ADVERTISEMENT

ಗುಡ್‌ ಫ್ರೈಡೆ: ಮನೆಗಳಲ್ಲೇ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 14:35 IST
Last Updated 10 ಏಪ್ರಿಲ್ 2020, 14:35 IST
ಚಾಮರಾಜನಗರದ ಸೇಂಟ್ ಪೌಲ್‌ ಚರ್ಚ್‌ನ ಧರ್ಮಗುರು ಜೋಸೆಫ್‌ ಮರಿ ಅವರು ತಮ್ಮ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು
ಚಾಮರಾಜನಗರದ ಸೇಂಟ್ ಪೌಲ್‌ ಚರ್ಚ್‌ನ ಧರ್ಮಗುರು ಜೋಸೆಫ್‌ ಮರಿ ಅವರು ತಮ್ಮ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು   

ಚಾಮರಾಜನಗರ/ಕೊಳ್ಳೇಗಾಲ: ಕೊರೊನಾ ವೈರಸ್‌ ತಡೆಗಾಗಿ ಹೇರಲಾಗಿರುವ ದಿಗ್ಬಂಧನದಿಂದಾಗಿ ಜಿಲ್ಲೆಯಾದ್ಯಂತ ಕ್ರಿಶ್ಚಿಯನ್ನರು ಶುಕ್ರವಾರ ಶುಭ ಶುಕ್ರವಾರವನ್ನು (ಗುಡ್‌ ಫ್ರೈಡೆ) ಅತ್ಯಂತ ಸರಳವಾಗಿ ಮನೆಗಳಲ್ಲೇ ಆಚರಿಸಿದರು.

ದಿಗ್ಬಂಧನದಿಂದಾಗಿ ಸಾಮೂಹಿಕವಾಗಿ ಪ್ರಾರ್ಥನೆ ನಡೆಸಲು ನಿರ್ಬಂಧವಿರುವುದರಿಂದ ಮನೆ ಮನೆಗಳಲ್ಲೇ ಪ್ರಾರ್ಥನೆ ಮಾಡುವಂತೆ ಬಿಷಪ್‌ ಅವರು ಸೂಚಿಸಿದ್ದರು. ಜಿಲ್ಲೆಯ ಎಲ್ಲ ಚರ್ಚ್‌ಗಳನ್ನು ಮುಚ್ಚಲಾಗಿತ್ತು. ಹಾಗಾಗಿ, ಎಲ್ಲರೂ ಮನೆಗಳಲ್ಲೇ ಪ್ರಾರ್ಥನೆ ನಡೆಸಿದರು. ದೇವರ ವಿಶೇಷ ಗೀತೆಗಳು, ಆರಾಧನೆಯನ್ನು ಮನೆಗಳಲ್ಲೇ ಮಾಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದ್ದರಿಂದ ಸ್ನೇಹಿತರು ಹಾಗೂ ಸಂಬಂಧಿಕರನ್ನೂ ಮನೆಗೆ ಆಹ್ವಾನಿಸಿರಲಿಲ್ಲ.

ಬಹುತೇಕರು40 ದಿನಗಳ ಕಾಲ ಉಪವಾಸ ಪ್ರಾರ್ಥನೆ ಮಾಡಿ ಶುಕ್ರವಾರ ವಿಶೇಷ ಪ್ರಾರ್ಥನೆಯನ್ನು ನಡೆಸಿದರು. ಏಸುಕ್ರಿಸ್ತಶಿಲುಬೆಯಲ್ಲಿ ನುಡಿದ ಕೊನೆಯ ಏಳು ಮಾತುಗಳನ್ನು ಧ್ಯಾನಿಸಿದರು. ಬೆಳಗ್ಗೆಯಿಂದ ಉಪವಾಸವಿದ್ದು ಪ್ರಾರ್ಥನೆ ಮುಗಿದ ನಂತರ ತಯಾರಿಸಿದ್ದ ಆಹಾರವನ್ನು ಸೇವಿಸಿದರು.

ADVERTISEMENT

ಗುಡ್ ಫ್ರೈಡೆ ಆಚರಣೆಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಾಮರಾಜನಗರದ ಸೇಂಟ್‌ ಪೌಲ್ ಚರ್ಚ್‌ನ ಧರ್ಮಗುರು ಜೋಸೆಫ್‌ ಮರಿ ಅವರು, ‘ಕೊರೊನಾ ಕಾರಣಕ್ಕೆ ದಿಗ್ಬಂಧನ ಹೇರಲಾಗಿರುವುದರಿಂದ ಚರ್ಚ್‌ಗಳನ್ನು ತೆರೆಯಬಾರದು, ಭಕ್ತರು ಅಲ್ಲಿಗೆ ಬರಬಾರದು, ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಬೇಕು ಎಂದು ಧರ್ಮಾಧ್ಯಕ್ಷರು ಆದೇಶ ಹೊರಡಿಸಿದ್ದರು. ಅದರಂತೆ ಎಲ್ಲರೂ ಅವರರವರ ಮನೆಗಳಲ್ಲಿ ಪ್ರಾರ್ಥನೆ ನಡೆಸಿದ್ದಾರೆ. ಮನೆಗಳಲ್ಲೂ ಗುಂಪು ಗುಂಪಾಗಿ ಸೇರಬಾರದು ಎಂದೂ ಸೂಚಿಸಲಾಗಿತ್ತು.ಸಮುದಾಯದ ವಿವಿಧ ಧರ್ಮಗುರುಗಳು ಮಾಡುವ ಪ್ರಾರ್ಥನೆಯನ್ನು ಯೂಟ್ಯೂಬ್‌ ಮೂಲಕ ನೇರ ಪ್ರಸಾರ ಮಾಡಲಾಗಿದ್ದು, ಅದನ್ನು ನೋಡುತ್ತಾ ಪ್ರಾರ್ಥನೆ ಸಲ್ಲಿಸಿದವರೂ ಇದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.