ADVERTISEMENT

ಜಾತಿ ಗಣತಿ: ಸಮೀಕ್ಷೆ ಅವಧಿ ತಿಂಗಳು ವಿಸ್ತರಿಸಿ

ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಮೇ 2025, 14:51 IST
Last Updated 18 ಮೇ 2025, 14:51 IST
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಸಮುದಾಯದ ಮುಖಂಡರ ಸಭೆಯಲ್ಲಿ ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಮಾತನಾಡಿದರು
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಸಮುದಾಯದ ಮುಖಂಡರ ಸಭೆಯಲ್ಲಿ ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಮಾತನಾಡಿದರು   

ಚಾಮರಾಜನಗರ: ‘ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಉದ್ದೇಶದಿಂದ ಸರ್ಕಾರ ನಡೆಸುತ್ತಿರುವ ದತ್ತಾಂಶ ಸಂಗ್ರಹ ಅವಧಿಯನ್ನು ಒಂದು ತಿಂಗಳು ವಿಸ್ತರಿಸಬೇಕು’ ಎಂದು ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಒತ್ತಾಯಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಸಮೀಕ್ಷಾದಾರರು ಮನೆಮನೆಗಳಿಗೆ ಭೇಟಿನೀಡಿ ಜಾತಿಗಣತಿ ದತ್ತಾಂಶ ಸಂಗ್ರಹಿಸುತ್ತಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಸಾಧ್ಯವಿಲ್ಲ. ಸಮೀಕ್ಷೆ ನಡೆಸುವ ಅವಧಿಯನ್ನು ಮೇ 20ರವರೆಗೆ ಸರ್ಕಾರ ವಿಸ್ತರಿಸಿರುವುದು ಸ್ವಾಗತಾರ್ಹವಾದರೂ ಈ ಅವಧಿಯಲ್ಲೂ ಸಮೀಕ್ಷೆ ಪೂರ್ಣಗೊಳ್ಳುವುದು ಅನುಮಾನವಾಗಿರುವುದರಿಂದ ಹೆಚ್ಚುವರಿಯಾಗಿ ಒಂದು ತಿಂಗಳು ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.

ಸಹೋದರ ಸಮುದಾಯಗಳ ಮುಖಂಡರು, ರಾಜಕೀಯ ನಾಯಕರು, ಶಿಕ್ಷಕರು ಸಮೀಕ್ಷೆಯಲ್ಲಿ ಮೂಲ ಜಾತಿಯ ಹೆಸರು ನಮೂದಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಮುದಾಯದ ಸಚಿವರಾದ ಎಚ್.ಸಿ.ಮಹದೇವಪ್ಪ, ಜಿ.ಪರಮೇಶ್ವರ್, ಪ್ರಿಯಾಂಕ್‌ ಖರ್ಗೆ ಬೀದಿಗಿಳಿದು ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ADVERTISEMENT

ಸಮೀಕ್ಷೆಯಲ್ಲಿ ‘ಹೊಲಯ’ ಎಂದು ಬರೆಸುವ ಮೂಲಕ ಸಮುದಾಯದ ನಿಖರ ಸಂಖ್ಯೆ ನಮೂದಿಸಬೇಕು ಹಾಗೂ ಸಂಖ್ಯಾಬಲ ತೋರಿಸಬೇಕು. ಸಮೀಕ್ಷೆಯಲ್ಲಿ ಸರಿಯಾಗಿ ಜಾತಿಯ ಹೆಸರು ನಮೂದಿಸದಿದ್ದರೆ ನ್ಯಾ.ನಾಗಮೋಹನ್ ದಾಸ್ ವರದಿ ಸಮುದಾಯದ ಪಾಲಿಗೆ ಮರಣ ಶಾಸನವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸಮುದಾಯದ ನೌಕರರು, ಶಿಕ್ಷಕರು, ರೈತರು ಸಮೀಕ್ಷೆಯಲ್ಲಿ ಜಾತಿಯ ಹೆಸರನ್ನು ಸರಿಯಾಗಿ ಬರೆಸಲು ಕ್ರಮ ಕೈಗೊಳ್ಳಬೇಕು ಎಂದು ವೆಂಕಟರಮಣ ಸ್ವಾಮಿ ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ್ ಬಣ) ಜಿಲ್ಲಾ ಸಂಯೋಜಕ ಸಿ.ಎಂ.ಶಿವಣ್ಣ ಮಾತನಾಡಿ, ‘ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜಾತಿಗಣತಿ ಸಮೀಕ್ಷೆಯಲ್ಲಿ ವಿಫಲವಾಗಿದ್ದಾರೆ’ ಎಂದು ದೂರಿದರು.

ಸಭೆಯಲ್ಲಿ ಸಮುದಾಯದ ಮುಖಂಡರಾದ ನಾಗೇಶ್, ನಟರಾಜು, ಆಟೋ ಉಮೇಶ್, ಮಹದೇವಯ್ಯ, ಮಹದೇವ ಸ್ವಾಮಿ, ಪ್ರಕಾಶ್, ಗೌರಿಶಂಕರ, ಬಸವಣ್ಣ, ಕೃಷ್ಣಮೂರ್ತಿ ಭಾಗವಹಿಸಿದ್ದರು.

ಬೇಡ ಜಂಗಮ ಸಮುದಾಯ ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆದುಹಾಕಬೇಕು

ವೆಂಕಟರಮಣ ಸ್ವಾಮಿ ದಲಿತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.