ADVERTISEMENT

ಸಂತೇಮರಹಳ್ಳಿ: ಜಗಜೀವನರಾಂ ಭವನ ಅಪೂರ್ಣ

ಕಾಮಗಾರಿ ಮುಗಿದು ಒಂದೂವರೆ ವರ್ಷ; ಪಾಳು ಬಂಗಲೆಯಾದ ಭವನ

ಮಹದೇವ್ ಹೆಗ್ಗವಾಡಿಪುರ
Published 29 ಡಿಸೆಂಬರ್ 2022, 19:30 IST
Last Updated 29 ಡಿಸೆಂಬರ್ 2022, 19:30 IST
ಅಪೂರ್ಣಗೊಂಡಿರುವ ಸಂತೇಮರಹಳ್ಳಿಯ ಬಾಬು ಜಗಜೀವನರಾಂ ಭವನದ ಆವರಣದಲ್ಲಿ ಕಳೆ ಗಿಡಗಳು ಬೆಳೆದಿವೆ
ಅಪೂರ್ಣಗೊಂಡಿರುವ ಸಂತೇಮರಹಳ್ಳಿಯ ಬಾಬು ಜಗಜೀವನರಾಂ ಭವನದ ಆವರಣದಲ್ಲಿ ಕಳೆ ಗಿಡಗಳು ಬೆಳೆದಿವೆ   

ಸಂತೇಮರಹಳ್ಳಿ: ಹೋಬಳಿಯ ಕೇಂದ್ರ ಸ್ಥಾನದಲ್ಲಿ ಡಾ.ಬಾಬು ಜಗಜೀವನರಾಂ ಭವನದ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ಮುಂದುವರಿದ ಕಾಮಗಾರಿಗೆ ಅನುದಾನವಿಲ್ಲದೆ ಭವನ ಪಾಳು ಬಿದ್ದಿದೆ.

ಐದು ವರ್ಷದ ಹಿಂದೆ ಆಗಿನ ಸಂಸದ ಆರ್.ಧ್ರುವನಾರಾಯಣ, ಕೊಳ್ಳೇಗಾಲ ಶಾಸಕ ಎಸ್.ಜಯಣ್ಣ ₹ 50 ಲಕ್ಷ ವೆಚ್ಚದಲ್ಲಿ ಮೈಸೂರು ಮುಖ್ಯ ರಸ್ತೆಯ ಮಗ್ಗುಲಲ್ಲಿ ಡಾ.ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಕೆಐಆರ್‌ಡಿಲ್‌ಗೆ ಕಟ್ಟಡ ಕಾಮಗಾರಿ ಜವಾಬ್ದಾರಿ ನೀಡಲಾಯಿತು. ಜತೆಗೆ ಅಂದಿನ ಜನಪ್ರತಿನಿಧಿಗಳು ₹ 1 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದರು. ನಂತರದ ದಿನಗಳಲ್ಲಿ ಅವರು ಅಧಿಕಾರ ಕಳೆದುಕೊಂಡರು. ₹ 50 ಲಕ್ಷಕ್ಕಷ್ಟೇ ಕೆಆರ್‌ಐಡಿಎಲ್‌ನವರು ಕಾಮಗಾರಿ ಮುಗಿಸಿದ್ದಾರೆ.

ADVERTISEMENT

ಕಾಮಗಾರಿ ಸ್ಥಗಿತಗೊಂಡು ಒಂದೂವರೆ ವರ್ಷ ಕಳೆದಿದೆ. ಇಂದಿಗೂ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಭವನದ ಕಡೆ ಗಮನ ಹರಿಸಿಲ್ಲ. ಈ ಭವನದ ಸದುಪಯೋಗ ಪಡೆಯಬೇಕಿದ್ದ ಸಮುದಾಯದ ಜನರ ನಿರೀಕ್ಷೆ ಈಡೇರಿಲ್ಲ.

