ADVERTISEMENT

ಹನೂರು: ಸ್ವಾತಂತ್ರ್ಯ ಸಂಭ್ರಮದ ಹೊತ್ತಿನಲ್ಲಿ ಹರಿದಿತ್ತು ನೆತ್ತರು!

1992, ಆ.14ರಂದು ವೀರಪ್ಪನ್ ದಾಳಿಗೆ 6 ಪೊಲೀಸ್ ಅಧಿಕಾರಿಗಳು ಹುತಾತ್ಮ; ಘಟನೆಗೆ 32 ವರ್ಷ

ಬಿ.ಬಸವರಾಜು
Published 14 ಆಗಸ್ಟ್ 2024, 6:15 IST
Last Updated 14 ಆಗಸ್ಟ್ 2024, 6:15 IST
1992ರ ಆ.14ರಂದು ಮಲೆಮಹದೇಶ್ವರ ವನ್ಯಧಾಮದ ದಟ್ಟಾರಣ್ಯದಲ್ಲಿ ವೀರಪ್ಪನ್‌ ತಂಡದ ದಾಳಿಗೆ ಬಲಿಯಾದ ಪೊಲೀಸರು
1992ರ ಆ.14ರಂದು ಮಲೆಮಹದೇಶ್ವರ ವನ್ಯಧಾಮದ ದಟ್ಟಾರಣ್ಯದಲ್ಲಿ ವೀರಪ್ಪನ್‌ ತಂಡದ ದಾಳಿಗೆ ಬಲಿಯಾದ ಪೊಲೀಸರು   

ಹನೂರು: 1992ರ ಆ.14, ಇಡೀ ದೇಶ 41ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಹೊತ್ತಿನಲ್ಲೇ ಮಲೆಮಹದೇಶ್ವರ ವನ್ಯಧಾಮದ ದಟ್ಟಾರಣ್ಯದ ಮಧ್ಯೆ ರಕ್ತದ ಕೋಡಿ ಹರಿದಿತ್ತು. ವೀರಪ್ಪನ್ ಸೆರೆ ಕಾರ್ಯಾಚರಣೆಗೆ ತೆರಳಿದ್ದ ಆರು ಪೊಲೀಸರನ್ನು ಅವನದೇ ತಂಡ ಬರ್ಬರವಾಗಿ ಹತ್ಯೆ ಮಾಡಿತ್ತು. ಸ್ವಾತಂತ್ರ್ಯ ಸಂಭ್ರಮದ ಹೊತ್ತಿನಲ್ಲಿ ಸೂತಕದ ಛಾಯೆ ಆವರಿಸಿಬಿಟ್ಟಿತು.

ಮೂರು ದಶಕಗಳ ಕಾಲ ಅರಣ್ಯವನ್ನೇ ಅಡಗುದಾಣವನ್ನಾಗಿ ಮಾಡಿಕೊಂಡು ಅಟ್ಟಹಾಸ ಮೆರೆದು ಅಧಿಕಾರಿಗಳು ಹಾಗೂ ವನ್ಯಪ್ರಾಣಿಗಳನ್ನು ಮನಸೋ ಇಚ್ಛೆ ಬಲಿ ತೆಗೆದುಕೊಂಡಿದ್ದ ವೀರಪ್ಪನ್‌ ಸೆರೆಗಾಗಿ ಪೊಲೀಸರು ತಂತ್ರ ರೂಪಿಸಿದ್ದರು. ಅದರಂತೆ, ಅಂದು ಮೀಣ್ಯಂ ಬಳಿ ಆತನ ತಂಡ ಬೀಡುಬಿಟ್ಟಿರುವ ಮಾಹಿತಿ ಕಲೆ ಹಾಕಿದ ರಾಮಾಪುರ ಪೊಲೀಸ್ ಠಾಣೆಯ ಹರಿಕೃಷ್ಣ ನೇತೃತ್ವದ ತಂಡ ಕಾರ್ಯಾಚರಣೆಗೆ ಹೊರಟಿತ್ತು.

ಪೊಲೀಸರು ಬರುವ ಮಾಹಿತಿ ಅರಿತು ಹೊಂಚು ಹಾಕಿ ಕುಳಿತಿದ್ದ ವೀರಪ್ಪನ್ ತಂಡ ಬೂದಿಕೆರೆ ಪ್ರದೇಶದ ಬಳಿ ಪೊಲೀಸರ  ಮೇಲೆ ಗುಂಡಿನ ಮಳೆಯನ್ನೇ ಸುರಿಸಿತ್ತು.

