ADVERTISEMENT

ಚಾಮರಾಜನಗರ: ಸೇವೆ ಕಾಯಂಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 13:14 IST
Last Updated 20 ಡಿಸೆಂಬರ್ 2021, 13:14 IST
ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಚಾಮರಾಜನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಚಾಮರಾಜನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಸರ್ಕಾರಿ ಪದವಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು ವಾಪಸ್‌ ಪಡೆದು, ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಕಾಯಂ ಗೊಳಿಸಬೇಕು ಎಂದು ಆಗ್ರಹಿಸಿಸರ್ಕಾರಿ ಪದವಿ ಕಾಲೇಜುಗಳಅತಿಥಿಉ‍ಪನ್ಯಾಸಕರರಾಜ್ಯ ಸಮನ್ವಯ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಸೇರಿದಅತಿಥಿಉಪನ್ಯಾಸಕರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಅಧಿವೇಶನದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಆಗ್ರಹಿಸಿದರು. ಚುನಾವಣಾ ವಿಭಾಗದ ಶಿರಸ್ತೇದಾರ್‌ ವಿನೋದ ಅವರಿಗೆ ಮನವಿ ಸಲ್ಲಿಸಿದರು.

‘ಸರ್ಕಾರಿ ಪದವಿ ಕಾಲೇಜುಗಳಲ್ಲಿಅತಿಥಿಉಪನ್ಯಾಸಕರು ಹತ್ತಿಪ್ಪತ್ತು ವರ್ಷಗಳಿಂದ ಕಡಿಮೆ ಗೌರವಧನಕ್ಕೆ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಕೆಸಿಎಸ್‌ಆರ್‌ 1977ರ ನಿಯಮ (1), (2) (3) ಮತ್ತು 14ರ ಅಡಿಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ, ತಾತ್ಕಾಲಿಕ ನೌಕರರನ್ನು ಸೇವೆಯಲ್ಲಿ ವಿಲೀನಗಿಳಿಸಲು ಅವಕಾಶ ಇದೆ. ಅಲ್ಲದೇ ಸಂವಿಧಾನದ ಕಲಂ 209ರ ಪ್ರಕಾರ, ತಾತ್ಕಾಲಿಕ ನೌಕರರನ್ನು ಕಾಯಂ ಮಾಡಲು ಇಲಾಖೆಯ ಸಿ ಮತ್ತು ಆರ್‌ ನಿಯಮಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಇದೆ. ಹಾಗಾಗಿ, ಉನ್ನತ ಶಿಕ್ಷಣ ಇಲಾಖೆಯು ಸಚಿವ ಸಂಪುಟದಲ್ಲಿ ಕಾನೂನು ರೀತಿ ಚರ್ಚೆ ನಡೆಸಿ, ಸೇವೆ ಕಾಯಂಗೊಳಿಸಲು ಕ್ರಮ ವಹಿಸಬೇಕು’ ಎಂದು ಅತಿಥಿ ಉಪನ್ಯಾಸಕರು ಒತ್ತಾಯಿಸಿದರು.

ADVERTISEMENT

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಬಿ.ಗುರುರಾಜು, ಪದಾಧಿಕಾರಿಗಳಾದ ಪ್ರದೀಪ್‌ ಕುಮಾರ್‌, ಶೋಭಾ, ರಾಘವೇಂದ್ರ, ಲೀನಾ, ಲಕ್ಷ್ಮಿ, ಭಾಗ್ಯ ಇತರರು ಇದ್ದರು.

ವಾರದಿಂದ ನಡೆಯದ ತರಗತಿ

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಜಿಲ್ಲೆಯಲ್ಲಿ ಇದೇ 13ರಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದು,‌ವಿದ್ಯಾರ್ಥಿಗಳಿಗೆ ಪಾಠ ಇಲ್ಲದಂತಾಗಿದೆ.

‘ಜಿಲ್ಲೆಯಲ್ಲಿ ಎಂಟು ಸರ್ಕಾ‌ರಿ ಪದವಿ ಕಾಲೇಜುಗಳಿವೆ. ಪ್ರತಿ ಕಾಲೇಜಿನಲ್ಲಿ ಐದರಿಂದ ಎಂಟರಷ್ಟು ಕಾಯಂ ಬೋಧಕರಿದ್ದಾರೆ. 250 ಅತಿಥಿ ಉಪನ್ಯಾಸಕರಿದ್ದು, ಬಹುತೇಕ ಕಾಲೇಜುಗಳು ಬೋಧನೆಗೆ ಅತಿಥಿ ಉಪನ್ಯಾಸಕರನ್ನೇ ನಂಬಿವೆ. ವಾರದಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ ಬಹುತೇಕ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿಲ್ಲ’ ಎಂದು ಉಪನ್ಯಾಸಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.