ADVERTISEMENT

ಚಾಮರಾಜನಗರ | ಬಿರುಗಾಳಿ ಸಹಿತ ಮಳೆ: ರೆಡ್ ಅಲರ್ಟ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2025, 15:54 IST
Last Updated 25 ಮೇ 2025, 15:54 IST
ಗುಂಡ್ಲುಪೇಟೆ ತಾಲ್ಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ರೈತ ವಿರೂಪಾಕ್ಷ ಅವರ ತೋಟದಲ್ಲಿ ಬೆಳೆಯಲಾಗಿದ್ದ ಬಾಳೆ ಗಿಡಗಳು ಬಿರುಗಾಳಿ ಮಳೆಗೆ ನೆಲಕ್ಕುರುಳಿರುವುದು 
ಗುಂಡ್ಲುಪೇಟೆ ತಾಲ್ಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ರೈತ ವಿರೂಪಾಕ್ಷ ಅವರ ತೋಟದಲ್ಲಿ ಬೆಳೆಯಲಾಗಿದ್ದ ಬಾಳೆ ಗಿಡಗಳು ಬಿರುಗಾಳಿ ಮಳೆಗೆ ನೆಲಕ್ಕುರುಳಿರುವುದು    

ಚಾಮರಾಜನಗರ: ರಾಜ್ಯಕ್ಕೆ ಮುಂಗಾರು ಪ್ರವೇಶ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶನಿವಾರ ಬಿರುಸಿನ ಮಳೆ ಸುರಿಯಿತು. ಬೆಳಿಗ್ಗೆ ತಂಪುಗಾಳಿಯ ಜೊತೆಗೆ ಮೋಡಕವಿದ ವಾತಾವರಣ ನಿರ್ಮಾಣವಾಗಿ ಮಧ್ಯಾಹ್ನದ ಹೊತ್ತಿಗೆ ಬಿರುಸಾದ ಮಳೆ ಆರಂಭವಾಯಿತು. 

ಕೆಲವು ತಾಸು ನಿರಂತರವಾಗಿ ಸುರಿದ ಮಳೆಯಿಂದ ನಗರದ ರಸ್ತೆಗಳು ಜಲಾವೃತಗೊಂಡು ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಆಗಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ನಗರದಲ್ಲಿ ‌ಚರಂಡಿ ತ್ಯಾಜ್ಯ ರಸ್ತೆಗೆ ಹರಿದು ನಾಗರಿಕರು ಕಿರಿಕಿರಿ ಅನುಭವಿಸಿದರು.

ತೋಟಗಾರಿಕಾ ಬೆಳೆಗೆ ಹಾನಿ:

ADVERTISEMENT

ಮಳೆಯ ಜೊತೆಗೆ ಗಾಳಿಯ ಅಬ್ಬರ ಹೆಚ್ಚಾಗಿದ್ದರಿಂದ ಜಿಲ್ಲೆಯಾದ್ಯಂತ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಾಳೆಯ ಗಿಡಗಳು ಧರೆಗುರುಳಿದ್ದು ಅಪಾರ ನಷ್ಟ ಸಂಭವಿಸಿದೆ. ತಾಲ್ಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ರೈತ ವಿರೂಪಾಕ್ಷ ಅವರ ತೋಟದಲ್ಲಿ ಬೆಳೆಯಲಾಗಿದ್ದ 500 ಬಾಳೆಯ ಗಿಡಗಳು ನೆಲಕ್ಕುರುಳಿವೆ. 

ಬಾಳೆ ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಿದ್ದ ಬಾಳೆ ಬಿರುಗಾಳಿ ಮಳೆಗೆ ಸಂಪೂರ್ಣ ಹಾಳಾಗಿದ್ದು ರೈತ ವಿರೂಪಾಕ್ಷ ಕಂಗಾಲಾಗಿದ್ದಾರೆ. ಸುಮಾರು ₹ 3 ರಿಂದ ₹ 4 ಲಕ್ಷ ನಷ್ಟ ಹಾನಿ ಅಂದಾಜಿಸಲಾಗಿದ್ದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮುಂಗಾರು ಪ್ರವೇಶ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ರೆಡ್ ಅಲರ್ಟ್ ಘೋಷಿಸಿದೆ.

ಚಾಮರಾಜನಗರದಲ್ಲಿ ಶನಿವಾರ ಉತ್ತಮ ಮಳೆ ಸುರಿಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.