ADVERTISEMENT

ಚಾಮರಾಜನಗರ: ಪ್ರೌಢಶಾಲೆಗಳಲ್ಲಿ ಎಂದಿನಂತೆ ಪಾಠ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 16:53 IST
Last Updated 14 ಫೆಬ್ರುವರಿ 2022, 16:53 IST
ಚಾಮರಾಜನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸಂಜೆ ತರಗತಿ ಮುಗಿಸಿ ಹೊರ ಬಂದ ವಿದ್ಯಾರ್ಥಿಗಳು
ಚಾಮರಾಜನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸಂಜೆ ತರಗತಿ ಮುಗಿಸಿ ಹೊರ ಬಂದ ವಿದ್ಯಾರ್ಥಿಗಳು   

ಚಾಮರಾಜನಗರ: ಹಿಜಾಬ್‌, ಕೇಸರಿ ಶಾಲು ವಿವಾದದ ಕಾರಣಕ್ಕೆ ಸರ್ಕಾರ ಘೋಷಿಸಿದ್ದ ಮೂರು ದಿನದ ರಜೆ ಬಳಿಕ ಸೋಮವಾರ ಜಿಲ್ಲೆಯಾದ್ಯಂತ ಪ್ರೌಢಶಾಲೆಗಳು ಆರಂಭಗೊಂಡಿದ್ದು, ತರಗತಿಗಳು ಎಂದಿನಂತೆ ನಡೆದಿವೆ.

ಜಿಲ್ಲೆಯ ಯಾವ ಶಾಲೆಯಲ್ಲೂ ವಿವಾದ ಸುಳಿದಾಡಿಲ್ಲ. ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ವಿದ್ಯಾರ್ಥಿಗಳು ಎಂದಿನಂತೆ ಶಾಲೆಗಳಿಗೆ ಬಂದು ಪಾಠ ಕೇಳಿದ್ದಾರೆ.

ADVERTISEMENT

ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಶಾಲೆಗಳ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಎಲ್ಲ ಶಾಲೆಗಳಲ್ಲಿ ಮಫ್ತಿಯಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಿತ್ತು.

ಅಧಿಕಾರಿಗಳ ಭೇಟಿ: ಸರ್ಕಾರಿ ಪ್ರೌಢಶಾಲೆಗಳಿಗೆ ಶಿಕ್ಷಣ ಇಲಾಖೆ, ಪೊಲೀಸ್‌ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎನ್‌.ಮಂಜುನಾಥ್‌, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಆಯಾ ತಾಲ್ಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸ್ಥಳೀಯ ಠಾಣೆಯ ಇನ್‌ಸ್ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‌ಗಳು ಸೂಕ್ಷ ಪ್ರದೇಶದಲ್ಲಿರುವ ಶಾಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

‘ಜಿಲ್ಲೆಯಲ್ಲಿ ಯಾವುದೇ ಶಾಲೆಯಲ್ಲಿ ಸಮಸ್ಯೆ ಉಂಟಾಗಿಲ್ಲ. ಎಂದಿನಂತೆ ತರಗತಿ ನಡೆದಿವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿಡಿಪಿಐ ಮಂಜುನಾಥ್‌ ಪ್ರತಿಕ್ರಿಯಿಸಿ ‘ಜಿಲ್ಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದು, ಯಾವುದೇ ವ್ಯತಿರಿಕ್ತ ಘಟನೆ ವರದಿಯಾಗಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.