ಚಾಮರಾಜನಗರ: ಗಾಂಧಿ ತತ್ವದಲ್ಲಿ ದೃಢವಾದ ನಂಬಿಕೆ ಇಟ್ಟು ಅವರಂತೆಯೇ ಸರಳವಾಗಿ ಜೀವನ ನಡೆಸುತ್ತಿರುವ, ದೀನರ ‘ಬಂಧು’ವಾಗಿರುವ ಪ್ರೊ.ಜಿ.ಎಸ್.ಜಯದೇವ ಅವರನ್ನುರಾಜ್ಯ ಸರ್ಕಾರದ ಪ್ರತಿಷ್ಠಿತ ‘ಗಾಂಧಿ ಸೇವಾ ಪ್ರಶಸ್ತಿ’ ಅರಸಿಕೊಂಡು ಬಂದಿದೆ.
ಬಡ, ಅನಾಥ ಮತ್ತು ಅವಕಾಶ ವಂಚಿತ ಮಕ್ಕಳ ಪಾಲಿಗೆ ಆಶಾಕಿರಣವಾಗಿ, ‘ದೀನ ಬಂಧು’ ಎಂಬ ಸಮಾಜ ಸೇವಾ ಸಂಸ್ಥೆಯ ಮೂಲಕ ನೂರಾರು ಮಕ್ಕಳಿಗೆ ಆಶ್ರಯ, ಶಿಕ್ಷಣ ನೀಡುತ್ತಿರುವ ಪ್ರೊ.ಜಯದೇವ ಅವರು ಚಾಮರಾಜನಗರ ಜಿಲ್ಲೆಯ ಹೆಸರನ್ನು ದೇಶದಾದ್ಯಂತ ಪಸರಿಸಿದವರು.
ಗ್ರಾಮೀಣಾಭಿವೃದ್ಧಿ, ಮಕ್ಕಳ ಮತ್ತು ಮಹಿಳೆಯರ ಸಬಲೀಕರಣ, ಹೆಣ್ಣುಮಕ್ಕಳಿಗೆ ಶಿಕ್ಷಣ, ಪರಿಸರ ರಕ್ಷಣೆ... ಹೀಗೆ ಸಮಾಜದ ತಳಮಟ್ಟದಲ್ಲೇ ಸುಸ್ಥಿರ ಅಭಿವೃದ್ಧಿ ಆಗಬೇಕು ಎಂಬ ಕನಸನ್ನು ಬಿತ್ತುತ್ತಲೇ, ಇಚ್ಛಾಶಕ್ತಿ ಹಾಗೂ ಸೇವಾ ಮನೋಭಾವ ಇದ್ದರೆ ಅದನ್ನು ನನಸು ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು ಪ್ರೊ.ಜಯದೇವ ಅವರು.
ಮೈಸೂರಿನ ಭಾಗವಾಗಿದ್ದ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದ ಚಾಮರಾಜನಗರವನ್ನು ತಮ್ಮ ಸಮಾಜ ಸೇವೆಯ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದ ಜಯದೇವ ಅವರು, ಜಿಲ್ಲೆಗೆ ಕೊಟ್ಟ ಕೊಡುಗೆ ಸಣ್ಣದೇನಲ್ಲ.
ಬಿಳಿಗಿರಿರಂಗನಬೆಟ್ಟದಲ್ಲಿನ ‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು 1981ರಿಂದ 1990ರವರೆಗೆ ಆ ಭಾಗದ ಗಿರಿಜನರ ಉದ್ಧಾರಕ್ಕಾಗಿ ಶ್ರಮಿಸಿದ್ದರು.
ದೀನರ ಬಾಳನ್ನು ಹಸನು ಮಾಡುವತಮ್ಮ ಕನಸನ್ನು ನನಸು ಮಾಡುವುದಕ್ಕಾಗಿ 1988ರಲ್ಲಿ ದೀನಬಂಧು ಎಂಬ ಟ್ರಸ್ಟ್ ನೋಂದಣಿ ಮಾಡಿದರು. ನಾಲ್ಕು ವರ್ಷಗಳ ನಂತರ 1992ರಲ್ಲಿ ಸಂಸ್ಥೆಯನ್ನು ಅಧಿಕೃತವಾಗಿ ಕಾರ್ಯಾರಂಭ ಮಾಡಿದರು. ಮೊದಲಿಗೆ ಬೆಂಗಳೂರಿನ ಮಾತೃ ಛಾಯಾ ಸಂಸ್ಥೆಯಿಂದ ನಾಲ್ಕು ಅನಾಥ ಮಕ್ಕಳನ್ನು ಕರೆತಂದು ತಮ್ಮ ಸಂಸ್ಥೆಯಲ್ಲಿ ಆಶ್ರಯ ನೀಡಿದರು.ನಗರದ ಪಿಡಬ್ಲ್ಯುಡಿ ಕಾಲೊನಿಯಲ್ಲಿ ಸಣ್ಣದಾಗಿ ಆರಂಭಗೊಂಡ ಸಂಸ್ಥೆ, ಈಗ ಹೆಮ್ಮರವಾಗಿ ಬೆಳೆದಿದೆ.
