಮದ್ (18), ಮಂಡ್ಯದ ವಿ.ವಿ ಬಡಾವಣೆಯ ಮಹಮದ್ ಅಮೀರ್ (24), ನಗರದ ಕ್ರಿಶ್ಚಿಯನ್ ಕಾಲೊನಿ ನಿವಾಸಿ ಮುಸ್ತಾಖಿಮ್ ಖಾನ್ (28) ಮತ್ತು ಮೈಸೂರಿನ ಶಾಂತಿ ನಗರದ ಸಯ್ಯದ್ ಉಮರ್ (29) ಶಿಕ್ಷೆಗೆ ಗುರಿಯಾಗಿರುವವರು.

ADVERTISEMENT

2016ರಲ್ಲಿ ಈ ಪ್ರಕರಣ ನಡೆದಿದೆ. ಮೊದಲ ಆರೋಪಿಯಾಗಿದ್ದ ಮೀನಜ್‌ಖಾನ್ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ, ಮೊಬೈಲ್‌ನಲ್ಲಿ ಆಕೆಯ ಖಾಸಗಿ ಫೋಟೊಗಳನ್ನು ಸೆರೆ ಹಿಡಿದಿದ್ದ. ತನ್ನ ಜೊತೆ ಬಾರದೇ ಹೋದರೆ, ಫೋಟೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಅಪಹರಿಸಿಕೊಂಡು ಹೋಗಿದ್ದ. ಇತರ ಆರೋಪಿಗಳ ಸಹಕಾರದಿಂದ ಆಕೆ ಮೇಲೆ ಅತ್ಯಾಚಾರ ಎಸಗಿದ್ದ. ಮಗಳ ಅಪಹರಣದ ಬಗ್ಗೆ ಬಾಲಕಿಯ ತಂದೆ ಪಟ್ಟಣ ಠಾಣೆಗೆ ದೂರು ನೀಡಿದ್ದರು.

ಆಗ ಇನ್‌ಸ್ಪೆಕ್ಟರ್ ಆಗಿದ್ದ ಆರ್.ಶ್ರೀಕಾಂತ್ (ಈಗ ಚಾಮರಾಜನಗರ ಪೂರ್ವ ಠಾಣೆಯಲ್ಲಿದ್ದಾರೆ) ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.

ಮೊದಲ ಆರೋಪಿ ಹಾಗೂ ಇತರ ಆರು ಮಂದಿಯ ಮೇಲಿನ ಆರೋಪ ಸಾಬೀತಾಗಿರುವುದರಿಂದ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಎ.ಸಿ.ನಿಶಾರಾಣಿ ಅಪರಾಧಿಗಳಿಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿ, ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಮಹಮದ್ ಮೀನಜ್ ಖಾನ್‌ಗೆ ಜೈಲು ಶಿಕ್ಷೆಯ ಜೊತೆಗೆ ₹ 20 ಸಾವಿರ ದಂಡ ವಿಧಿಸಲಾಗಿದೆ. ಎರಡನೇ ಆರೋಪಿಗೆ ಕಾರಾಗೃಹ ಶಿಕ್ಷೆಯ ಜೊತೆಗೆ ₹ 10 ಸಾವಿರ ದಂಡ, ಉಳಿದ ಐವರಿಗೆ ತಲಾ ₹ 5 ಸಾವಿರ ದಂಡವನ್ನೂ ನ್ಯಾಯಾಧೀಶರು ವಿಧಿಸಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸಂತ್ರಸ್ತ ಬಾಲಕಿಗೆ 30 ದಿನದೊಳಗಾಗಿ ₹ 2 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಹೇಳಿದ್ದಾರೆ.

ಪ್ರಾಸಿಕ್ಯೂಷನ್ ಪರವಾಗಿ ಕೆ.ಯೋಗೇಶ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.