ADVERTISEMENT

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಆವಾಸ ವಿಸ್ತಾರ

ವನ್ಯಧಾಮದ ಹೊಸ ಹೊಸ ಜಾಗಗಳಲ್ಲಿ ಕಾಣಿಸಿಕೊಳ್ಳುತ್ತಿವೆ ವ್ಯಾಘ್ರಗಳು

ಬಿ.ಬಸವರಾಜು
Published 28 ಜುಲೈ 2020, 13:42 IST
Last Updated 28 ಜುಲೈ 2020, 13:42 IST
ಮಲೆ ಮಹದೇಶ್ವರ ವನ್ಯಧಾಮದ ಪೊನ್ನಾಚಿ ಭಾಗದಲ್ಲಿ ಇತ್ತೀಚೆಗೆ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾದ ಹುಲಿಯ ಚಿತ್ರ
ಮಲೆ ಮಹದೇಶ್ವರ ವನ್ಯಧಾಮದ ಪೊನ್ನಾಚಿ ಭಾಗದಲ್ಲಿ ಇತ್ತೀಚೆಗೆ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾದ ಹುಲಿಯ ಚಿತ್ರ   

ಹನೂರು: ಹುಲಿ ಸಂರಕ್ಷಿತ ಪ್ರದೇಶ ಎಂದು ಅಧಿಕೃತ ಘೋಷಣೆಗೆ ಕಾಯುತ್ತಿರುವ ಮಲೆ ಮಹದೇಶ್ವರ ವನ್ಯಧಾಮದ ಹೊಸ ಹೊಸ ಸ್ಥಳಗಳಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿದ್ದು, ಅರಣ್ಯ ಅಧಿಕಾರಿಗಳು ಹಾಗೂ ವನ್ಯಜೀವಿ ತಜ್ಞರ ಸಂತಸಕ್ಕೆ ಕಾರಣವಾಗಿದೆ.

ವನ್ಯಧಾಮದ ಕೆಲವೇ ಕೆಲವು ಪ್ರದೇಶಗಳಲ್ಲಿ ಕಂಡು ಬರುತ್ತಿದ್ದ ವ್ಯಾಘ್ರಗಳು ಈಗ ಎಲ್ಲ ಕಡೆ ಕಾಣಿಸಿಕೊಳ್ಳುತ್ತಿರುವುದನ್ನು ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ವನ್ಯಧಾಮದಲ್ಲಿ ಹುಲಿಗಳ ಆವಾಸ ಸ್ಥಾನ ವಿಸ್ತರಿಸುವುದರ ಜೊತೆಗೆ, ಅವುಗಳ ಸಂಖ್ಯೆಯೂ ಏರಿಕೆಯಾಗಿರಬಹುದು ಎಂಬುದನ್ನು ಈ ಬೆಳವಣಿಗೆ ತೋರಿಸುತ್ತದೆ ಎಂದು ಅರಣ್ಯ ಅಧಿಕಾರಿಗಳು ಹಾಗೂ ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವನ್ಯಧಾಮದಲ್ಲಿ 18ರಿಂದ 20 ಹುಲಿಗಳು ಇವೆ ಎಂದು ಕಳೆದ ವರ್ಷ ಹೇಳಲಾಗಿತ್ತು.

ADVERTISEMENT

ಮಲೆ ಮಹದೇಶ್ವರ ಮೀಸಲು ಸಂರಕ್ಷಿತ ಅರಣ್ಯ ಪ್ರದೇಶವನ್ನು 2013ರಲ್ಲಿ ವನ್ಯಧಾಮ ಎಂದು ಘೋಷಿಸಲಾಯಿತು. ಕೆಲವೇ ವಲಯಗಳಿಂದ ಪ್ರಾರಂಭವಾದ ವನ್ಯಧಾಮದಲ್ಲಿ ಅಪರೂಪಕೊಮ್ಮೆ ಹುಲಿ ಕಾಣಿಸಿಕೊಳ್ಳುತ್ತಿತ್ತು. ನಂತರದ ವರ್ಷಗಳಲ್ಲಿ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ವಿಂಗಡಣೆಯಾಗಿ ವನ್ಯಜೀವಿ ವಲಯಗಳು ಹೆಚ್ಚಾಗುವುದರ ಜೊತೆಗೆ ಸಂರಕ್ಷಣೆ ಕ್ರಮಗಳೂ ಹೆಚ್ಚಾಯಿತು.

ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ ಹಾಗೂ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ವನ್ಯಧಾಮವು ಹುಲಿಗಳ ವಾಸಕ್ಕೆ ಯೋಗ್ಯ ಸ್ಥಳವಾಗಿದೆ ಎಂಬುದು ಅಧಿಕಾರಿಗಳು ಹಾಗೂ ವನ್ಯಜೀವಿ ತಜ್ಞರ ಅನಿಸಿಕೆ.

