ADVERTISEMENT

ಸ್ಥಳೀಯರಿಗೆ ಕೌಶಲ ತರಬೇತಿ ನೀಡಿ: ಶಾಸಕ ಸಿ.ಪುಟ್ಟರಂಗಶೆಟ್ಟಿ

ಎರಡು ದಿನಗಳ ಮಿನಿ ಉದ್ಯೋಗ ಮೇಳಕ್ಕೆ ಚಾಲನೆ, 15ಕ್ಕೂ ಹೆಚ್ಚು ಕಂಪನಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 16:14 IST
Last Updated 12 ಆಗಸ್ಟ್ 2021, 16:14 IST
ಜಿಲ್ಲಾಡಳಿತ ಭವನದ ಆವರಣದಲ್ಲಿ ಗುರುವಾರ ನಡೆದ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳ ಮಳಿಗೆಗಳ ಮುಂದೆ ನಿಂತಿದ್ದ ಉದ್ಯೋಗಾಕಾಂಕ್ಷಿಗಳು
ಜಿಲ್ಲಾಡಳಿತ ಭವನದ ಆವರಣದಲ್ಲಿ ಗುರುವಾರ ನಡೆದ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳ ಮಳಿಗೆಗಳ ಮುಂದೆ ನಿಂತಿದ್ದ ಉದ್ಯೋಗಾಕಾಂಕ್ಷಿಗಳು   

ಚಾಮರಾಜನಗರ:ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಕಚೇರಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಮಿನಿ ಉದ್ಯೋಗ ಮೇಳಕ್ಕೆ ಗುರುವಾರ ಚಾಲನೆ ದೊರೆಯಿತು.

ಪೇಟಿಎಂ, ರಾನೆ, ಸಾತ್ವಿಕ್, ಯಂಗ್ ಇಂಡಿಯಾ ಫೌಂಡೇಶನ್, ಅಪೋಲೋ ಹಾಸ್ಪಿಟಲ್ಸ್‌, ಜೆಕೆ ಟೈರ್ಸ್‌, ಯೂತ್ ಜಾಬ್ಸ್, ಟೆಕ್ನೋ ಟಾಸ್ಕ್ಸ್, ಇನ್‌ ಸ್ಟ್ಯಾಂಟ್‌ ಐ.ಟಿ.ಟೀಚ್, ವಿ.ಜಿ.ಬಿ, ರಾಜ್ ಬಯೋ, ಕಾವೇರಿ ಅಸೋಸಿಯೇಟ್ಸ್ ಸೇರಿದಂತೆ 15ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಮೊದಲ ದಿನ 200ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಿದ್ದರು. ಶುಕ್ರವಾರವೂ (ಆ.13) ಮೇಳ ನಡೆಯಲಿದೆ.

ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ‘ಕೋವಿಡ್‌ ಕಾರಣದಿಂದದೇಶದಲ್ಲಿ ಅನೇಕ ಕೈಗಾರಿಕೆಗಳು, ಸಂಸ್ಥೆಗಳು ಮುಚ್ಚಿವೆ. ಇದರಿಂದ ನಿರುದ್ಯೋಗ ಸಮಸ್ಯೆ ತಲೆದೋರಿದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಕೆಲಸ ಕೊಡುವ ಜವಾಬ್ದಾರಿ ಸರ್ಕಾರದ ಮೇಲೆ ಬಿದ್ದಿದೆ. ಜಿಲ್ಲೆಯಲ್ಲೂ ಉದ್ಯೋಗಕ್ಕಾಗಿ ಕಾದು ಕುಳಿತಿರುವ ಸಾವಿರಾರು ಅಭ್ಯರ್ಥಿಗಳಿದ್ದು, ಉದ್ಯೋಗ ನೀಡಲು ಹೆಚ್ಚು ಹೆಚ್ಚು ಕೈಗಾರಿಕೆಗಳನ್ನು ತೆರೆಯಬೇಕಿದೆ’ ಎಂದರು.

