ಗುಂಡ್ಲುಪೇಟೆ: ಪಟ್ಟಣದ ವಿಜಯ ನಾರಾಯಣ ಸ್ವಾಮಿ ದೇವಸ್ಥಾನದ 200 ಮೀಟರ್ ಸುತ್ತಲಿನ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದ್ದು ಕಟ್ಟಡಗಳ ನಿರ್ಮಾಣಕ್ಕೆ ನಿರ್ಬಂಧವಿದ್ದರೂ ನಿಯಮ ಮೀರಿ ರಾಜಕೀಯ ಹಾಗೂ ಅಧಿಕಾರದ ಪ್ರಭಾವ ಬಳಸಿ ಕಟ್ಟಡ ಕಟ್ಟಲಾಗುತ್ತಿದೆ ಎಂದು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಜಯ ನಾರಾಯಣ ದೇವಸ್ಥಾನದಿಂದ 50 ಮೀಟರ್ ವ್ಯಾಪ್ತಿಯಲ್ಲಿ ಎರಡು ಕಟ್ಟಡಗಳ ಕಾಮಗಾರಿಗಳು ನಡೆಯುತ್ತಿದ್ದರೂ ಪುರಸಭೆಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ವಿಜಯ ನಾರಾಯಣ ದೇವಸ್ಥಾನವು 13-14ನೇ ಶತಮಾನದಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನ ಅವಧಿಯಲ್ಲಿ ನಿರ್ಮಾಣವಾಗಿದ್ದು ದೇವಾಲಯ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ವ್ಯಾಪ್ತಿಗೊಳಪಟ್ಟಿದೆ. ಪ್ರಾಚೀನ ದೇವಾಲಯದ ಸುತ್ತಲೂ ಅನುಮತಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡುವುದು ಎಂಬ ನಿಯಮ ಇದ್ದರೂ ದಿನದಿಂದ ದಿನಕ್ಕೆ ಕಟ್ಟಡಗಳು ನಿರ್ಮಾಣವಾಗುತ್ತಲೇ ಇವೆ ಎಂಬ ಆರೋಪಗಳು ಕೇಳಿ ಬಂದಿವೆ.
ಅನುಮತಿ ದುರುಪಯೋಗ: ದೇವಸ್ಥಾನದ ಸುತ್ತಲೂ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯುವುದರಿಂದ ಕೆಲವು ಮಾಲೀಕರು ‘ವಾಸಕ್ಕಾಗಿ’ ಎಂಬ ದಾಖಲೆಗಳನ್ನು ಅಧಿಕಾರಿಗಳಿಗೆ ತೋರಿಸಿ ನೆಲ ಅಂತಸ್ತಿನವರೆಗೆ ಅನುಮತಿ ಪಡೆದು ಎರಡರಿಂದ ಮೂರು ಅಂತಸ್ತಿನ ಕಟ್ಟಡಗಳನ್ನು ಕಟ್ಟಿ ಬಾಡಿಗೆ ಕೊಡುತ್ತಿದ್ದಾರೆ.
ಎರಡು ಮೂರು ಅಂತಸ್ತು ಕಟ್ಟುವುದರಿಂದ ದೇವಾಲಯ ಮರೆಯಾಗುತ್ತಿದೆ. ಕೂಗಳತೆಯ ದೂರದಲ್ಲಿದ್ದರೂ ದೇವಾಲಯ ಇದೆ ಎಂಬುದೇ ತಿಳಿಯುತ್ತಿಲ್ಲ. ಅಕ್ರಮವಾಗಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಪುರಸಭಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ದೂರು ನೀಡಿದ್ದರೂ ಕಾಮಗಾರಿಗೆ ಕಡಿವಾಣ ಬಿದ್ದಿಲ್ಲ ಎಂದು ಪುರಸಭಾ ಸದಸ್ಯ ಎಚ್.ಆರ್.ರಾಜಗೋಪಾಲ್ ಆರೋಪಿಸಿದ್ದಾರೆ.
ದೇವಾಲಯದ ಸುತ್ತಲೂ ವಾಸದ ಮನೆಗಳ ಕಟ್ಟಡಗಳು ಹಾಳಾಗಿದ್ದು ದುರಸ್ತಿಗೆ ಅನುಮತಿ ಕೇಳಿದರೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಹಣವಂತರು, ಪ್ರಭಾವಿಗಳು ಕಟ್ಟಡ ನಿರ್ಮಾಣ ಮಾಡಿದರೂ ಕೇಳುತ್ತಿಲ್ಲ. ಉಳ್ಳವರಿಗೊಂದು, ಇಲ್ಲದವರಿಗೊಂದು ಕಾನೂನು ಇದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ಪುರಸಭೆಯಿಂದ ಅನುಮತಿ ಪಡೆದಿಲ್ಲ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಪರಿಶೀಲಿಸುವಂತೆ ಎಂಜಿನಿಯರ್‌ಗೆ ಸೂಚಿಸುತ್ತೇನೆ.ಶರವಣ ಪುರಸಭೆ ಮುಖ್ಯಾಧಿಕಾರಿ
ವಿಜಯ ನಾರಾಯಣ ಸ್ವಾಮಿ ದೇವಸ್ಥಾನದ ಬಳಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರೆ ಪರಿಶೀಲಿಸಿ ಪತ್ರ ಬರೆಯಲು ಪುರಸಭೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.ರಮೇಶ್ ಬಾಬು ತಹಸೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.