ಹೆಚ್ಚಿದ ಹುಲ್ಲುಗಾವಲು: ಕೆಲವು ವಲಯಗಳಲ್ಲಿ ಹಿಂದೆ ಇದ್ದ ಹುಲ್ಲುಗಾವಲು ಪ್ರದೇಶದ ಜೊತೆಗೆ ಹೊಸದಾಗಿ ಕೃತಕ ಹುಲ್ಲುಗಾವಲು ಬೆಳೆಸಲಾಗಿದೆ.ರಾಮಾಪುರ, ಹೂಗ್ಯಂ, ಮಹದೇಶ್ವರ ಬೆಟ್ಟ ಹಾಗೂ ಪಾಲಾರ್ ವನ್ಯಜೀವಿ ವಲಯಗಳಲ್ಲಿ 250 ಎಕರೆ ವ್ಯಾಪ್ತಿಯಲ್ಲಿ ಹುಲ್ಲು ಬೆಳೆಸಲಾಗಿದೆ. ಹುಲಿಗಳ ಆವಾಸ ಸ್ಥಾನ ವಿಸ್ತರಿಸಲು ಹುಲ್ಲುಗಾವಲು ವ್ಯಾಪ್ತಿ ಹೆಚ್ಚಳವೂ ಒಂದು ಕಾರಣ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

‘ವನ್ಯಧಾಮ ಘೋಷಣೆಯಾದ ಬಳಿಕ 2013-14ರಲ್ಲಿ ನೇಚರ್ ಕನ್ಸರ್ವೇಷನ್ ಫೌಂಡೇಷನ್‌ ವತಿಯಿಂದ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿತ್ತು. ಆಗ ಬೆರಳೆಣಿಕೆಯ ಹುಲಿಗಳು ಕಾಣಿಸಿಕೊಂಡಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಇದುವರೆಗೂ ಕಾಣಿಸಿಕೊಳ್ಳದ ಸ್ಥಳಗಳಲ್ಲಿಯೂ ಹುಲಿಗಳು ಕಂಡು ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಬಲಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹುಲಿಗಳ ಆವಾಸ ಸ್ಥಾನ ವಿಸ್ತಾರವಾಗಲು ಕಾರಣವಾಗಿದೆ. ಶೀಘ್ರದಲ್ಲೇ ಹುಲಿ ಸಂರಕ್ಷಿತ ಪ್ರದೇಶವಾಗಲಿರುವ ಮಲೆಮಹದೇಶ್ವರ ವನ್ಯಧಾಮಕ್ಕೆ ಈ ಬೆಳವಣಿಗೆ ಪೂರಕವಾಗಿದೆ’ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ವರ್ಷಗಳಿಂದೀಚೆಗೆ ವಿಭಾಗದ ವತಿಯಿಂದ ಕೈಗೊಂಡ ಸಂರಕ್ಷಣಾ ಕ್ರಮಗಳಿಂದಾಗಿ ಬಲಿ ಪ್ರಾಣಿಗಳು ಹೆಚ್ಚಾಗಿವೆ. ಇದರ ಬೆನ್ನಲ್ಲೇ ಹೊಸ ಜಾಗಗಳಲ್ಲಿ ಹುಲಿಗಳು ಕಾಣಿಸಿಕೊಂಡಿವೆ ಎಂದು ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿವಿ. ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಶ್ರಯ ಪಡೆದಿವೆ ಕೃಷ್ಣಮೃಗಗಳು

ಕಾವೇರಿ ವನ್ಯಧಾಮದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಕೃಷ್ಣಮೃಗಗಳು ಈಗ ಮಲೆಮಹದೇಶ್ವರ ವನ್ಯಧಾಮದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿವೆ.

ಮಲೆಮಹದೇಶ್ವರ ಬೆಟ್ಟ ಹಾಗೂ ಹನೂರು ವನ್ಯಜೀವಿ ವಲಯಗಳಲ್ಲಿ ಕೃಷ್ಣಮೃಗ ಗುಂಪು ಕಾಣಿಸಿಕೊಂಡಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು ಅವರು ಇದನ್ನು ದೃಢಪಡಿಸಿದ್ದಾರೆ. ವನ್ಯಧಾಮದ ಎರಕೆಯಂ ಹಾಗೂ ಹನೂರು ಬಫರ್ ವಲಯದ ಅರಣ್ಯದಂಚಿನಲ್ಲೂ ಈ ಪ್ರಾಣಿ ದರ್ಶನ ನೀಡಿದೆ.

ಹುಲಿಗಳ ಬಗ್ಗೆ ಸಾಕ್ಷ್ಯ ಚಿತ್ರ

ಜುಲೈ 29ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಅರಣ್ಯ ಇಲಾಖೆಯು ಹುಲಿಗಳ ಬಗ್ಗೆ ನಾಲ್ಕು ನಿಮಿಷಗಳ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದೆ.

ನಾಗರಹೊಳೆ, ಬಂಡೀಪುರ, ಮಲೆ ಮಹದೇಶ್ವರ ವನ್ಯಧಾಮದಲ್ಲಿ ಇದನ್ನು ಚಿತ್ರೀಕರಿಸಲಾಗಿದ್ದು, ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ಇದನ್ನು ನಿರ್ದೇಶಿಸಿದ್ದಾರೆ. ಬುಧವಾರ ಸಾಕ್ಷ್ಯಚಿತ್ರ ಬಿಡುಗಡೆಯಾಗಲಿದೆ.

ಅರಣ್ಯ ಇಲಾಖೆಯು ಸಾಮಾಜಿಕ ಜಾಲತಾಣಗಳಲ್ಲೂ ಇದನ್ನು ಪ್ರಕಟಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.