ಶೇ 90ರಷ್ಟು ಕಾಮಗಾರಿ ಮುಕ್ತಾಯ: ಭವನದ ಕಾಮಗಾರಿ ಶೇ 90ರಷ್ಟು ಮುಗಿದಿದೆ. ಮುಖ್ಯ ರಸ್ತೆಯಿಂದ ಭವನಕ್ಕೆ ಹೋಗಲು ಸರಿಯಾದ ದಾರಿ ವ್ಯವಸ್ಥೆ ಇಲ್ಲದಂತಾಗಿದೆ. ನಿರ್ಮಾಣಗೊಂಡಿರುವ ಭವನದ ಸುತ್ತಲೂ ಗಿಡ, ಮರ, ಬಳ್ಳಿ ಆವರಿಸಿಕೊಂಡಿದೆ. ಭವನಕ್ಕೆ ಮುಂಭಾಗದ ಬಾಗಿಲು ಬಿಟ್ಟು ಒಳಗಡೆ ಬಾಗಿಲು ಹಾಗೂ ಸುತ್ತಲಿನ ಗೋಡೆಗಳಲ್ಲಿ ಕಿಟಕಿ ನಿರ್ಮಿಸಿಲ್ಲ. ಇದರಿಂದ ಕಿಟಕಿಗಳ ಮೂಲಕ ಗಿಡ–ಗಂಟಿಗಳು, ಕೊಂಬೆ–ರೆಂಬೆಗಳು ಭವನದ ಒಳಗಡೆ ಚಾಚಿಕೊಂಡಿವೆ. ಹಾವು, ಚೇಳು, ಕ್ರಿಮಿ ಕೀಟಗಳು ಹೊರಗಡೆಯಿಂದ ಒಳಗೆ ಪ್ರವೇಶಿಸಿ ಆವಾಸ ಸ್ಥಾನ ಮಾಡಿಕೊಂಡಿವೆ. ಭವನಕ್ಕೆ ಕಾಂಪೌಂಡ್‌ ನಿರ್ಮಿಸಿಲ್ಲ. ಇದರಿಂದ ಭವನದ ಎಲ್ಲೆ ಗುರುತಿಸಲು ಸಾಧ್ಯವಾಗುತ್ತಿಲ್ಲ.

‘ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಕುಡಿಯುವ ನೀರಿಗೂ ವ್ಯವಸ್ಥೆ ಮಾಡಿಲ್ಲ.ಭವನ ಪೂರ್ಣಗೊಳಿಸಲು ಅನುದಾನ ಕೊಡುವಂತೆ ಸ್ಥಳೀಯ ಶಾಸಕರಿಗೆ ಮನವಿ ಮಾಡಿಕೊಳ್ಳಲಾಗಿದೆ. ಭರವಸೆ ನೀಡಿದ್ದಾರೆ. ತಕ್ಷಣ ಅವರು ಸ್ಪಂದಿಸಿ, ಅನುದಾನ ಬಿಡುಗಡೆಗೊಳಿಸಿ ಭವನ ಪೂರ್ಣಗೊಳಿಸಲು ಸಂಬಂಧಪಟ್ಟವರು ಗಮನ ಹರಿಸಬೇಕು’ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಶಿವಯ್ಯ ಒತ್ತಾಯಿಸಿದರು.

‘ಹೆಚ್ಚುವರಿ ₹14 ಲಕ್ಷ ಬೇಕು’
‘ಅನುದಾನ ಲಭ್ಯವಿದ್ದ ₹ 50 ಲಕ್ಷಕ್ಕೆ ಭವನ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮುಂದುವರಿದ ಕಾಮಗಾರಿಗೆ ಹೆಚ್ಚುವರಿಯಾಗಿ ₹ 14 ಲಕ್ಷದ ಅವಶ್ಯಕತೆ ಇದೆ. ಅನುದಾನ ಬಂದರಷ್ಟೇ ಭವನದ ಕಾಮಗಾರಿ ಮುಂದುವರಿಸಲು ಸಾಧ್ಯ’ ಎಂದು ಕೆಆರ್‌ಐಡಿಎಲ್ ಎಇಇ ಮಾದಶೆಟ್ಟಿ ತಿಳಿಸಿದರು.

‘ಕಾಮಗಾರಿಯನ್ನು ಕೆಆರ್‌ಐಡಿಎಲ್‌ನವರಿಗೆ ವಹಿಸಲಾಗಿತ್ತು. ಈಚೆಗಷ್ಟೇ ಅವರ ಜೊತೆ ಮಾತನಾಡಲಾಗಿದೆ. ಭವನ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ’ ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ ‘ಪ್ರಜಾವಾಣಿ’ಗೆ ಹೇಳಿದರು.

*
ಕಾಂಪೌಂಡ್‌ ನಿರ್ಮಿಸದ ಕಾರಣ ಈಗಾಗಲೇ ಒತ್ತುವರಿ ಆರಂಭವಾಗಿದೆ. ತಕ್ಷಣ ಎಲ್ಲೆ ಗುರುತಿಸಿ ಸುತ್ತುಗೋಡೆಯನ್ನಾದರೂ ನಿರ್ಮಿಸಬೇಕು
-ಕುಮಾರ್‌, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.