ADVERTISEMENT

ಸಮಾನತೆ ಇಲ್ಲದ ಮೇಲೆ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ: ಸಚಿವ ಎಚ್.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 14:18 IST
Last Updated 29 ಜೂನ್ 2025, 14:18 IST
ಗುಂಡ್ಲುಪೇಟೆ ತಾಲ್ಲೂಕಿನ ಅಗತಗೌಡನಹಳ್ಳಿ ಗ್ರಾಮದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು 
ಗುಂಡ್ಲುಪೇಟೆ ತಾಲ್ಲೂಕಿನ ಅಗತಗೌಡನಹಳ್ಳಿ ಗ್ರಾಮದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು    

ಗುಂಡ್ಲುಪೇಟೆ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಮಾನತೆ ಇಲ್ಲ ಎಂದ ಮೇಲೆ ಆ ಸ್ವಾತಂತ್ರ್ಯಕ್ಕೆ ಯಾವ ಬೆಲೆ ಇದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಅಗತಗೌಡನಹಳ್ಳಿ ಗ್ರಾಮದಲ್ಲಿ ‌ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಬಾಬಾ ಸಹೇಬ್ ಡಾ‌.ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನ ದುರ್ಬಲಗೊಳಿಸುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಇದರ ವಿರುದ್ಧ ಪ್ರತಿಯೊಬ್ಬರು ಹೋರಾಟ ಮಾಡಬೇಕು ಎಂದು ತಿಳಿಸಿದರು.

ADVERTISEMENT

ದೇಶದಲ್ಲಿ ಏಕತೆ ಮತ್ತು ಸಮಗ್ರತೆ ಒಂದಾಗಿಬೇಕು ಎಂದು ಅಂಬೇಡ್ಕರ್ ಹೇಳಿದ್ದು, 140 ಕೋಟಿ ಜನರಿಗು ಹಕ್ಕು, ರಕ್ಷಣೆಯನ್ನು ಸಂವಿಧಾನದ ಮೂಲಕ ನೀಡಿದ್ದಾರೆ. ಆದರೆ. ಅಂಬೇಡ್ಕರ್ ಅವರನ್ನು ದಲಿತ ಮತ್ತು ಮೀಸಲಾತಿಗೆ ಸೀಮಿತ ಮಾಡಿದ್ದಾರೆ. 500 ವರ್ಷಗಳ ಹಿಂದೆ ಬೌದ್ಧ ಬಿಕ್ಕುಗಳ ಮೂಲಕ ಬುದ್ಧ ಪ್ರಜಾಪ್ರಭುತ್ವ ಬೀಜ ಬಿತ್ತಿದರು. ಅದು 12ನೇ ಶತಮಾನದಲ್ಲಿ ಬಸವಣ್ಣನ ಅನುಭವ ಮಂಟಪದಲ್ಲಿ ಮರವಾಗಿ ಬೆಳೆಯಿತು. ಅಂಬೇಡ್ಕರ್ ಸಂವಿಧಾನದ ಮೂಲಕ ವಯಸ್ಕರಿಗೆ ಮತದಾನದ ಹಕ್ಕು ಕೊಟ್ಟ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣ್ಣಾಯಿತು. ಈ ಮೂಲಕ ಸ್ವಾಭಿಮಾನ ಬದುಕು ಬಯಸುವವರು ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ನೆನೆಯುತ್ತೇವೆ ಎಂದು ತಿಳಿಸಿದರು.

ಸಂವಿಧಾನ ಪುಸ್ತಕ ಓದಿದಾಗ ಮಾತ್ರ ಅಂಬೇಡ್ಕರ್ ದೇಶದ ಜನರಿಗೆ ಅರ್ಥವಾಗುತ್ತಾರೆ. ಜೊತೆಗೆ ಅಂಬೇಡ್ಕರ್ ಆಶಯ ಈಡೇರಿದಾಗ ಅವರ ಕನಸು ನನಸಾಗುತ್ತದೆ. ಅಂಬೇಡ್ಕರ್ ವಾದದ ಮೂಲಕ ಎಲ್ಲರೂ ಮತೀಯ ವಾದ ಸೋಲಿಸುವ ಕೆಲಸ ಮಾಡೋಣ ಎಂದು ಮನವಿ ಮಾಡಿದರು.

ಉರಿಲಿಂಗಿ ಪೆದ್ದಿ ಮಹಾಸಂಸ್ಥಾನ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಭಾರತದ 140 ಕೋಟಿ ಜನರ ಬದಕನ್ನು ಪೆನ್ನಿನ ಮೂಲಕ ಬರೆಯುವ ಮೂಲಕ ಅಂಬೇಡ್ಕರ್ ಪೆನ್ನಿನಲ್ಲಿ ಬದುಕಿದ್ದಾರೆ. ಆದ್ದರಿಂದ, ಮಕ್ಕಳ ಕೈಯಲ್ಲಿ ಪೆನ್ನು ಕೊಟ್ಟು ಜ್ಞಾನ ನೀಡಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಬೆಂಕಿ ಹಂಚುವವರು ನಿಜವಾದ ಭಯೋತ್ಪಾದಕರು. ಅಂಬೇಡ್ಕರ್ ಜಾತಿಗೆ ಸೀಮಿತ ಮಾಡಬಾರದು. ದೇಶದಲ್ಲಿ ಸಂವಿಧಾನವೇ ‘ಸುಪ್ರೀಂ’ ಆಗಿದ್ದು, ಪ್ರಧಾನಿ, ರಾಷ್ಟ್ರಪತಿಯಲ್ಲ. ಅಂಬೇಡ್ಕರ್ ಅವರನ್ನು ಕಟೌಟ್ ಮೂಲಕ ಬೀದಿಯಲ್ಲಿ ನಿಲ್ಲಿಸಬಾರದು. ಮನೆ ಮನೆಗೆ ಅಂಬೇಡ್ಕರ್ ವಿಚಾರ, ಜ್ಞಾನ ತೆಗೆದುಕೊಂಡು ಹೋದಾಗ ಮಾತ್ರ ಸಾರ್ಥಕವಾಗುತ್ತದೆ ಎಂದರು.

