ADVERTISEMENT

ಸರ್ಕಾರಿ ನೌಕರರಿಗೆ ರಕ್ಷಣೆ ಒದಗಿಸಿ

ಬಂಗಾರಪೇಟೆ ತಹಶೀಲ್ದಾರ್‌ ಹತ್ಯೆ: ನೌಕರರ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 15:38 IST
Last Updated 10 ಜುಲೈ 2020, 15:38 IST
ಬಂಗಾರಪೇಟೆ ತಹಶೀಲ್ದಾರ್‌ ಹತ್ಯೆ ಖಂಡಿಸಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು
ಬಂಗಾರಪೇಟೆ ತಹಶೀಲ್ದಾರ್‌ ಹತ್ಯೆ ಖಂಡಿಸಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ತಹಶೀಲ್ದಾರ್‌ ಬಿ.ಕೆ.ಚಂದ್ರಮೌಳೇಶ್ವರ ಅವರ ಹತ್ಯೆಯನ್ನು ಖಂಡಿಸಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ರಕ್ಷಣೆ ಒದಗಿಸುವಂತೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದರು.

‘ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇಂತಹ ಘಟನೆಗಳು ರಾಜ್ಯದಲ್ಲಿ ಆಗಿಂದಾಗ್ಗೆ ನಡೆಯುತ್ತಿದೆ. ಅದರಲ್ಲೂ ಕಂದಾಯ, ಭೂಮಾಪನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಆರೋಗ್ಯ ಇಲಾಖೆಗಳ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಈ ರೀತಿಯ ಹಲ್ಲೆ ಹಾಗೂ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ADVERTISEMENT

‘ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಅಧಿಕಾರಿ, ನೌಕರರ ವರ್ಗದ ಆತಂಕ ಹಾಗೂ ಭಯದಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಸೃಷ್ಟಿಯಾಗುತ್ತಿವೆ. ರಾಜ್ಯದಲ್ಲಿ ಕಠಿಣ ಕಾನೂನುಗಳು ಜಾರಿಯಲ್ಲಿರದ ಕಾರಣ ಇಂತಹ ಕೃತ್ಯಗಳು ನಡೆಯುತ್ತಿವೆ. ಇಂತಹ ಘಟನೆಗಳ ವಿರುದ್ಧ ಕಠಿಣ ಕಾನೂನುಗಳನ್ನು ಸರ್ಕಾರ ರೂಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಕುಂಟೋಜಿ, ಶಿವಮೂರ್ತಿ, ಶೈಲೇಂದ್ರ, ಜಯಶಂಕರ ಸದಸ್ಯರಾದ ನಾಗರಾಜು ಬಿ., ಸಂದೀಪ, ವಿನಯ, ಪ್ರದೀಪ್‌, ನಾಗಲಕ್ಷ್ಮಿ ಶಬನಾ ಅಂಜುಂ ಮತ್ತಿತರರು ಇದ್ದರು.

ಸರ್ಕಾರಿ ನೌಕರರ ಬೇಡಿಕೆಗಳು

* ತಹಶೀಲ್ದಾರ್‌ ಹತ್ಯೆ ಮಾಡಿರುವ ಅಪರಾಧಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳ‍ಪಡಿಸಬೇಕು

* ರಾಜ್ಯದ ನೌಕರರು ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣ ಮಾಡಲು ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು.

* ಮೃತರ ಕುಟುಂಬಕ್ಕೆ ಸರ್ಕಾರದಿಂದ ಗರಿಷ್ಠ ಮಟ್ಟದ ಪರಿಹಾರ ನೀಡಬೇಕು.

* ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು.

* ಕುಟುಂಬಕ್ಕೆ ಸರ್ಕಾರದಿಂದ ದೊರೆಯಬೇಕಾಗಿರುವ ಎಲ್ಲ ಆರ್ಥಿಕ ಸೌಲಭ್ಯಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.