ADVERTISEMENT

ಜಿಲ್ಲೆಯಲ್ಲಿ 1,400 ಎಕರೆ ಪ್ರದೇಶದಲ್ಲಿ ಎಕರೆಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲಾಗಿದ್ದು, ಇಲ್ಲಿ ಉದ್ದಿಮೆಗಳನ್ನು ಪ್ರಾರಂಭಿಸುವವರು ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಆದ್ಯತೆ ನೀಡಬೇಕು. ಜಿಲ್ಲೆಯ ಅಭಿವೃದ್ಧಿಯ ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಬೇಕಿದೆ. ಕೋವಿಡ್‌ನಿಂದಾಗಿ ಉದ್ಯೋಗ ಮೇಳಗಳು ಹೆಚ್ಚು ನಡೆಯುತ್ತಿಲ್ಲ. ಉದ್ಯೋಗ ಬಯಸುವ ಯುವಕ, ಯುವತಿಯರು ನಮ್ಮ ಜಿಲ್ಲೆಗೆ ಮಾತ್ರ ಮೀಸಲಾಗದೆ, ಬೇರೆ ಜಿಲ್ಲೆಗಳಿಗೂ ಉದ್ಯೋಗಕ್ಕಾಗಿ ಹೋಗುವ ಮೂಲಕ ಜೀವನ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಈಗಾಗಲೇ ಇರುವ ಕೆಲ ಕೈಗಾರಿಕೆಗಳಲ್ಲಿ ಉತ್ತಮ ಕೌಶಲ ಹೊಂದಿರುವ ಕಾರಣದಿಂದ ಹೊರ ಭಾಗದವರಿಗೆ ಉದ್ಯೋಗ ಲಭಿಸುತ್ತಿದೆ. ಸ್ಥಳೀಯರಿಗೂ ಉತ್ತಮ ಕೌಶಲ ತರಬೇತಿ ನೀಡುವ ಮೂಲಕ ಇಲ್ಲಿಯೇ ಉದ್ಯೋಗ ದೊರೆಯುವಂತಾದರೆ ನಿರುದ್ಯೋಗ ಸಮಸ್ಯೆ ಸಲ್ಪಮಟ್ಟಿಗಾದರೂ ಕಡಿಮೆಯಾಗುತ್ತದೆ. ಹೀಗಾಗಿ ಸ್ಥಳೀಯರಿಗೆ ಕೌಶಲ ತರಬೇತಿಗೂ ಆದ್ಯತೆ ನೀಡಬೇಕು’ ಎಂದು ಶಾಸಕರು ಹೇಳಿದರು.

ನಗರಸಭಾ ಅಧ್ಯಕ್ಷೆ ಆಶಾ,ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಭೊಯರ್ ನಾರಾಯಣ ರಾವ್ ಅವರು ಮಾತನಾಡಿದರು. ದಿನದಿಂದ ದಿನಕ್ಕೆ ಜಗತ್ತು ಆಧುನಿಕವಾಗಿ ಮಾರ್ಪಡಾಗುತ್ತಿದ್ದು ಅದಕ್ಕೆ ತಕ್ಕತೆ ಇ-ಕಾಮರ್ಸ್, ಹೊಸ ಆರ್ಥಿಕತೆಗೆ ಹೊಂದಿಕೊಂಡ ಉದ್ಯೋಗದ ಬಗ್ಗೆ ತರಬೇತಿ ಪಡೆದು ಉದ್ಯೋಗ ಪಡೆಯಲು ಸಿದ್ಧರಾಗಬೇಕು ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಕೆ. ಸುರೇಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎ. ಮಹಮ್ಮದ್ ಅಕ್ಬರ್, ನಗರಸಭೆ ಆಯುಕ್ತ ಕರಿಬಸವಯ್ಯ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಪ್ರಾಂಶುಪಾಲ ರಂಗಸ್ವಾಮಿ, ಗುಂಡ್ಲುಪೇಟೆ ಜಿ.ಟಿ.ಟಿ.ಸಿ ಪ್ರಾಂಶುಪಾಲ ರಾಧಾಕೃಷ್ಣ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀಕಾಂತ್ ಸತ್ಯನಾರಾಯಣ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲೇಶ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.