ಜಯದೇವ ಅವರು ದೀನಬಂಧು ಟ್ರಸ್ಟ್ ಅಡಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗಾಗಿ ಪ್ರತ್ಯೇಕ ಎರಡು ಆಶ್ರಮಗಳನ್ನು ನಡೆಸುತ್ತಿದ್ದಾರೆ. ನೂರಾರು ಅನಾಥ, ಬಡ ಮಕ್ಕಳು ಇಲ್ಲಿನ ಆಶ್ರಮದಲ್ಲಿ ಆಶ್ರಯ ಪಡೆದು, ಉತ್ತಮ ಶಿಕ್ಷಣ ಪಡೆದು, ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಸದ್ಯ ಎರಡು ಆಶ್ರಮಗಳಲ್ಲಿತಲಾ 40 ಮಕ್ಕಳು ಇದ್ದಾರೆ.
ಕನ್ನಡ ಶಾಲೆ: ಇಂಗ್ಲಿಷ್ ಮಾಧ್ಯಮ ಶಾಲೆಗಳ ಭರಾಟೆಯ ನಡುವೆ, ಗ್ರಾಮೀಣ ಭಾಗದ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ, ಮಾತೃಭಾಷೆಯಲ್ಲಿ ಅತ್ಯುತ್ತಮ ಶಿಕ್ಷಣ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಚಾಮರಾಜನಗರದಲ್ಲಿ ಟ್ರಸ್ಟ್ ಅಡಿಯಲ್ಲೇ ಕನ್ನಡ ಶಾಲೆಯೊಂದನ್ನು ತೆರೆದು ನೂರಾರು ಮಕ್ಕಳಿಗೆ ಶಿಕ್ಷಣದ ಧಾರೆ ಎರೆಯುತ್ತಿದ್ದಾರೆ. ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಇರುವ ಶಾಲೆಯಲ್ಲಿ ಪ್ರಸ್ತುತ 400 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಸ್ವಸಹಾಯ ಸಂಘ ಸ್ಥಾಪನೆ: ಗ್ರಾಮೀಣ ಭಾಗದ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ 30ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳನ್ನು ರಚಿಸಿ, ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢರಾಗುವಂತೆಯೂ ಜಯದೇವ ಅವರು ಮಾಡಿದ್ದಾರೆ.
‘ಗಾಂಧಿತತ್ವ ಮಾತ್ರ ಜಗತ್ತನ್ನು ಕಾಪಾಡಬಲ್ಲುದು’
ಗಾಂಧೀಜಿ ಅವರ ಹೆಸರಿನ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಪ್ರೊ.ಜಯದೇವ ಅವರು ಸಂತಸವ್ಯಕ್ತಪಡಿಸಿದ್ದಾರೆ.
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಅವರು, ‘ನಾನು ಮಾಡುತ್ತಿರುವ ಕೆಲಸಕ್ಕೆ ಗಾಂಧೀಜಿ ಅವರ ತತ್ವಗಳೇ ಒತ್ತಾಸೆಯಾಗಿ ನಿಂತಿವೆ. ಅವರ ತತ್ವ ಹಾಗೂ ಜೀವನ ಸಂದೇಶದಲ್ಲಿ ನನಗೆ ಅಪಾರ ನಂಬಿಕೆ. ಅವರ ಹೆಸರಿನಲ್ಲಿರುವ ಪ್ರಶಸ್ತಿಗೆ ಆಯ್ಕೆಯಾಗಿರುವುದರಿಂದ ಸಂತೋಷವಾಗಿದೆ’ ಎಂದು ಹೇಳಿದರು.
‘ಕ್ಷಮಿಸುವುದು ಗೊತ್ತಿಲ್ಲದ, ಹಿಂಸಾತ್ಮಕವಾದ ಈ ವಾತಾವರಣದಲ್ಲಿ ಗಾಂಧೀಜಿಯವರ ತತ್ವ ಹಾಗೂ ಜೀವನ ಸಂದೇಶಗಳು ಮಾತ್ರ ಜಗತ್ತನ್ನು ಕಾಪಾಡಬಲ್ಲುದು’ ಎಂದು ಅವರು ಅಭಿಪ್ರಾಯಪಟ್ಟರು.
‘ದುರ್ಬಲರ ಬಗ್ಗೆ ಈಗಿನ ಸಮಾಜಕ್ಕೆ, ಜನರಿಗೆ ಕನಿಕರ ಇಲ್ಲ. ಬಾಹುಬಲ ಉಳ್ಳವರಿಗೆ ಮಾತ್ರ ಬದುಕಲು ಹಕ್ಕು ಇರುವುದು ಎಂಬಂತಹ ಚಿತ್ರಣ ಇದೆ. ಇಂತಹ ಸಮಾಜ ಆರೋಗ್ಯಕರವಾದುದಲ್ಲ. ಅಸ್ವಸ್ಥ ಸಮಾಜಕ್ಕೆ ಗಾಂಧೀಜಿ ಅವರ ತತ್ವಗಳು, ಮೌಲ್ಯಗಳು ದಾರಿದೀಪಗಳಾಗಬಲ್ಲುದು’ ಎಂದು ಅವರು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.