ADVERTISEMENT

ಬಂಡೀಪುರ | ಉತ್ತಮ ಮಳೆ: ಸಫಾರಿ ವಲಯದಲ್ಲಿ ಪ್ರಾಣಿಗಳ ದರ್ಶನ

ಮಲ್ಲೇಶ ಎಂ.
Published 11 ಏಪ್ರಿಲ್ 2025, 4:34 IST
Last Updated 11 ಏಪ್ರಿಲ್ 2025, 4:34 IST
<div class="paragraphs"><p>ಚಿರತೆ</p></div>

ಚಿರತೆ

   

ಗುಂಡ್ಲುಪೇಟೆ: ಬೇಸಿಗೆ ಬಿಸಿಲ ತಾಪಕ್ಕೆ ಬಳಲಿ ಬೆಂಡಾಗಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಸಿರು ಚಿಗುರಿ ಪ್ರಾಣಿಗಳ ದರ್ಶನ ಹೆಚ್ಚಾಗಿದೆ.

ಒಂದು ತಿಂಗಳ ಅವಧಿಯಲ್ಲಿ ಕಾಡಿನ ಭಾಗದಲ್ಲಿ ನಾಲ್ಕು ಬಾರಿ ರಭಸದ ಮಳೆಯಾಗಿದೆ. ಕಾಡ್ಗಿಚ್ಚಿನ ಆತಂಕ ದೂರ ಮಾಡಿರುವ ಜೊತೆಗೆ ಒಣಗಿದ್ದ ಕಾಡೆಲ್ಲಾ ಚಿಗುರತೊಡಗಿದೆ. ಪ್ರಾಣಿಗಳಿಗೆ ಮೇವು ಹಾಗೂ ನೀರು ಸಮೃದ್ಧವಾಗಿ  ದೊರೆಯತ್ತಿರುವುದರಿಂದ ಪ್ರಾಣಿಗಳು ರಾಷ್ಟ್ರೀಯ ಹೆದ್ದಾರಿ ಬದಿ ಹಾಗೂ ಸಫಾರಿ ವಲಯದಲ್ಲಿ ಕಾಣಸಿಗುತ್ತಿವೆ.

ADVERTISEMENT

ಸಫಾರಿ ವಲಯದಲ್ಲಿ ಹೆಚ್ಚು ಕೆರೆಗಳಿವೆ. ಹಾಗಿದ್ದರೂ ಕೆಲ ತಿಂಗಳಿಂದ ಪ್ರಾಣಿಗಳು ಪ್ರವಾಸಿಗರ ಕಣ್ಣಿಗೆ ಬೀಳುತ್ತಿರಲಿಲ್ಲ.  ಈಗ ಆನೆಗಳ ಹಿಂಡು, ಕಾಡೆಮ್ಮೆ, ಜಿಂಕೆ, ಕರಡಿ, ಚಿರತೆ ಹಾಗೂ ಕೆಲವೊಮ್ಮೆ ಹುಲಿ ಸಹ ಕಾಣಿಸಿಕೊಂಡು ಪ್ರವಾಸಿಗರಲ್ಲಿ ಖುಷಿ ಹೆಚ್ಚಿಸಿದೆ.

 ಪ್ರವಾಸಿಗರು ಸಫಾರಿಗೆ ಹೋಗಿ ಪ್ರಾಣಿಗಳನ್ನು ನೋಡಿ ಕಣ್ತುಂಬಿಕೊಳ್ಳುವುದರ ಜೊತೆಗೆ ಕ್ಯಾಮರಾಗಳಲ್ಲೂ ಅವುಗಳನ್ನು ಸೆರೆ ಹಿಡಿದಿದ್ದಾರೆ. ಸಫಾರಿ ವಲಯಗಳಾದ ತಾವರಕಟ್ಟೆ ಕೆರೆ, ಟೈಗರ್ ರೋಡ್, ವೆಸ್ಲಿ ರೋಡ್, ಮೂಲಾಪುರ, ಕಡಬನಕಟ್ಟೆ, ಹೊಳ್ಕಲ್ ಕೆರೆ ರಸ್ತೆ, ಬಸವನಕಟ್ಟೆ, ಅರಳಿ ಕಟ್ಟೆ ಮತ್ತು ಮರಳಹಳ್ಳ ಭಾಗಗಳಲ್ಲಿ ಕೆರೆ ಕಟ್ಟೆಗಳಿದ್ದು ಈ ಪ್ರದೇಶದಲ್ಲಿ ವನ್ಯಜೀವಿಗಳು ಹೆಚ್ಚು ಸುಳಿದಾಡುತ್ತಿವೆ.

ಕೆರೆ ಕಟ್ಟೆಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹುಲಿ, ಕೆರೆ ನೀರಿನಲ್ಲಿ ಆಟವಾಡುತ್ತಿರುವ ಈ ರೀತಿ ಪ್ರಾಣಿಗಳು ಕೂಡಾ ಪ್ರವಾಸಿಗರಿಗೆ ಕಂಡಿವೆ. ಬಂಡೀಪುರ– ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳ ಹಿಂಡು ಸದಾ ಕಾಣಸಿಗುತ್ತಿದೆ.

‘ಸಫಾರಿಗೆ ರಜೆ ಇರುವುದರಿಂದ ಹೆಚ್ಚು ಜನರು ಬರುವುದರಿಂದ ವಾರಾಂತ್ಯದಲ್ಲಿ ಅನೇಕರಿಗೆ ಟಿಕೆಟ್ ಸಿಗದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಡಿ ಭಾಗದ ಚೆಕ್ ಪೋಸ್ಟ್‌‌‌ವರೆಗೆ ಹೋಗಿ ಬರುತ್ತಾರೆ. ಅಂತಹವರಿಗೆ ಹೆಚ್ಚಾಗಿ ಪ್ರಾಣಿಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಸಫಾರಿ ಚಾಲಕರೊಬ್ಬರು ತಿಳಿಸಿದರು.

‘ಬೇಸಿಗೆ ರಜೆ ಇರುವುದರಿಂದ ಬಂಡೀಪುರಕ್ಕೆ ಪ್ರವಾಸಿಗರು ಹೆಚ್ಚಾಗಿ ಬರುತ್ತಿದ್ದಾರೆ. ಮಳೆಯಾಗಿರುವುದರಿಂದ ವಾತಾವರಣ ತಂಪಾಗಿದೆ. ಹಾಗಾಗಿ ಹೆಚ್ಚು ಪ್ರಾಣಿಗಳು ಕಾಣಸಿಗುತ್ತಿವೆ. ರಸ್ತೆ ಬದಿಯಲ್ಲಿ ಪ್ರಾಣಿಗಳು ಕಂಡರೆ ಸೆಲ್ಫಿ ತೆಗೆದುಕೊಳ್ಳುವುದು, ಪ್ರಾಣಿಗಳಿಗೆ ಗಾಬರಿ ಮಾಡುವ ಚಟುವಟಿಕೆ ಮಾಡಬಾರದು ಎಂದು ಪ್ರವಾಸಿಗರಿಗೆ ಮನವರಿಕೆ ಮಾಡಲಾಗುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ನವೀನ್‌‌‌‌‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಆನೆ
ಗರಿಬಿಚ್ಚಿದ ನವಿಲು
ಹುಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.