ಹನೂರು (ಚಾಮರಾಜನಗರ ಜಿಲ್ಲೆ): ಅನಾರೋಗ್ಯಕ್ಕೀಡಾದ ವೃದ್ಧೆಯನ್ನು ಗ್ರಾಮದ ಜನ ಡೋಲಿ ಕಟ್ಟಿಕೊಂಡು ಆಸ್ಪತ್ರೆಗೆ ಸಾಗಿಸಿದ ವಿಡಿಯೋ ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯ ಪಡಸಲನತ್ತ ಗ್ರಾಮದ ದುಂಡಮ್ಮ ಅವರು ಇಂಡಿಗನತ್ತ ಗ್ರಾಮದ ಹಿರಿಯ ಪುತ್ರ ಮಾದೇಗೌಡರ ಮನೆಯಲ್ಲಿ ವಾಸವಿದ್ದರು. ಗುರುವಾರ ಅವರ ಆರೋಗ್ಯದಲ್ಲಿ ಏರುಪೇರಾದ್ದರಿಂದ ತುರ್ತಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಆದರೆ ವಾಹನ ಸೌಲಭ್ಯವಿಲ್ಲದೆ, ಮಾದೇಗೌಡರು ಗ್ರಾಮದ ಜನರ ನೆರವಿನೊಂದಿಗೆ ಡೋಲಿ ಕಟ್ಟಿಕೊಂಡು ಕಾಡಿನ ಹಾದಿಯಲ್ಲಿ ನಡೆದು ಬಂದು ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದರು. ಸದ್ಯ ದುಂಡಮ್ಮ ಚೇತರಿಸಿಕೊಂಡಿದ್ದಾರೆ.
ಜನವನ ಸಾರಿಗೆ ಸ್ಥಗಿತ: ಮಹದೇಶ್ವರ ಬೆಟ್ಟದ ತಪ್ಪಲಿನ ಜನ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂರು ವರ್ಷಗಳ ಹಿಂದೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಮೂರು ಜೀಪ್‌ಗಳು ಸಂಚರಿಸುತ್ತಿದ್ದವು. ಕಾಡಿನೊಳಗಿರುವ ಜನ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು, ಆಹಾರ ಪದಾರ್ಥಗಳನ್ನು ಸಾಗಿಸಲು ಹಾಗೂ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಅದೇ ವಾಹನಗಳನ್ನು ಅವಲಂಬಿಸಿದ್ದರು. ಆದರೆ ಕೆಲವು ತಿಂಗಳ ಬಳಿಕ ಜನವನ ಸಾರಿಗೆ ಸ್ಥಗಿತಗೊಂಡಿತು. ಅದನ್ನು ಮತ್ತೆ ಆರಂಭಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ವಾಹನ ಸೌಕರ್ಯಕ್ಕಾಗಿ ಆಗ್ರಹಿಸಿ ಅರಣ್ಯವಾಸಿಗಳು ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದ್ದರು. ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮಾತಿನ ಚಕಮಕಿಯಿಂದ ಮತಯಂತ್ರಗಳನ್ನೇ ಸುಟ್ಟುಹಾಕಿದ ಘಟನೆಯೂ ನಡೆದಿತ್ತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ, ಜಿಲ್ಲಾಡಳಿತ ಗ್ರಾಮಕ್ಕೆ ಭೇಟಿ ನೀಡಿ ಮೂಲಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈಗಲೂ ಜನ ತುರ್ತು ಸಂದರ್ಭದಲ್ಲಿ ಡೋಲಿಯನ್ನೇ ಆಶ್ರಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ ರಘು ಅವರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.
***
ಜನವನ ಸಾರಿಗೆ ವ್ಯವಸ್ಥೆಯ ಜವಾಬ್ದಾರಿಯನ್ನು ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಗಿದೆ. ವೃದ್ಧೆಯನ್ನು ಡೋಲಿ ಮೂಲಕ ಆಸ್ಪತ್ರೆಗೆ ಸಾಗಿಸಿದ್ದು ತಿಳಿದಿಲ್ಲ. ಮಾಹಿತಿ ಪಡೆದು ಕ್ರಮ ವಹಿಸಲಾಗುವುದು.
–ವೈ.ಕೆ ಗುರುಪ್ರಸಾದ್. ತಹಶೀಲ್ದಾರ್ ಹನೂರು.
ಮಹದೇಶ್ವರ ಬೆಟ್ಟದ ಸುತ್ತಲಿನ ಜನರಿಗೆ ಆರೋಗ್ಯ ಕೆಟ್ಟರೆ ಡೋಲಿಯೇ ಗತಿ. ಮೂರು ವರ್ಷಗಳ ಹಿಂದೆ ಜನವನ ಸಾರಿಗೆ ಇತ್ತು. ಈಗ ಇಲ್ಲವಾಗಿದೆ.
–ನಾಗರಾಜು ಪಡಸಲನತ್ತ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.