ADVERTISEMENT

ಹೆಚ್ಚುವರಿ ಅನುದಾನ: ಶಾಸಕ ಭರವಸೆ

ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 4:51 IST
Last Updated 17 ಆಗಸ್ಟ್ 2025, 4:51 IST
ಗುಂಡ್ಲುಪೇಟೆ ಪಟ್ಟಣದಲ್ಲಿ ಉಪ್ಪಾರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಪೂಜೆ ನೆರವೇರಿಸಿದರು. ಎಂಎಸ್‍ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಪಾಲ್ಗೊಂಡಿದ್ದರು
ಗುಂಡ್ಲುಪೇಟೆ ಪಟ್ಟಣದಲ್ಲಿ ಉಪ್ಪಾರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಪೂಜೆ ನೆರವೇರಿಸಿದರು. ಎಂಎಸ್‍ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಪಾಲ್ಗೊಂಡಿದ್ದರು   

ಗುಂಡ್ಲುಪೇಟೆ: ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಭರವಸೆ ನೀಡಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಉಪ್ಪಾರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗಗಳ ಸಚಿವರಾಗಿದ್ದ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ₹30 ಲಕ್ಷ ಅನುದಾನದಲ್ಲಿ ಭವನ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಲಾಗಿದೆ. ಲಭ್ಯ ಅನುದಾನದಲ್ಲಿ ಕಾಮಗಾರಿ ಪ್ರಾರಂಭವಾಗಲಿ. ನಂತರದಲ್ಲಿ ಹೆಚ್ಚಿನ ಅನುದಾನ ತಂದು ನಿಮ್ಮ ನಿರೀಕ್ಷೆಯಂತೆ ಭವನ ನಿರ್ಮಾಣ ಮಾಡಿಸಿಕೊಡಲು ಬದ್ಧವಾಗಿರುತ್ತೇನೆ ಎಂದು ಭರವಸೆ ನೀಡಿದರು.

ಉಪ್ಪಾರ ಸಮುದಾಯ ನಿರ್ಮಾಣ ಬಹುದಿನದ ಬೇಡಿಕೆಯಾಗಿತ್ತು. ಒತ್ತುವರಿ ಸಮಸ್ಯೆ ಹಿನ್ನೆಲೆಯಲ್ಲಿ ಸಮುದಾಯದವರ ಕೋರಿಕೆಯಂತೆ ಭವನ ನಿರ್ಮಾಣಕ್ಕೂ ಮೊದಲೇ ಈ ಹಿಂದೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಒಟ್ಟು ₹25 ಲಕ್ಷ ಅನುದಾನದಲ್ಲಿ ಸುತ್ತುಗೋಡೆ ನಿರ್ಮಾಣ ಮಾಡಲಾಗಿದೆ. ಈಗ ನಿರೀಕ್ಷೆಯಂತೆ ಭವನ ನಿರ್ಮಾಣಕ್ಕೂ ಚಾಲನೆ ಸಿಕ್ಕಿದ್ದು, ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಭವನ ನಿರ್ಮಿಸಿಕೊಳ್ಳಲು ಮುಂದಾಗಿ ಎಂದು ಸಲಹೆ ನೀಡಿದರು.

ADVERTISEMENT

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್‍ಪ್ರಸಾದ್ ಉಪ್ಪಾರ ಸಮುದಾಯದ ಬಗ್ಗೆ ಅಭಿಮಾನ ಹೊಂದಿದ್ದು, ಈ ಹಿಂದೆ ಸರ್ಕಾರದ ಅನುದಾನದ ಜೊತೆ ಸುತ್ತುಗೋಡೆ ನಿರ್ಮಾಣಕ್ಕೆ ₹8 ಲಕ್ಷ ವೈಯಕ್ತಿಕ ನೆರವು ನೀಡುವ ಮೂಲಕ ಸಹಕಾರ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂಜನಗೂಡಿಗೆ ಬಂದಾಗ ₹2 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸೋಣ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಜಿ.ಎಸ್.ಮಧುಸೂದನ್, ಸದಸ್ಯರಾದ ಮಹಮ್ಮದ್ ಇಲಿಯಾಸ್, ಎನ್.ಕುಮಾರ್, ಎಚ್.ಆರ್.ರಾಜಗೋಪಾಲ್, ಉಪ್ಪಾರ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ರವಿ, ಮುಖಂಡರಾದ ಭೀಮನಬೀಡು ಬಿ.ಜಿ.ಶಿವಕುಮಾರ್, ಅರಸಶೆಟ್ಟಿ, ಬೇಗೂರು ಅಣ್ಣಯ್ಯ, ಕುಮಾರಸ್ವಾಮಿ ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.