ADVERTISEMENT

ಗೋಪಿನಾಥಂ: ಬಾರದ ಮಳೆ, ತುಂಬದ ಅಣೆಕಟ್ಟೆ

ಬೇಸಿಗೆಯಲ್ಲಿ ಜಲಾಶಯದ ನೀರನ್ನೇ ಅವಲಂಬಿಸಿರುವ ಬಹುತೇಕ ರೈತರು

ಸೂರ್ಯನಾರಾಯಣ ವಿ
Published 27 ನವೆಂಬರ್ 2020, 19:30 IST
Last Updated 27 ನವೆಂಬರ್ 2020, 19:30 IST
ಗೋಪಿನಾಥಂ ಅಣೆಕಟ್ಟೆಯಲ್ಲಿ ಇನ್ನೂ ತಳಮಟ್ಟದಲ್ಲೇ ನೀರಿದೆ
ಗೋಪಿನಾಥಂ ಅಣೆಕಟ್ಟೆಯಲ್ಲಿ ಇನ್ನೂ ತಳಮಟ್ಟದಲ್ಲೇ ನೀರಿದೆ   

ಚಾಮರಾಜನಗರ: ಜಿಲ್ಲೆಯ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಈ ಬಾರಿ ಹಿಂಗಾರು ಅವಧಿಯಲ್ಲಿ ಮಳೆ ಕಡಿಮೆಯಾಗಿದ್ದು, ಗಡಿ ಭಾಗ ಗೋಪಿನಾಥಂ‌ನಲ್ಲಿರುವ ಅಣೆಕಟ್ಟೆಗೆ ನೀರು ಹರಿದು ಬಂದಿಲ್ಲ. ನೀರು ಈಗಲೂ ತಳ ಮಟ್ಟದಲ್ಲಿದ್ದು, ಕೃಷಿಗೆ ಅಣೆಕಟ್ಟೆಯ ನೀರನ್ನೇ ನಂಬಿರುವ ಗಡಿ ಭಾಗದ ಜನರಲ್ಲಿ ಆತಂಕ ಉಂಟಾಗಿದೆ.

ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ಈ ಅಣೆಕಟ್ಟು 45 ಹೆಕ್ಟೇರ್‌ ವಿಸ್ತೀರ್ಣ, 18.17 ಅಡಿ ಆಳ ಇದೆ. 70.63 ಘನ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಅಣೆಕಟ್ಟೆ, 350 ಹೆಕ್ಟೇರ್‌ ಕೃಷಿ ಭೂಮಿಗೆ ನೀರುಣಿಸುತ್ತದೆ.

ಕಳೆದ ವರ್ಷ ಈ ವೇಳೆಗೆ ಅಣೆಕಟ್ಟು ಕೋಡಿ ಬಿದ್ದಿತ್ತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ನವೆಂಬರ್‌ 19ರಂದು ಭರ್ತಿಯಾದ ಅಣೆಕಟ್ಟೆಗೆ ಬಾಗಿನ ಅರ್ಪಿಸಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಅಕ್ಟೋಬರ್‌– ನವೆಂಬರ್‌ ಅವಧಿಯಲ್ಲಿ ಕಡಿಮೆ ಮಳೆಯಾಗಿದೆ.

ADVERTISEMENT

ಹಲವು ಬೆಳೆ:ಗೋಪಿನಾಥಂ ಗ್ರಾಮದಲ್ಲಿ 8,000 ಸಾವಿರ ಜನಸಂಖ್ಯೆ ಇದೆ. ಅಂದಾಜು 1,000 ಕುಟುಂಬಗಳು ವ್ಯವಸಾಯದಲ್ಲಿ ತೊಡಗಿವೆ. ಜೋಳ, ಕಬ್ಬು, ಅರಿಸಿನ, ಕಡಲೆ, ಬಾಳೆ ಸೇರಿದಂತೆ ಹಲವು ಬೆಳೆಗಳನ್ನು ಇಲ್ಲಿನ ರೈತರು ಬೆಳೆಯುತ್ತಾರೆ.

ಗ್ರಾಮದಲ್ಲಿ ಕೊಳವೆ ಬಾವಿಗಳ ಸಂಖ್ಯೆ ಕಡಿಮೆ. ಪಕ್ಕದಲ್ಲೇ ಕಾವೇರಿ ನದಿ ಹರಿಯುತ್ತಿರುವುದರಿಂದ ಬಾವಿಗಳಲ್ಲಿ ನೀರು ಲಭ್ಯವಿರುತ್ತದೆ. ಹಾಗಾಗಿ ಬಾವಿಗಳು ಹೆಚ್ಚು ಇವೆ.ಹೆಚ್ಚಿನ ರೈತರು ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ನೀರಿನ ಕೊರತೆ ಉಂಟಾದಾಗ ಬಾವಿ ನೀರನ್ನು ಕೃಷಿಗೆ ಬಳಸುತ್ತಾರೆ. ಕಡು ಬೇಸಿಗೆಯಲ್ಲಿ ಅಣೆಕಟ್ಟೆಯ ನೀರನ್ನು ಹರಿಸಲಾಗುತ್ತದೆ.

