ADVERTISEMENT

ಗುಂಡ್ಲುಪೇಟೆ: ಭವನದ ಒಳಗೆ ಹೋಗಲು ಬಿಟ್ಟಿಲ್ಲ, ಮಕ್ಕಳ ದೂರು

ಚಿಕ್ಕಾಟಿ ಗ್ರಾಮಕ್ಕೆ ತಹಶೀಲ್ದಾರ್‌, ಬಿಇಒ ಭೇಟಿ; ವಿದ್ಯಾರ್ಥಿಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 13:15 IST
Last Updated 6 ಅಕ್ಟೋಬರ್ 2020, 13:15 IST
ಚಿಕ್ಕಾಟಿ ಗ್ರಾಮದಲ್ಲಿ ಅಧಿಕಾರಿಗಳು ಮಕ್ಕಳಿಂದ ಮಾಹಿತಿ ಪಡೆದರು
ಚಿಕ್ಕಾಟಿ ಗ್ರಾಮದಲ್ಲಿ ಅಧಿಕಾರಿಗಳು ಮಕ್ಕಳಿಂದ ಮಾಹಿತಿ ಪಡೆದರು   

ಗುಂಡ್ಲುಪೇಟೆ: ವಿದ್ಯಾಗಮ ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆ ಆಚರಣೆ ನಡೆದಿದೆ ಎನ್ನಲಾದ ಪ್ರಕರಣ ಸಂಬಂಧ ತಹಶೀಲ್ದಾರ್‌ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಮಂಗಳವಾರ ಚಿಕ್ಕಾಟಿ ಗ್ರಾಮ ಭೇಟಿ ನೀಡಿ ಶಾಲಾ ಮಕ್ಕಳಿಂದ ಮಾಹಿತಿ ಕಲೆ ಹಾಕಿದರು.

ಗ್ರಾಮದ ಮುಖಂಡರೊಬ್ಬರು ಕನಕ ಭವನದ ಒಳಗಡೆ ಹೋಗಬೇಡಿ, ಮೆಟ್ಟಿಲುಗಳ ಬಳಿ ಕುಳಿತುಕೊಳ್ಳಿ ಎಂದು ಗದರಿದ್ದಾರೆ ಎಂದು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಅಕ್ಟೋಬರ್‌ 3ರಂದು ಗ್ರಾಮದ ಸಮುದಾಯದ ಕಲಿಕಾ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು, ಶಿಕ್ಷಕರು ಬಂದಿಲ್ಲ ಎಂಬ ಕಾರಣಕ್ಕೆ ಅದೇ ಗ್ರಾಮದ ಕನಕಭವನದಲ್ಲಿ ನಡೆಯುತ್ತಿರುವ ವಿದ್ಯಾಗಮ ಕಾರ್ಯಕ್ರಮದಲ್ಲಿ ಶಿಕ್ಷಕರಿದ್ದಾರೆ ಎಂದು ಅಲ್ಲಿಗೆ ತೆರಳಿದ್ದರು.

ADVERTISEMENT

‘ಕನಕ ಭವನದ ಮುಂಭಾದಲ್ಲಿದ್ದ ವ್ಯಕ್ತಿಯೊಬ್ಬರು, ‘ಭವನದ ಒಳಗಡೆ ಹೋಗಬೇಡಿ, ಮೆಟ್ಟಿಲುಗಳ ಬಳಿ ಕುಳಿತುಕೊಳ್ಳಿ. ಒಳಗೆ ಹೋದರೆ ಜಾಡಿಸಿ ಒದೆಯುತ್ತೇನೆ’ ಎಂದು ಗದರಿದರು. ನಂತರ ನಾವು ಅಲ್ಲಿಂದ ಹೊರಟು ಬಂದೆವು’ ಎಂದು ವಿದ್ಯಾರ್ಥಿಗಳು ಅಧಿಕಾರಿಗಳಿಗೆ ತಿಳಿಸಿದರು.

ವಾಲ್ಮೀಕಿ ಭವನದಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿ ನಾಗಮಣಿ ಅವರು ಮಾತನಾಡಿ, ‘ಬೇರೊಂದು ಕಲಿಕಾ ಕೇಂದ್ರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಈ ವಿಚಾರವನ್ನು ವಿದ್ಯಾರ್ಥಿಗಳು ಗಮನಕ್ಕೆ ತಂದಾಗ, ಆ ವ್ಯಕ್ತಿಯನ್ನು ಪ್ರಶ್ನೆ ಮಾಡಿ ಬೈದಿದ್ದೇನೆ’ ಎಂದರು.

