ADVERTISEMENT

ಸೋಮವಾರ ರಾತ್ರಿ ಜಿಲ್ಲೆಯಲ್ಲಿ ಉತ್ತಮ ಮಳೆ

ಚಾಮರಾಜನಗರ, ಸಂತೇಮರಹಳ್ಳಿ, ಹನೂರಿನಲ್ಲಿ ಅತಿ ಹೆಚ್ಚು ಮಳೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 15:03 IST
Last Updated 1 ಸೆಪ್ಟೆಂಬರ್ 2020, 15:03 IST
ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಯಳಂದೂರು ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ನೀರು ನಿಂತಿರುವುದು
ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಯಳಂದೂರು ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ನೀರು ನಿಂತಿರುವುದು   

ಚಾಮರಾಜನಗರ: ಕೆಲವು ವಾರಗಳಿಂದ ದೂರವಾದ ಮಳೆ ಮತ್ತೆ ಜಿಲ್ಲೆಯಲ್ಲಿ ಸುರಿಯಲು ಆರಂಭಿಸಿದೆ. ಸೋಮವಾರ ರಾತ್ರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

ಆಗಸ್ಟ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರಲಿಲ್ಲ. ಮಳೆಯನ್ನೇ ಆಶ್ರಯಿಸಿ ಬಿತ್ತನೆ ಮಾಡಿದ್ದ ರೈತರು ಕೊನೆಯ ಹಂತದಲ್ಲಿ ಮಳೆ ಬಾರದೇ ಇದ್ದುದರಿಂದ ಕಂಗಾಲಾಗಿದ್ದರು. ಕೆಲವು ಕಡೆಗಳಲ್ಲಿ ಬೆಳೆ ನಿಧಾನವಾಗಿ ಬಾಡಲು ಆರಂಭಿಸಿತ್ತು. ಭಾನುವಾರ ಜಿಲ್ಲೆಯ ಕೆಲವು ಕಡೆಗಳಲ್ಲಿ ಮಳೆಯಾಗಿತ್ತು. ಸೋಮವಾರ ಎಲ್ಲ ಕಡೆಗಳಲ್ಲೂ ವರ್ಷಧಾರೆಯಾಗಿದೆ.

ಸೋಮವಾರ ಬೆಳಿಗ್ಗೆ 8.30ರಿಂದ ಮಂಗಳವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 3.8 ಸೆಂ.ಮೀನಷ್ಟು ಮಳೆಯಾಗಿದೆ. ಚಾಮರಾಜನಗರ ನಗರ ತಾಲ್ಲೂಕಿನಲ್ಲಿ 4.8 ಸೆಂ.ಮೀ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 3.3 ಸೆಂ.ಮೀ, ಕೊಳ್ಳೇಗಾಲ ತಾಲ್ಲೂಕಿನಲ್ಲಿ 4.4 ಸೆಂ.ಮೀ, ಯಳಂದೂರು ತಾಲ್ಲೂಕಿನಲ್ಲಿ 3.9 ಸೆಂ.ಮೀ ಹಾಗೂ ಹನೂರು ತಾಲ್ಲೂಕಿನಲ್ಲಿ 3.8 ಸೆ.ಮೀ ಮಳೆ ಬಿದ್ದಿದೆ.

ADVERTISEMENT

ಚಾಮರಾಜನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ, 6.5 ಸೆಂ.ಮೀ ಮಳೆಯಾಗಿದೆ. ಸಂತೇಮರಹಳ್ಳಿ ಹೋಬಳಿ ಹಾಗೂ ಹನೂರು ಹೋಬಳಿಯಲ್ಲಿ ತಲಾ 6.1 ಸೆ.ಮೀ ಮಳೆ ಸುರಿದಿದೆ.

ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ 7.2 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 7 ಸೆಂ.ಮೀ ಆಗಿದೆ.

ನೈರುತ್ಯ ಮುಂಗಾರು ಆರಂಭದಿಂದ ಅಂದರೆ ಜೂನ್‌ 1ರಿಂದ ಸೆಪ್ಟೆಂಬರ್‌ 1‌ರವರೆಗೆ ಜಿಲ್ಲೆಯಲ್ಲಿ 31.7 ಸೆಂ.ಮೀ ಮಳೆಯಾಗಿದೆ. ವಾಡಿಕೆಯಲ್ಲಿ 19.7 ಸೆಂ.ಮೀ ಮಳೆಯಾಗಿತ್ತು.

ಸೋಮವಾರ ರಾತ್ರಿ ಯಳಂದೂರು ಸೇರಿದಂತೆ ಕೆಲವು ಕಡೆಗಳಲ್ಲಿ ಗಾಳಿ ಸಹಿತ ಮಳೆಯಾಗಿದೆ. ಹೀಗಾಗಿ ಕಬ್ಬು, ಭತ್ತದ ಪೈರುಗಳು ವಾಲಿವೆ. ಭಾರಿ ಮಳೆಯಿಂದಾಗಿ ಕೃಷಿ ಜಮೀನುಗಳಲ್ಲಿ ನೀರು ನಿಂತುಕೊಂಡಿವೆ. ಕೆರೆ ಕಟ್ಟೆಗಳಿಗೂ ನೀರು ಹರಿದಿದೆ.

ಇನ್ನಷ್ಟು ಮಳೆ: ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಇನ್ನೂ ಐದು ದಿನಗಳ ಕಾಲ ಜಿಲ್ಲೆಯಾದ್ಯಂತ ಮಳೆಯಾಗಲಿದೆ. ಎರಡು ಮೂರು ದಿನ 2.5 ಸೆಂ.ಮೀನಿಂದ ಮೂರು ಸೆಂ.ಮೀವರೆಗೂ ಮಳೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.