ADVERTISEMENT

ಅಂದಿನ ಎಸ್ಪಿ ಟಿ.ಹರಿಕೃಷ್ಣ, ಪಿಎಸ್ಐ ಶಕೀಲ್ ಅಹಮದ್, ಎಎಸ್ಐ ಸೋಮಪ್ಪ ಎಸ್.ಬೆನಗೊಂಡ, ಸಿಬ್ಬಂದಿಗಳಾದ ಸಿ.ಎಂ ಕಾಳಪ್ಪ, ಸುಂದರ್ ಕೆ.ಎಂ. ಅಪ್ಪಚ್ಚು ಮೃತರಾಗಿದ್ದರು. ಇಂದಿಗೂ ಪ್ರತಿ ವರ್ಷ ಆ.14ರಂದು ಕರಾಳ ಘಟನೆಯನ್ನು ಜನತೆ ನೆನೆದು ಮರುಗುತ್ತಾರೆ. 

ಸ್ಮಾರಕ ನಿರ್ಮಾಣ: ಹುತಾತ್ಮ ಪೊಲೀಸರ ಸ್ಮರಣಾರ್ಥ ಬೂದಿಕೆರೆ ಅರಣ್ಯ ಪ್ರದೇಶದ ಬಳಿ ಪೊಲೀಸ್ ಇಲಾಖೆ ಸ್ಮಾರಕ ನಿರ್ಮಿಸಿ ಪ್ರತಿವರ್ಷ ಗೌರವ ಸಲ್ಲಿಸುತ್ತಿದೆ. ‘ಅಂದಿನ ಕೊಳ್ಳೇಗಾಲ ಡಿವೈಎಸ್ಪಿ ಚನ್ನಬಸವಣ್ಣ ಲಂಗೋಟಿ, ಇನ್‌ಸ್ಪೆಕ್ಟರ್ ರಾಜಣ್ಣ ಅವರ ಶ್ರಮದ ಪ್ರತಿಫಲವಾಗಿ ಸ್ಮಾರಕ ನಿರ್ಮಾಣವಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಪೊಲೀಸ್ ಸಿಬ್ಬಂದಿ.

ದಾಳಿಗಿಂತ ಮೂರು ತಿಂಗಳ ಹಿಂದೆ ಅಂದರೆ ಮೇ 20ರಂದು ರಾಮಾಪುರ ಠಾಣೆ ಮೇಲೆ ದಾಳಿ ಮಾಡಿ,  ಹೊರಗೆ ಮಲಗಿದ್ದ ಐವರು ಪೊಲೀಸರನ್ನು ಗುಂಡಿಟ್ಟು ಕೊಂದಿದ್ದ ವೀರಪ್ಪನ್‌.

ಮದ್ರಾಸ್ ಪ್ರಾಂತ್ಯದ ಆಡಳಿತಾವಧಿಯಲ್ಲಿ 1956ರಲ್ಲಿ ನಿರ್ಮಾಣವಾದ ಠಾಣೆಯನ್ನು ಸ್ಮಾರಕವನ್ನಾಗಿಸಿ, ಹುತಾತ್ಮ ಸಿಬ್ಬಂದಿಗೆ ಗೌರವ ಸಲ್ಲಿಸಬೇಕು ಎಂಬ ಪ್ರಸ್ತಾವವನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಬಿಜೆಪಿ ಸರ್ಕಾರದ ಮುಂದಿಟ್ಟಿದ್ದರು. 2020ರ ಫೆ.11ರಂದು ಠಾಣೆಗೆ ಭೇಟಿ ನೀಡಿದ್ದ ಅವರು ಕಟ್ಟಡ ದುರಸ್ತಿಗೊಳಿಸಿ ಸ್ಮಾರಕವನ್ನಾಗಿಸುವ ಮಾತನಾಡಿದ್ದರು. ಅಂದಿನ ಡಿಜಿಪಿ ಪ್ರವೀಣ್ ಸೂದ್ ಅವರಿಗೂ ಪತ್ರ ಬರೆದಿದ್ದರು. ಇಲಾಖೆಯಲ್ಲೂ ಚರ್ಚೆಯಾಗಿತ್ತು. ಆದರೆ, ಪ್ರಸ್ತಾವ ನನೆಗುದಿಗೆ ಬಿದ್ದಿದೆ.

ಹನೂರು ತಾಲೂಕಿನ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ದಾಳಿಗೆ ತುತ್ತಾಗಿ ಬಲಿಯಾದವರ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕ

ಕಹಿ ನೆನಪು ನೆನೆದು ಮರಗುವ ಈ ಭಾಗದ ಜನ ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ಸುರಿಮಳೆ ಠಾಣೆ ಸ್ಮಾರಕವಾಗಿಸುವ ಪ್ರಸ್ತಾವ ನನೆಗುದಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.