ಹನೂರು: ‘ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ನಿಗದಿತ ಸಮಯದೊಳಗೆ ಮಾಡಿಕೊಡಬೇಕು, ಮಾಡಿಕೊಡದೆ ಸತಾಯಿಸುವುದು, ಲಂಚ ಕೇಳುವುದು ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಲೋಕಾಯುಕ್ತ ಇನ್‌ಸ್ಪೆಕ್ಟರ್ ಲೋಹಿತ್ ಕುಮಾರ್ ಎಚ್ಚರಿಕೆ ನೀಡಿದರು.
ಪಟ್ಟಣದ ಲೋಕೊಪಯೋಗಿ ಅತಿಥಿ ಗೃಹದಲ್ಲಿ ಬುಧವಾರ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ದೂರು ಸ್ವೀಕರಿಸಿ ಮಾತನಾಡಿದ ಅವರು, ‘ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದೊಳಗೆ ಮಾಡಿಕೊಳ್ಳಲು ಸರ್ಕಾರ ‘ಸಕಾಲ’ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಸಕಾಲದಲ್ಲಿ ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ಸರಿಯಾದ ಮಾಹಿತಿ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದು’ ಎಂದು ತಿಳಿಸಿದರು.
ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಬಸವರಾಜು ಮಾತನಾಡಿ, ‘ಹನೂರು– ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವ ಮಂಗಲ ಗ್ರಾಮದ ವ್ಯಕ್ತಿಯೊಬ್ಬರು, ಉಲ್ಲೇಪುರ ಸರ್ವೆ ನಂಬರ್ 356 ರಲ್ಲಿ 5.94 ಎಕರೆ, 355ರಲ್ಲಿ 5.50 ಎಕರೆ ಜಮೀನನ್ನು ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡು ಸರ್ಕಾರಿ ಭೂಮಿ ಕಬಳಿಕೆ ಮಾಡಲು ಹೊರಟಿರುವ ಬಗ್ಗೆ ಕಂದಾಯ ಇಲಾಖೆಯವರು ತೆರವು ಮಾಡುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾಧಿಕಾರಿಗಳೇ 2023ರಲ್ಲಿ ಒತ್ತುವರಿ ಜಮೀನನ್ನು ತೆರವು ಮಾಡುವಂತೆ ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಜಮೀನನ್ನು ರಕ್ಷಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಮನವಿ ಮಾಡಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಮಹದೇಶ್ ಮಾತನಾಡಿ, ‘ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ನಕಲಿ ಆರ್‌ಟಿಐ ಕಾರ್ಯಕರ್ತರ ಹಾವಳಿ ಹೆಚ್ಚಾಗಿದ್ದು, ಸಂಘ ಸಂಸ್ಥೆಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಅರ್ಜಿ ಸಲ್ಲಿಸಿ, ಅವರಿಗೆ ನಿಗದಿತ ದಿನಾಂಕದೊಳಗೆ ಮಾಹಿತಿ ಸಿಗದಿದ್ದರೆ ಅವರು ಮೇಲ್ಮನವಿಗೆ ಹೋಗಬೇಕು. ಆದರೆ ಇವರು ಅಧಿಕಾರಿಗಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಇಂತಹ ಆರ್‌ಟಿಐ ಕಾರ್ಯಕರ್ತರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಮನವಿ ಮಾಡಿದರು.
ಸಭೆಯಲ್ಲಿ ಚೆನ್ನಾಲಿಂಗನಹಳ್ಳಿ ಗ್ರಾಮದ ಸರ್ವೆ ನಂಬರ್‌ನಲ್ಲಿ ಸರ್ಕಾರಿ ಜಮೀನು ಒತ್ತುವರಿ, ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿ ಹೂಳು ತೆಗೆಯದೆ ಇರುವುದು, ಪುದುರಾಮಪುರ ವ್ಯಾಪ್ತಿಯಲ್ಲಿ ಜಮೀನಿಗೆ ಪೋಡಿ ಮಾಡದೆ ಇರುವುದು, ವಸತಿ ಯೋಜನೆಯಡಿ ಹಣ ಬಿಡುಗಡೆಯಾಗದೆ ಇರುವುದು, ದುಪ್ಪಟ್ಟು ಕಂದಾಯ ಹಾಕಿರುವುದು ಸೇರಿದಂತೆ ಹಲವು ದೂರುಗಳು ದಾಖಲಾದವು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ್, ಶಿರಸ್ತೇದಾರ್ ನಾಗೇಂದ್ರ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಶ್, ಆರ್‌ಎಫ್‌ಒ ನಿರಂಜನ್, ದೈಹಿಕ ಶಿಕ್ಷಣ ಸಂಯೋಜಕ ಮಹಾದೇವ್, ಗ್ರಾಮ ಆಡಳಿತಾಧಿಕಾರಿ ರಾಹುಲ್, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ರಮೇಶ್, ಭೂಮಾಪನ ಇಲಾಖೆಯ ಸಿಂಗರಾಜ್ ಶೆಟ್ಟಿ, ಪಟ್ಟಣ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ಪ್ರದೀಪ್, ಲೋಕಾಯುಕ್ತ ಕಚೇರಿಯ ಸಿಬ್ಬಂದಿ ಶ್ರೀನಿವಾಸ್ ಚಾಮರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.