ಚಾಮರಾಜನಗರ: ನಗರದ ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯವಾದ 14ರಿಂದ 17 ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ಮೈಸೂರು ವಿಭಾಗಮಟ್ಟದ ಹ್ಯಾಂಡ್‌ಬಾಲ್ ಟೂರ್ನಿಯಲ್ಲಿ ಮಂಡ್ಯ, ದಕ್ಷಿಣ ಕನ್ನಡ, ಹಾಸನ ಹಾಗೂ ಮೈಸೂರು ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಂಡವು.
ಶನಿವಾರ ನಡೆದ 14 ವರ್ಷದೊಳಗಿನವ ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಮಂಡ್ಯ 11–4 ಪಾಯಿಂಟ್‌ಗಳ ಅಂತರದಿಂದ ದಕ್ಷಿಣ ಕನ್ನಡ ತಂಡವನ್ನು ಮಣಿಸಿತು. ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ 16–6 ಅಂತರದಲ್ಲಿ ಉಡುಪಿ ತಂಡವನ್ನು ಪರಾಭವಗೊಳಿಸಿತು.
17 ವರ್ಷದೊಳಗಿನವ ಬಾಲಕರ ಫೈನಲ್ ಪಂದ್ಯದಲ್ಲಿ ಹಾಸನ 6–4 ಅಂತರದಿಂದ ಕೊಡಗು ತಂಡವನ್ನು ಹಾಗೂ ಮೈಸೂರು 13–7 ಅಂತರದಿಂದ ಉಡುಪಿ ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ‘ವಿದ್ಯಾರ್ಥಿಗಳು ಓದಿನಷ್ಟೆ ಕ್ರೀಡೆಗೂ ಮಹತ್ವ ನೀಡಬೇಕು, ಸ್ವಾಮಿವಿವೇಕಾನಂದರು ಹೇಳಿದಂತೆ ನಿರ್ಧಿಷ್ಟ ಗುರಿಯೊಂದಿಗೆ ಸಾಗಿದಾಗ ಮಾತ್ರ ಯಶಸ್ಸು ದಕ್ಕುತ್ತದೆ ಎಂದರು.
ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಪೋಷಕರು ಹಾಗೂ ಶಿಕ್ಷಕರ ಕನಸು ನನಸಾಗಿಸಬೇಕು ಎಂದು ಕಿವಿಮಾತು ಹೇಳಿದರು.
ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಕರ್ ಮಾತನಾಡಿ, ಕ್ರೀಡಾಪಟುಗಳು ಸೋಲು ಗೆಲುವಿನ ಬಗ್ಗೆ ಚಿಂತಿಸದೆ ನಿರಂತರವಾಗಿ ಶ್ರಮ ಹಾಕಬೇಕು. ಕ್ರೀಡಾಪಟುಗಳಿಗೆ ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಕ್ರೀಡೆಯ ಜೊತೆಗೆ ಓದಿಗೂ ಹೆಚ್ಚು ಒತ್ತು ನೀಡಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಚಂದ್ರಪಾಟೀಲ್, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಮಹದೇವಸ್ವಾಮಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಗಕ್ಷ ಕೆ.ರಾಮಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಆರ್.ಶಂಕರ್, ತಾಲ್ಲೂಕು ಶಿಕ್ಷಣ ಪರಿವೀಕ್ಷಕ ಎಸ್.ಬಸವರಾಜು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಡಿ.ಎನ್.ಭರತ್ ಭೂಷಣ್, ಖಜಾಂಚಿ ಶಿವಕುಮಾರಯ್ಯ ಹಾಗೂ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.