ADVERTISEMENT

ಕೊಳ್ಳೇಗಾಲ: 43 ವರ್ಷಗಳ ಬಳಿಕ, ಗುಂಡಾಲ್‌ ಜಲಾಶಯ ಮೊದಲ ಬಾರಿ ಭರ್ತಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 12:33 IST
Last Updated 2 ಡಿಸೆಂಬರ್ 2021, 12:33 IST
ಭರ್ತಿಯಾಗಿರುವ ಗುಂಡಾಲ್‌ ಜಲಾಶಯದ ನೋಟ
ಭರ್ತಿಯಾಗಿರುವ ಗುಂಡಾಲ್‌ ಜಲಾಶಯದ ನೋಟ   

ಕೊಳ್ಳೇಗಾಲ: ತಾಲ್ಲೂಕಿನ ಗುಂಡಾಲ್‌ ಜಲಾಶಯವು ಉದ್ಘಾಟನೆಗೊಂಡ 43 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭರ್ತಿಯಾಗಿದೆ.

ಕೃಷಿಗೆ ನೀರುಣಿಸುವ ಉದ್ದೇಶದಿಂದ ಜಲಾಶಯ ನಿರ್ಮಾಣಕ್ಕೆ1970ರಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. 1978ರಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿತ್ತು. 0.97 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಜಲಾಶಯವು ಇದುವರೆಗೆ ಭರ್ತಿಯಾಗಿರಲಿಲ್ಲ. 2005 ಮತ್ತು 2015ರಲ್ಲಿ ಅಣೆಕಟ್ಟೆ ಬಹುತೇಕ ಭರ್ತಿಯಾಗಿತ್ತಾದರೂ ಕೋಡಿ ಬೀಳುವುದಕ್ಕೆ ಒಂದು ಅಡಿ ಬಾಕಿ ಇತ್ತು.

ಈ ಬಾರಿ, ನವೆಂಬರ್‌ ತಿಂಗಳಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಜಲಾಶಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಬುಧವಾರ ರಾತ್ರಿ ಜಲಾಶಯ ತುಂಬಿ ಕೋಡಿ ಹರಿದಿದೆ.

ADVERTISEMENT

697 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಜಲಾಶಯವು, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದೆ. ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳ 50ಕ್ಕೂ ಹೆಚ್ಚು ಗ್ರಾಮಗಳ 15,100 ಎಕರೆ ಕೃಷಿ ಭೂಮಿಗೆ ಈ ಜಲಮೂಲ ನೀರುಣಿಸುತ್ತದೆ.

ಗುಂಡಾಲ್‌ ಜಲಾಶಯ ತುಂಬಿ ನೀರು ಹೊರಕ್ಕೆ ಹೋಗುತ್ತಿರುವುದು

ಬಿಆರ್‌ಟಿ ವ್ಯಾಪ್ತಿಯ ಬುರುಡೆ ಅರಣ್ಯಪ್ರದೇಶ, ಹೊನ್ನಮೇಟಿ, ನೀಲಿಗಿರಿ ಅರಣ್ಯ ಪ್ರದೇಶದಲ್ಲಿ ಹೆಚ್ಚು ಮಳೆಯಾದರೆ ಗುಂಡಾಲ್‌ ಜಲಾಶಯಕ್ಕೆ ನೀರು ಹರಿದು ಬರುತ್ತದೆ.ನೀರಾವರಿಯ ಉದ್ದೇಶಕ್ಕೆ ಈ ಅಣೆಕಟ್ಟು ನಿರ್ಮಿಸಿದ್ದರೂ, ಇದು ಬಿಆರ್‌ಟಿ ಅರಣ್ಯ ಪ್ರದೇಶದ ವನ್ಯಪ್ರಾಣಿಗಳಿಗೆ ಜಲಮೂಲವಾಗಿದೆ.

ನಾಲ್ಕು ದಶಕಗಳ ಬಳಿಕ ಅಣೆಕಟ್ಟೆ ಭರ್ತಿಯಾಗಿರುವುದಕ್ಕೆ ಅಚ್ಚುಕಟ್ಟು ಪ್ರದೇಶದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.