ರಾಜ್ಯದಲ್ಲಿ ಕಡಿಮೆ ಜನ ಸಂಖ್ಯೆ ಇರುವವರು, ವಿವಿಧ ಸಮುದಾಯದವರು ಮುಖ್ಯಮಂತ್ರಿಯಾಗಿದ್ದಾರೆ. ಆದರೆ, 1 ಕೋಟಿ 20 ಲಕ್ಷಕ್ಕೂ ಅಧಿಕ ಜನರಿರುವವರು ರಾಜ್ಯದ ಸಿ.ಎಂ ಆಗದಿರುವುದು ದುರದೃಷ್ಟಕರ. ದೇಶ ಮೋಸ ಮಾಡುವವರ ಕೈಯಲ್ಲಿದೆ ಎಂದು ಟೀಕಿಸಿದರು.

ಮಾಜಿ ಸಂಸದ ಎ.ಸಿದ್ದರಾಜು, ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಕೊಳ್ಳೇಗಾಲದ ಚೆನ್ನಾಲಿಂಗನಹಳ್ಳಿ ಜೇತವನ ವಿಹಾರದ ಮನೋರಕ್ಷಿತ ಭಂತೇಜೀ ಆಶೀರ್ವಚನ ನೀಡಿದರು.

ಅಗತಗೌನಹಳ್ಳಿ ಗ್ರಾಮದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 

ನಿವೃತ್ತ ಪ್ರಾಂಶುಪಾಲ ಡಾ.ಎ.ಸೋಮಶೇಖರಮೂರ್ತಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಆಂಜನೇಯ, ಮಾದಯ್ಯ, ಕೃಷ್ಣಕುಮಾರ್, ಬ್ಯಾಂಕ್ ಅಧಿಕಾರಿ ಶಿವರಾಜು, ಅಣ್ಣಯ್ಯ, ಮಾದಯ್ಯ, ಶಿವಮಲ್ಲು, ಬಸವರಾಜು, ಬೊಮ್ಮಯ್ಯ, ರಾಘವೇಂದ್ರ ಅಪುರ ದೇವರಾಜು ಇದ್ದರು.

ಅಂಬೇಡ್ಕರ್ ಸಂವಿಧಾನದ ಮೂಲಕ ಸಮಾನತೆ ಕೊಟ್ಟಿದ್ದಾರೆ. ಅವರ ಮಾರ್ಗದಲ್ಲಿ ಎಲ್ಲರೂ ನಡೆಯೋಣ
ಎಚ್.ಎಂ.ಗಣೇಶಪ್ರಸಾದ್ ಶಾಸಕ
‘ಹಿಂದುತ್ವ ಬೇಡ. ಮುಂದುತ್ವ ಬೇಕು’
‘ಸ್ಮೃತಿ ಧರ್ಮದಲ್ಲಿ ಮನುಷ್ಯತ್ವವೇ ಇಲ್ಲ. ಆದ್ದರಿಂದಲೇ ಅದನ್ನು ಬುದ್ದ ಬಸವ ಅಂಬೇಡ್ಕರ್ ತಿರಸ್ಕರಿಸಿದರು’ ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.   ‘ವಿಜ್ಞಾನಕ್ಕೆ ವಿರುದ್ಧವಾದ ಧರ್ಮವನ್ನು ತಿರಸ್ಕರಿಸಿ ಎಂದು ವಿವೇಕಾನಂದರು ಹೇಳಿದ್ದಾರೆ. 2600 ವರ್ಷಗಳಿಂದಲೂ ಪುರೋಹಿತರು ಜ್ಞಾನವನ್ನು ಸುಡುತ್ತಿದ್ದಾರೆ. ಆದ್ದರಿಂದ ನಮಗೆ ಹಿಂದುತ್ವ ಬೇಡ. ಮುಂದುತ್ವ ಬೇಕು. 1030ನೇ ಇಸವಿಯಿಂದ ಈಚೆಗೆ ಹಿಂದೂ ಪದ ಬಂದಿದ್ದು ಹೀನ ಧೂಷಣೆಗೊಳಗಾದವನು ಹಿಂದೂ ಎನ್ನುತ್ತಾರೆ. ಆದ್ದರಿಂದ ನಾವು ಹಿಂದೂ ಎಂದು ಹೇಳಲು ಅವಮಾನ ಪಡಬೇಕು. ಆರ್‌ಎಸ್‍ಎಸ್ ರಾಷ್ಟ್ರೀಯ ಸುಳ್ಳುಗಾರರ ಸಂಘವಾಗಿದೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.