‘ಮಳೆಯನ್ನೇ ನಂಬಿ ಹೆಚ್ಚಿನ ರೈತರು ವ್ಯವಸಾಯ ಮಾಡುತ್ತಾರೆ. ಕಬ್ಬು, ಅರಿಸಿನ ಬೆಳೆಯುವವರೂ ಇದ್ದಾರೆ. ಈಗ ಹೆಚ್ಚಿನವರು ಜೋಳ ಹಾಕಿದ್ದಾರೆ. ಈ ಸಮಯದಲ್ಲಿ ಕಡಲೆಕಾಯಿ ಬಿತ್ತನೆ ಮಾಡುತ್ತೇವೆ. ನಾನು ಚೆಂಡು ಹೂ ಕೂಡ ಬೆಳೆದಿದ್ದೇನೆ. ಬಾವಿ ನೀರಿನಲ್ಲಿ ಬೆಳೆ ತೆಗೆಯುವವರು ಇದ್ದಾರೆ’ ಎಂದು ಗೋಪಿನಾಥಂನ ಪೆರುಮಾಳ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ ಕಡಿಮೆ: ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಪ್ರದೇಶ ಹಾಗೂ ಕಾವೇರಿ ವನ್ಯಧಾಮದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದರೆ ಅಣೆಕಟ್ಟೆ ತುಂಬುತ್ತದೆ. ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಎರಡು ಮೂರು ವಾರಗಳ ಕಾಲ ಈ ಭಾಗದಲ್ಲಿ ಎಡೆಬಿಡದೆ ಮಳೆಯಾಗಿದ್ದರಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಬಹುಬೇಗ ಭರ್ತಿಯಾಗಿತ್ತು.

ಹನೂರು ತಾಲ್ಲೂಕಿನ ರಾಮಾಪುರ ಹೋಬಳಿ ವ್ಯಾಪ್ತಿಗೆ ಬರುವ ಗೋಪಿನಾಥಂ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂಗಾರು ಅವಧಿಯಲ್ಲಿ ಮಳೆ ಕಡಿಮೆ ಇರುತ್ತದೆ. ಹಿಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗುತ್ತದೆ.

ಈ ಬಾರಿ ಹಿಂಗಾರು ಅವಧಿ ಆರಂಭಗೊಂಡು ಎರಡು ತಿಂಗಳು ಕಳೆಯುತ್ತಾ ಬಂದರೂ ಭಾರಿ ಮಳೆಯಾಗಿಲ್ಲ. ಸಾಮಾನ್ಯವಾಗಿ ಅಕ್ಟೋಬರ್‌ 1ರಿಂದ ನವೆಂಬರ್‌ 25ರ ನಡುವಿನ ಅವಧಿಯಲ್ಲಿ ಹೋಬಳಿಯಲ್ಲಿ 24.9 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 19.9 ಸೆಂ.ಮೀ ಮಳೆ ಬಿದ್ದಿದೆ. ಶೇಕಡವಾರು ಲೆಕ್ಕಾಚಾರದಲ್ಲಿ 20ರಷ್ಟು ಕಡಿಮೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ಕಡಿಮೆಯಾಗಿದೆ. ಹಾಗಾಗಿ ನೀರು ಬಂದಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ.

‘ಬೇಸಿಗೆ ಕಾಲದಲ್ಲಿ ಅಣೆಕಟ್ಟೆ ನೀರನ್ನು ವ್ಯವಸಾಯಕ್ಕಾಗಿ ಬಿಡಲಾಗುತ್ತದೆ. ಈ ವರ್ಷ ನಮ್ಮಲ್ಲಿ ಮಳೆಯಾಗಿಲ್ಲ. ಅಣೆಕಟ್ಟೆಯಲ್ಲಿ ಕಡಿಮೆ ನೀರು ಇದೆ. ಸದ್ಯಕ್ಕೆ ಗ್ರಾಮದಲ್ಲಿ ನೀರಿನ ಕೊರತೆ ಉಂಟಾಗಿಲ್ಲ. ಸದ್ಯ ಕೃಷಿಗೆ ತೊಂದರೆ ಇಲ್ಲ. ಅಣೆಕಟ್ಟೆ ಭರ್ತಿಯಾಗದಿದ್ದರೆ ಬೇಸಿಗೆಯಲ್ಲಿ ಸಮಸ್ಯೆಯಾಗಲಿದೆ’ ಎಂದು ಪೆರುಮಾಳ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.