ಗುಂಡ್ಲುಪೇಟೆ: ಶವಗಳನ್ನು ಗೌರವಾನ್ವಿತವಾಗಿ ಸಂಸ್ಕಾರ ಮಾಡಬೇಕು ಎಂಬ ಉದ್ದೇಶದಿಂದ ಸರ್ಕಾರ ನೀಡಿರುವ ಶವ ಸಾಗಿಸುವ ವಾಹನ ರಿಪೇರಿಗೆ ಬಂದಿದ್ದು, ಅನಾಥ ಶವಗಳಂತೆ ಆಟೊಗಳಲ್ಲಿ ಸಾಗಿಸಿ ಅಂತ್ಯಕ್ರಿಯೆ ನಡೆಸುವಂತಾಗಿದೆ.
ಪಟ್ಟಣದ ಪುರಸಭೆಯ ಶವ ಸಾಗಿಸುವ ವಾಹನ ಕೆಟ್ಟು ನಿಂತು, ಜನರ ಅನುಕೂಲಕ್ಕೆ ಸಿಗದ ಪರಿಣಾಮ ಕುಟುಂಬಸ್ಥರು ಮೃತ ದೇಹವನ್ನು ಆಟೋದಲ್ಲಿ ಸಾಗಿಸಿ, ಅಂತ್ಯಕ್ರಿಯೆ ನಡೆಸುತ್ತಿದ್ದಾರೆ.
ಪಟ್ಟಣದ 11ನೇ ವಾರ್ಡ್ ನಿವಾಸಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಗರಾಜು ಮತ್ತು 10ನೇ ವಾರ್ಡ್‌ನ ಮಹದೇವ ಎಂಬುವರು ಶನಿವಾರ ತಡ ರಾತ್ರಿ ಮೃತಪಟ್ಟಿದ್ದು, ಸ್ಮಶಾನಕ್ಕೆ ಮೃತ ದೇಹ ಸಾಗಿಸಲು ಪುರಸಭೆಯ ವಾಹನದ ವ್ಯವಸ್ಥೆ ಇಲ್ಲದ ಕಾರಣ ಪರದಾಡಿದರು. ಹಣ ನೀಡಿ, ಬಾಡಿಗೆಗೆ ಆಟೊ ಪಡೆದು ಮೃತ ದೇಹವನ್ನು ಸ್ಮಶಾನಕ್ಕೆ ಸಾಗಿಸಿದರು. ಇದು ಸ್ಥಳೀಯರು ಹಾಗೂ ಮೃತರ ಸಂಬಂಧಿಕರು ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸಾರ್ವಜನಿಕ ಸ್ಮಶಾನವು ಪಟ್ಟಣದಿಂದ ಎರಡು ಕಿ.ಮೀ.ಗೂ ಅಧಿಕ ದೂರದಲ್ಲಿರುವ ಕಾರಣ ಮೃತ ದೇಹವನ್ನು ಹೊತ್ತುಕೊಂಡು ಹೋಗಲು ಸಾಧ್ಯವಿಲ್ಲ. ಇದಕ್ಕಾಗಿ ಪುರಸಭೆಯಲ್ಲಿ ಶವ ಸಾಗಿಸುವ ಎರಡು ವಾಹನ ಮೀಸಲಿರಿಸಲಾಗಿದೆ. ಆದರೆ, ವಾಹನ ದುರಸ್ತಿಗೊಂಡಿರುವ ಪರಿಣಾಮ ಸ್ಥಳೀಯರು ಹಾಗೂ ಸಂಬಂಧಿಕರು ಮೃತ ದೇಹವನ್ನು ಖಾಸಗಿ ವಾಹನಗಳಲ್ಲಿ ಸಾಗಿಸುವಂತಾಗಿದೆ. ಇದು ಪುರಸಭೆ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ನಿರ್ವಹಣೆ ಕೊರತೆ: ಪಟ್ಟಣ ಪುರಸಭೆಗೆ ಸರ್ಕಾರದ ಅನುದಾನ ಹಾಗೂ ಸ್ಥಳೀಯವಾಗಿ ಕಂದಾಯದ ರೂಪದಲ್ಲಿ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಶವ ಸಾಗಿಸುವ ವಾಹನವನ್ನು ನಿರ್ವಹಣೆ ಮಾಡದೆ, ರಿಪೇರಿ ನೆಪದಲ್ಲಿ ಮೂಲೆಯಲ್ಲಿ ನಿಲ್ಲಿಸಿರುವುದು ದುರದೃಷ್ಟಕರ. ಕೂಡಲೇ ವಾಹನ ದುರಸ್ತಿಪಡಿಸಿ ಜನರ ಬಳಕೆಗೆ ನೀಡಬೇಕೆಂದು ಕರವೇ ಟೌನ್ ಅಧ್ಯಕ್ಷ ರಾಜೇಂದ್ರ ವಿ.ನಾಯಕ್ ಒತ್ತಾಯಿಸಿದ್ದಾರೆ.
ಶವ ಸಾಗಣೆಯ ಎರಡು ವಾಹನಗಳು ದುರಸ್ತಿಗೆ ಬಂದಿದ್ದು ರಿಪೇರಿಗೆ ಕಳುಹಿಸಲಾಗಿದೆ. ವಾರದೊಳಗೆ ಸರಿಪಡಿಸಲಾಗುವುದು. ಕಾರಿನ ಬದಲು ಶವ ಸಾಗಣೆಗೆ ದೊಡ್ಡ ವಾಹನ ಖರೀದಿಸಲಾಗುವುದು.– ಶರವಣ, ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.