ADVERTISEMENT

ಹೊರ ರಾಜ್ಯಕ್ಕೆ ಪ್ರಯಾಣ: 36 ಜನರಿಗೆ ಅನುಮತಿ

ಹೊರ ರಾಜ್ಯದಿಂದ ಜಿಲ್ಲೆಗೆ ಬರುವವರಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್‌

​ಪ್ರಜಾವಾಣಿ ವಾರ್ತೆ
Published 9 ಮೇ 2020, 16:02 IST
Last Updated 9 ಮೇ 2020, 16:02 IST
ಚಾಮರಾಜನಗರದ ಸಿಡಿಎಸ್‌ ಭವನದ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದ ತಮಿಳುನಾಡಿನ 11 ಕಾರ್ಮಿಕರನ್ನು ಶನಿವಾರ ಬೀಳ್ಕೊಡಲಾಯಿತು. ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ಕೆ.ಸುರೇಶ್‌, ನಗರಸಭೆ ಆಯುಕ್ತ ಎಂ.ರಾಜಣ್ಣ, ಆರೋಗ್ಯ ನಿರೀಕ್ಷಕ ಶರವಣ ಮತ್ತಿತರರು ಇದ್ದರು
ಚಾಮರಾಜನಗರದ ಸಿಡಿಎಸ್‌ ಭವನದ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದ ತಮಿಳುನಾಡಿನ 11 ಕಾರ್ಮಿಕರನ್ನು ಶನಿವಾರ ಬೀಳ್ಕೊಡಲಾಯಿತು. ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ಕೆ.ಸುರೇಶ್‌, ನಗರಸಭೆ ಆಯುಕ್ತ ಎಂ.ರಾಜಣ್ಣ, ಆರೋಗ್ಯ ನಿರೀಕ್ಷಕ ಶರವಣ ಮತ್ತಿತರರು ಇದ್ದರು   

ಚಾಮರಾಜನಗರ: ಜಿಲ್ಲೆಯಿಂದ ಹೊರರಾಜ್ಯಕ್ಕೆ ಪ್ರಯಾಣಿಸಲು 420 ಮಂದಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 97 ಮಂದಿಯ ಅರ್ಜಿಗಳು ಅನುಮೋದನೆಗೊಂಡಿದೆ.

ಜನರು ತಮ್ಮ ರಾಜ್ಯಕ್ಕೆ ಬರಲು ಆಯಾ ರಾಜ್ಯಗಳ ಅನುಮತಿಯೂ ಅಗತ್ಯವಿದ್ದು, ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ತೆರಳಲು 36 ಮಂದಿಗೆ ಅನುಮತಿ ನೀಡಲಾಗಿದೆ.

ಹೊರರಾಜ್ಯದ ಕಾರ್ಮಿಕರು ಜಿಲ್ಲೆಗೆ ಬಂದಾಗ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಆಯಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಲಾಗಿರುವ ಹಾಸ್ಟಲ್‌ಗಳಲ್ಲಿ ಹೊರರಾಜ್ಯದಿಂದ ಬಂದ ಕಾರ್ಮಿಕರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರೆಂಟೈನ್‌ನಲ್ಲಿರಬೇಕಾಗುತ್ತದೆ.

ADVERTISEMENT

‘ಜಿಲ್ಲೆಗೆ ಆಗಮಿಸುತ್ತಿರುವ ಕಾರ್ಮಿಕರು ಹಾಗೂ ಇತರರಿಗೆ ಸ್ಕ್ರೀನಿಂಗ್ ಸೇರಿದಂತೆ ಅಗತ್ಯ ತಪಾಸಣೆ ಮಾಡಿ ಸುರಕ್ಷಿತವಾಗಿ ಅವರ ಗ್ರಾಮಗಳಿಗೆ ಕಳುಹಿಸಿಕೊಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಶಿಸ್ತುಬದ್ದವಾಗಿ ನಿರ್ವಹಿಸುತ್ತಿದೆ. ಇದಕ್ಕಾಗಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರು ತಿಳಿಸಿದ್ದಾರೆ.

ಬೀಳ್ಕೊಡುಗೆ: ಚಾಮರಾಜನಗರದ ಸಿಡಿಎಸ್‌ ಭವನದಲ್ಲಿ ಆಶ್ರಯ ಪಡೆದಿದ್ದ ತಮಿಳುನಾಡಿನ 11 ಮಂದಿ ಕಾರ್ಮಿಕರನ್ನು ಶನಿವಾರ ಅವರ ರಾಜ್ಯಕ್ಕೆ ಕಳುಹಿಸಿಕೊಡಲಾಯಿತು.

ಜಿಲ್ಲೆಗೆ 1,787 ಕಾರ್ಮಿಕರು

ಜಿಲ್ಲೆಗೆ ಶುಕ್ರವಾರದವರೆಗೆ ಹೊರ ಜಿಲ್ಲೆಗಳಿಂದ 1787 ಕಾರ್ಮಿಕರು ಬಂದಿದ್ದಾರೆ. ಇವರೆಲ್ಲರೂ ಜಿಲ್ಲೆಯವರು. ಹನೂರು ತಾಲೂಕಿನ 826, ಕೊಳ್ಳೇಗಾಲದ 185, ಯಳಂದೂರು ತಾಲ್ಲೂಕಿನ 96, ಚಾಮರಾಜನಗರದ 481 ಮತ್ತು ಗುಂಡ್ಲುಪೇಟೆ ತಾಲ್ಲೂಕಿನ 199 ಕಾರ್ಮಿಕರು ಬಂದಿದ್ದಾರೆ.

70 ಕೆಎಸ್‌ಆರ್‌ಟಿಸಿ ಬಸ್‌, 12 ಖಾಸಗಿ ವಾಹನಗಳು ಸೇರಿದಂತೆ 84 ವಾಹನಗಳಲ್ಲಿ ಬಂದಿದ್ದಾರೆ. ಹೊರಜಿಲ್ಲೆಗಳಿಂದ ಬರುತ್ತಿರುವ ಜಿಲ್ಲೆಯ ಕಾರ್ಮಿಕರಿಗೆ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ನಂತರವೇ ಅವರ ಗ್ರಾಮಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.