ADVERTISEMENT

ಹೆಗ್ಗೋಠಾರ ಪ್ರಕರಣ- ಆರೋಪಿ ಸೆರೆ; ಪೊಲೀಸರ ಮುಂದೆ ಸಂತ್ರಸ್ತೆ ಹೇಳಿಕೆ

ಹೆಗ್ಗೋಠಾರ ಪ್ರಕರಣ, ಪ್ರತಿಭಟನೆ ಕೈಬಿಟ್ಟ ಸಂಘಟನೆಗಳು, ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 4:17 IST
Last Updated 23 ನವೆಂಬರ್ 2022, 4:17 IST
ಹೆಗ್ಗೋಠಾರ ಗ್ರಾಮದಲ್ಲಿರುವ ಅಸ್ಪೃಶ್ಯತೆ ಆಚರಣೆಯನ್ನು ದೂರಮಾಡಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮದ ಪರಿಶಿಷ್ಟ ಸಮುದಾಯದ ಮುಖಂಡರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್‌ ಅನೂಶ್‌ ಅವರಿಗೆ ಮನವಿ ಸಲ್ಲಿಸಿದರು
ಹೆಗ್ಗೋಠಾರ ಗ್ರಾಮದಲ್ಲಿರುವ ಅಸ್ಪೃಶ್ಯತೆ ಆಚರಣೆಯನ್ನು ದೂರಮಾಡಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮದ ಪರಿಶಿಷ್ಟ ಸಮುದಾಯದ ಮುಖಂಡರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್‌ ಅನೂಶ್‌ ಅವರಿಗೆ ಮನವಿ ಸಲ್ಲಿಸಿದರು   

ಚಾಮರಾಜನಗರ: ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿರುವ ಅಸ್ಪೃಶ್ಯತೆ ಆಚರಣೆ ಪ್ರಕರಣದ ಆರೋಪಿ ಮಹದೇವಪ್ಪ (55) ಅವರನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ, ಎಚ್‌.ಡಿ.ಕೋಟೆ ತಾಲ್ಲೂಕಿನ ಸರಗೂರಿನ ಯಶವಂತಪುರದ ಶಿವಮ್ಮ ಅವರು ನಗರಕ್ಕೆ ಬಂದು ಪೊಲೀಸರ ಮುಂದೆ ಹೇಳಿಕೆ ನೀಡಿದರು. ಘಟನೆಯನ್ನು ನೋಡಿದ ಹಾಗೂ ಟ್ಯಾಂಕ್‌ನಿಂದ ನೀರು ಖಾಲಿ ಮಾಡುತ್ತಿರುವ ದೃಶ್ಯವನ್ನು ಸೆರೆಹಿಡಿದ ಯುವಕ ಮಹದೇವಸ್ವಾಮಿ ಹಾಗೂ ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸರಗೂರಿನ ಮತ್ತೊಬ್ಬ ಯುವಕ ಸ್ವಾಮಿ ಅವರೂ ಜೊತೆಗಿದ್ದರು.

ಮೂರು ದಿನಗಳ ನಂತರ ಬಂಧನ: ಹೆಗ್ಗೋಠಾರ ಗ್ರಾಮದಲ್ಲಿ 18ರ ಮಧ್ಯಾಹ್ನ ಈ ಘಟನೆ ನಡೆದಿತ್ತು. ವಿಡಿಯೊವನ್ನು ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ ನಂತರ, 19ರಂದು ಬೆಳಕಿಗೆ ಬಂದಿತ್ತು. ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ನಂತರ ಭಾನುವಾರ ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿ ಜಾತಿ ನಿಂದನೆ ಪ್ರಕರಣ ದಾಖಲಾಗುವಂತೆ ನೋಡಿಕೊಂಡರು.

ADVERTISEMENT

ಗ್ರಾಮದದ ಪರಿಶಿಷ್ಟ ಸಮುದಾಯದ ಮುಖಂಡ ಗಿರಿಯಪ್ಪ ನೀಡಿರುವ ದೂರಿನ ಮೇರೆಗೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಭಾನುವಾರ ಸಂಜೆ ಪ್ರಕರಣ ದಾಖಲಿಸಿಕೊಂಡಿದ್ದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌.ಸುಂದರ್‌ರಾಜ್‌, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಭಾನುವಾರ ಗ್ರಾಮಕ್ಕೆ ತೆರಳಿ ಪರಿಶಿಷ್ಟ ಸಮುದಾಯದ ಮುಖಂಡರು ಹಾಗೂ ಲಿಂಗಾಯತ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದರು.

ಆರೋಪಿಯನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಭರವಸೆಯನ್ನು ಪರಿಶಿಷ್ಟ ಜಾತಿಯ ಮುಖಂಡರು ಹಾಗೂ ಸಂಘಟನೆಗಳ ಪ್ರತಿನಿಧಿಗಳಿಗೆ ನೀಡಿದ್ದರು.

ಬಳಿಕ ಪೊಲೀಸ್‌ ಅಧಿಕಾರಿಗಳು ಲಿಂಗಾಯತ ಸಮುದಾಯದವರೊಂದಿಗೂ ಮಾತನಾಡಿದ್ದರು. ಪ್ರಕರಣದಲ್ಲಿ ಆರೋಪಿ ಮಹದೇವಪ್ಪ ಅವರ ಬಂಧನ ಅನಿವಾರ್ಯ ಎಂಬುದನ್ನು ಮುಖಂಡರಿಗೆ ಮನದಟ್ಟು ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ಇದಾಗಿ ಕೆಲವೇ ಗಂಟೆಗಳಲ್ಲಿ ಮಹದೇವಪ್ಪ ಅವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಮಹದೇವಪ್ಪ ಅವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದ ಪೊಲೀಸರು, ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಗಳವಾರ ಬೆಳಿಗ್ಗೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾಮದ ಪರಿಶಿಷ್ಟ ಸಮುದಾಯದ ಮುಖಂಡ ಕುಮಾರ್‌ ಅವರು, ‘ಘಟನೆಗೆ ಕಾರಣರಾದ ವ್ಯಕ್ತಿಯನ್ನು ಬಂಧಿಸದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದೆವು. ಸೋಮವಾರ ರಾತ್ರಿಯೇ ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಹಾಗಾಗಿ, ನಾವು ಪ್ರತಿಭಟನೆ ನಡೆಸುವುದಿಲ್ಲ. ನಮ್ಮ ಗ್ರಾಮದಲ್ಲಿ ಇನ್ನೂ ಕೆಲವು ಸಮಸ್ಯೆಗಳಿವೆ. ಅದನ್ನು ವಾರದಲ್ಲಿ ಪರಿಹರಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಿದ್ದೇವೆ’ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಕೆ.ಎಂ.ನಾಗರಾಜು, ಮುಖಂಡರಾದ ಅಣಗಳ್ಳಿ ಬಸವರಾಜು, ಬ್ಯಾಡಮೂಡ್ಲು ಬಸವಣ್ಣ, ಗ್ರಾಮದ ದುಂಡುಮಾದಯ್ಯ, ಗಿರಿಯಪ್ಪ ಇದ್ದರು.

ಅಸ್ಪೃಶ್ಯತೆ ಆಚರಣೆ; ಜಿಲ್ಲಾಧಿಕಾರಿಗೆ ಮನವಿ

ಹೆಗ್ಗೋಠಾರ ಗ್ರಾಮದ ಮುಖಂಡರು ಹಾಗೂ ದಲಿತ ಸಂಘಟನೆಗಳ ಪ್ರತಿನಿಧಿಗಳು ಒಟ್ಟಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ, ಗ್ರಾಮದಲ್ಲಿ ಹಲವು ಅಸ್ಪೃಶ್ಯತೆ ಆಚರಣೆಗಳಿದ್ದು, ಇದರ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ಪರಿಶಿಷ್ಟ ಜಾತಿಯವರಿಗೆ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಮುಕ್ತ ಪ್ರವೇಶ ನಿರಾಕರಿಸುತ್ತಿದ್ದಾರೆ. ಈ ದೇಗುಲವನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಗ್ರಾಮದ ಹೋಟೆಲ್‌ಗಳಲ್ಲೂ ಒಳ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಗ್ರಾಮದಲ್ಲಿ ಕುಡಿಯುವ ನೀರು ಬಿಡುವುದಕ್ಕಾಗಿ ಸ್ವಜಾತಿ ಬೀದಿಗಳಿಗೆ ಸ್ವಜಾತಿಯವರನ್ನೇ ನೇಮಕ ಮಾಡಿಕೊಂಡಿದ್ದಾರೆ. ಇದನ್ನು ಬದಲಾಯಿಸಬೇಕು. ಎಲ್ಲ ತೊಂಬೆಗಳಲ್ಲೂ ನೀರು ತೆಗೆದುಕೊಳ್ಳಲು ಅಸ್ಪೃಶ್ಯತೆ ಆಚರಣೆ ಇದ್ದು ಇದನ್ನು ಈಗಲೇ ಸರಿಪಡಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಭವನದ ಸುತ್ತಲೂ ಗ್ರಾಮದ ಗಲೀಜು ನೀರು ಬಂದು ನಿಂತಿದ್ದು, ಮುಂದೆ ಹೋಗದಂತೆ ಸವರ್ಣೀಯರು ತಡೆ ಹಿಡಿದಿದ್ದಾರೆ’ ಎಂದು ಮನವಿಯಲ್ಲಿ ದೂರಿದ್ದಾರೆ.