ಸ್ಥಳದಲ್ಲಿ ಹಾಜರಿದ್ದ ಕುರುಬ ಸಮುದಾಯದ ಮುಖಂಡರು ಮಾತನಾಡಿ, ‘ಗ್ರಾಮದಲ್ಲಿ ಯಾವುದೇ ತೊಂದರೆ ಇಲ್ಲ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳನ್ನು ನಿಂದಿಸಿರುವ ವ್ಯಕ್ತಿಗೆ ವಯಸ್ಸಾಗಿದ್ದು, ಮಾನಸಿಕ ಆರೋಗ್ಯ ಸರಿ ಇಲ್ಲ. ಸದಾ ಭವನದ ಅಂಗಳದಲ್ಲಿ ಮಲಗಿರುತ್ತಾರೆ. ತನಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾತನಾಡಿದ್ದಾರೆ. ನಾವೆಲ್ಲರೂ ಗ್ರಾಮದಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದು, ಕೆಟ್ಟ ಹೆಸರು ತರಲು ಹೊರಗಿನವರು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ತಹಶೀಲ್ದಾರ್ ನಂಜುಂಡಯ್ಯ ಅವರು ಮಾತನಾಡಿ, ‘ಗ್ರಾಮದಲ್ಲಿ ಸಾಮರಸ್ಯ ಹಾಳು ಮಾಡುವಂತಹ ಘಟನೆಗಳಿಗೆ ಆಸ್ಪದ ಕೊಡಬಾರದು. ಒಬ್ಬರಿಗೊಬ್ಬರು ಸಹಬಾಳ್ವೆಯಿಂದ ಬದುಕಬೇಕು’ ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಮಾತನಾಡಿ, ‘ಸಂಬಂಧಪಟ್ಟ ಶಿಕ್ಷಕರಿಗೆ ನೋಟಿಸ್ ನೀಡಿದ್ದೇನೆ. ಅವರಿಂದ ಉತ್ತರ ಬಂದ ನಂತರ ಹಾಗೂ ವಿದ್ಯಾರ್ಥಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಇಲಾಖೆ ಉಪನಿರ್ದೇಶಕರಿಗೆ ಮಾಹಿತಿ ನೀಡುತ್ತೇನೆ’ ಎಂದು ತಿಳಿಸಿದರು.

ಕೋರ್ಟ್‌ ಕಚೇರಿಗೆ ಅಲೆಯುತ್ತೀರಾ?

ಅಧಿಕಾರಿಗಳು ವಿದ್ಯಾರ್ಥಿಗಳನ್ನು ವಿಚಾರಿಸುತ್ತಿದ್ದಾಗ ಕೆಲ ಪೋಷಕರು, ‘ವಿದ್ಯಾರ್ಥಿಗಳನ್ನು ಏಕೆ ಪ್ರಶ್ನಿಸುತ್ತೀರಿ? ನಾಳೆ ಕೋರ್ಟ್ ಕಚೇರಿ ಎಂದರೆ ನಾವು ಜವಾಬ್ದಾರರಲ್ಲ. ದೂರು ನೀಡಿರುವವರನ್ನು ಪ್ರಶ್ನೆ ಮಾಡಿ’ ಎಂದು ಹೇಳುತ್ತಿದ್ದರು.

ಅಧಿಕಾರಿಗಳ ಮುಂದೆ ಮಾತನಾಡಿದ ಪೋಷಕರೊಬ್ಬರು, ‘ವಿಚಾರಣೆಯ ಸಂದರ್ಭದಲ್ಲಿ ಎಲ್ಲವನ್ನೂ ಹೇಳಿದರೆ ನಾಳೆ ಕೋರ್ಟ್‌ ಕಚೇರಿ ಎಂದು ಅಲೆಯಬೇಕಾಗುತ್ತದೆ ಎಂದು ಶಿಕ್ಷಕರು ಹಾಗೂ ಮುಖಂಡರು ಹೆದರಿಸಿದ್ದರು’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.