ADVERTISEMENT

ಮಳೆಯಿಂದ ಮನೆ ಹಾನಿ; ಶಾಸಕ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 18:10 IST
Last Updated 14 ಅಕ್ಟೋಬರ್ 2020, 18:10 IST
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಮಚವಾಡಿ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದಾಗಿ ಕುಸಿದ ಮನೆಗಳನ್ನು ವೀಕ್ಷಿಸಿದರು
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಮಚವಾಡಿ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದಾಗಿ ಕುಸಿದ ಮನೆಗಳನ್ನು ವೀಕ್ಷಿಸಿದರು   

ಚಾಮರಾಜನಗರ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಅಮಚವಾಡಿ, ಮೇಗಲಹುಂಡಿ ಗ್ರಾಮದ ಉಪ್ಪಾರ ಬಡಾವಣೆಗಳಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿದ್ದು, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಮಳೆಯಿಂದಾಗಿ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಅವು ಕುಸಿದರೆ ನಮಗೆ ವಾಸಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಬಿರುಕು ಬಿಡುತ್ತಿರುವ ಮನೆಗಳನ್ನು ದುರಸ್ತಿ ಪಡಿಸಬೇಕು. ಹೊಸದಾಗಿ ಮನೆಗಳನ್ನು ಮಂಜೂರು ಮಾಡಿಸಿಕೊಡಬೇಕು’ ಎಂದು ನಿವಾಸಿಗಳು ಶಾಸಕರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುಟ್ಟರಂಗಶೆಟ್ಟಿ ಅವರು, ‘ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣದಿಂದ ಮನೆಗಳ ಗೋಡೆ ಕುಸಿದು ಜನರು ಸಂಕಷ್ಟದಲ್ಲಿದ್ದಾರೆ. ಮನೆ ಇಲ್ಲದವರ ಪಟ್ಟಿ ತಯಾರಿಸಿ ಶೀಘ್ರದಲ್ಲಿ ಮನೆನಿರ್ಮಿಸಿಕೊಡಬೇಕು’ ಎಂದು ಜೊತೆಯಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಕುಸಿದಿರುವ ಮನೆಗಳಿಗೆ ಪರಿಹಾರ ದೊರಕಿಸಿಕೊಡಲಾಗುವುದು ಎಂದು ನಿವಾಸಿಗಳಿಗೆ ಭರವಸೆ ನೀಡಿದ ಅವರು, ಅಧಿಕಾರಿಗಳು ವಿಳಂಬ ಮಾಡದೇ, ಆದಷ್ಟು ಬೇಗ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಸ್ಥಳದಲ್ಲಿದ್ದ ತಾಲ್ಲೂಕು ಪಂಚಾಯಿತಿ ಕಾರ‍್ಯನಿರ್ವಾಹಕ ಅಧಿಕಾರಿ ಪ್ರೇಂಕುಮಾರ್‌ ಅವರಿಗೆ ಸೂಚಿಸಿದರು.

ತೀವ್ರ ಹಾನಿಗೊಳಗಾದ ಮನೆಗಳ ನಿವಾಸಿಗಳಿಗೆ ಶಾಸಕರು ವೈಯಕ್ತಿಕವಾಗಿ ಪರಿಹಾರ ನೀಡಿದರು.

ಎಪಿಎಂಸಿ ಸದಸ್ಯ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ಮುಖಂಡರಾದ ಮಾದಮ್ಮ, ರಾಜಸ್ವ ನಿರೀಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.