‘ಪಿಡಿಒ ಅವರನ್ನು ಕೂಡಲೇ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳುವುದು. ಗ್ರಾಮದ ಸರ್ವೆ ನಂ. 260/2 ರಲ್ಲಿರುವ ತಿಪ್ಪೆಗುಂಡಿಯನ್ನು ಮೇಲ್ವರ್ಗದವರು ಮಾತ್ರ ಉಪಯೋಗಿಸುತ್ತಿದ್ದು, ದಲಿತರಿಗೆ ಪ್ರವೇಶವನ್ನು ಕೊಡುತ್ತಿಲ್ಲ. ವಾರದೊಳಗೆ ಈ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ’ ಎಂದು ಮನವಿಯಲ್ಲಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಸಂತ್ರಸ್ತೆ ಶಿವಮ್ಮ ಹೇಳಿಕೆ...

ಡಿವೈಎಸ್‌ಪಿ ಕಚೇರಿಯಲ್ಲಿ ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡುವುದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತೆ ಶಿವಮ್ಮ,‘ಮದುವೆಯಲ್ಲಿ ಪಾಲ್ಗೊಳ್ಳುವುದಕ್ಕೆ ಹೆಗ್ಗೋಠಾರಕ್ಕೆ ಬಂದಿದ್ದೆ. ಮಧ್ಯಾಹ್ನ ಊಟ ಮಾಡಿ ವಾಹನಕ್ಕೆ ಹತ್ತುವ ಮೊದಲು ಟ್ಯಾಂಕ್‌ನಿಂದ ನೀರು ಕುಡಿದೆ. ಮತ್ತೆ ನೀರು ಕುಡಿಯುವುದಕ್ಕೆ ಬಂದಾಗ, ಈ ಸಂದರ್ಭದಲ್ಲಿ ಅಲ್ಲಿದ್ದ ವ್ಯಕ್ತಿ, ‘ನೀವು ಮುಟ್ಟಬೇಡಿ ಕಣಮ್ಮ, ನಿಮ್ಮ ಜಾತಿ ಯಾವುದು’ ಎಂದು ಕೇಳಿದರು. ‘ನಾನು ಎಸ್‌ಸಿ’ ಎಂದಾಗ, ‘ನೀವು ಇಲ್ಲಿ ಕುಡಿಯಬಾರದು’ ಎಂದರು’ ಎಂದು ಘಟನೆ ವಿವರಿಸಿದರು.

ಟ್ಯಾಂಕ್‌ನ ನಾಲ್ಕೂ ನಲ್ಲಿ ತೆರೆದು ನೀರು ಖಾಲಿ ಮಾಡುತ್ತಿದ್ದ ವಿಡಿಯೊ ಚಿತ್ರೀಕರಣ ಮಾಡಿದ್ದ ನಂಜನಗೂಡು ತಾಲ್ಲೂಕಿನ ಇಂದಿರಾನಗರದ ಮಹದೇವಸ್ವಾಮಿ ಮಾತನಾಡಿ, ‘ಘಟನೆ ನಡೆದಾಗ ನಾನು ಸ್ಥಳದಲ್ಲಿದ್ದೆ. ಶಿವಮ್ಮ ಅವರು ನಡೆದ ಘಟನೆಯನ್ನು ವಿವರಿಸಿದರು. ಬಳಿಕ ಅವರನ್ನು ಪ್ರಶ್ನಿಸಿದ್ದ ವ್ಯಕ್ತಿ ನಮ್ಮ ಎದುರೆ ಟ್ಯಾಂಕ್‌ನ ನಲ್ಲಿ ತೆರೆದು ನೀರು ಖಾಲಿ ಮಾಡಿದರು. ಅದನ್ನು ಚಿತ್ರೀಕರಣ ಮಾಡಿದೆ. ನಾವು ಅಲ್ಲಿಂದ ಹೊರಡುವವರೆಗೂ ಅವರು ಅಲ್ಲಿಯೇ ಇದ್ದರು. ಗೋಮೂತ್ರ ಎಲ್ಲ ಹಾಕಿ ಆ ಜಾಗವನ್ನು ಅವರು ಸ್ವಚ್ಛಗೊಳಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.