ADVERTISEMENT

ವೇತನ ಹೆಚ್ಚಳ; ದಾರಿತಪ್ಪಿಸುತ್ತಿರುವ ಸರ್ಕಾರ-ಅತಿಥಿ ಉಪನ್ಯಾಸಕರ ಆರೋಪ

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 16:43 IST
Last Updated 18 ಜನವರಿ 2022, 16:43 IST
ಮಲ್ಲಿಕಾರ್ಜುನಸ್ವಾಮಿ
ಮಲ್ಲಿಕಾರ್ಜುನಸ್ವಾಮಿ   

ಚಾಮರಾಜನಗರ: ‘ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಬಳವನ್ನು ಕೇವಲ ₹3,000 ಹೆಚ್ಚು ಮಾಡಿ, ಮೂರು ಪಟ್ಟು ಹೆಚ್ಚಳ ಮಾಡಿರುವುದಾಗಿ ಸರ್ಕಾರ ಹೇಳಿಕೊಳ್ಳುವ ಮೂಲಕ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಹೊಸ ಆದೇಶದಿಂದ ಈಗಿರುವ ಅತಿಥಿ ಉಪನ್ಯಾಸಕರ ಪೈಕಿ ಅರ್ಧದಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ‘ ಎಂದುಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಅವರು ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದುವರೆಗೂ ಇದ್ದ ಎಂಟು ಗಂಟೆ ಕಾರ್ಯಭಾರವನ್ನು 15 ಗಂಟೆಗೆ ಏರಿಸಲಾಗಿದೆ. ಇದರಿಂದಾಗಿ ಅತಿಥಿ ಉಪನ್ಯಾಸಕರಿಗೆ ತೀವ್ರ ತೊಂದರೆಯಾಗಲಿದೆ. ಹಾಗಾಗಿ, ಸರ್ಕಾರ ತಕ್ಷಣವೇ ತನ್ನ ನಡವಳಿಯನ್ನು ವಾಪಸ್‌ ಪಡೆಯಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ‘ ಎಂದು ಹೇಳಿದರು.

‘ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ 14,567 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಸೇವಾ ವಿಲೀನ ಹಾಗೂ ನಮ್ಮ ಹಕ್ಕುಗಳ ಬೇಡಿಕೆಗಾಗಿ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದೇವೆ. ಆದರೆ, ಅತಿಥಿ ಉಪನ್ಯಾಸಕರನ್ನು ವಿಭಜಿಸುವ ಷಡ್ಯಂತ್ರವನ್ನು ರೂಪಿಸಿದೆ. ಹೊಸದಾಗಿ ಅವೈಜ್ಞಾನಿಕ ಆದೇಶ ಮಾಡುವುದರ ಮೂಲಕ ಶೇ 50ಕ್ಕೂ ಹೆಚ್ಚು ಉಪನ್ಯಾಸಕರ ಅನ್ನ ಕಿತ್ತುಕೊಳ್ಳುವ ಕೆಟ್ಟ ಪರಂಪರೆಗೆ ಉನ್ನತ ಶಿಕ್ಷಣ ಸಚಿವರು ಮುಂದಾಗಿದ್ದಾರೆ. ಸರ್ಕಾರ ತಕ್ಷಣವೇ ತನ್ನ ನಿಲುವುನಿಂದ ಹಿಂದೆ ಸರಿಯಬೇಕು‘ ಎಂದು ಅವರು ಆಗ್ರಹಿಸಿದರು.

ADVERTISEMENT

ಸಮಿತಿ ಕಾರ್ಯದರ್ಶಿ ಗುರುರಾಜು ಯರಗನಹಳ್ಳಿ ಮಾತನಾಡಿ, ‘ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆ ಸಂಬಂಧ ಶಿಕ್ಷಣ ಇಲಾಖೆ ಸಮಿತಿ ರಚಿಸಿತ್ತು. ಸಮಿತಿಯು ನೀಡಿರುವ ಅಭಿಪ್ರಾಯಗಳನ್ನು ಅತಿಥಿ ಉಪನ್ಯಾಸಕ ಸಂಘಟನೆಗಳೊಂದಿಗೆ ಮುಕ್ತ ಚರ್ಚೆ ಮಾಡದೆ ಏಕಾಏಕಿ ಶೇ 50 ರಷ್ಟು ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ಕೈಬಿಡುವಂತಹ ನಿರ್ಧಾರ ಮಾಡುವುದರ ಜೊತೆಗೆ, ಇಬ್ಬರ ಅನ್ನದಲ್ಲಿ ಇಬ್ಬರು ಮಾತ್ರ ಉಣ್ಣುವಂತಹ ಯೋಜನೆ ರೂಪಿಸಿದೆ‘ ಎಂದು ಆರೋಪಿಸಿದರು.

ಪದಾಧಿಕಾರಿಗಳಾದ ನಾಗೇಂದ್ರ, ಮೇಗೇಶ್, ಕೆಂಪಣ್ಣಮೂರ್ತಿ ಇದ್ದರು.

ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಆಗ್ರಹ

‘ಹಾಲಿ ಇರುವ ಅತಿಥಿ ಉಪನ್ಯಾಸಕರಲ್ಲಿ ಹಲವರು 15ರಿಂದ 20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲವರಿಗೆ ವಯಸ್ಸಾಗಿದೆ. ಹೊಸ ನೇಮಕಾತಿ ಸಂದರ್ಭದಲ್ಲಿ ಅರ್ಜಿ ಸಲ್ಲಿಸಲು ಇವರಿಗೆ ಅವಕಾಶ ಇಲ್ಲ. ಕಡಿಮೆ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಯುಜಿಸಿ ನಿಯಮ ಪ್ರಕಾರ ಗಂಟೆಗೆ ₹ 1,500 ಕೊಡಲಿ. ಇಲ್ಲದಿದ್ದರೆ ಸೇವಾ ವಿಲೀನ ಮಾಡಲಿ. ಉನ್ನತ ಶಿಕ್ಷಣ ಸಚಿವರ ಮೇಲೆ ನಮಗೆ ಭರವಸೆ ಇಲ್ಲ. ಹಾಗಾಗಿ, ಮುಖ್ಯಮಂತ್ರಿ ಅವರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು‘ ಎಂದು ಮಲ್ಲಿಕಾರ್ಜುನಸ್ವಾಮಿ ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.