ADVERTISEMENT

ಚಾಮರಾಜನಗರ: ಅರಣ್ಯ ಹುಲ್ಲುಗಾವಲಿನಲ್ಲಿ ಭಾರಿ ಯಂತ್ರೋಪಕರಣ ಬಳಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:20 IST
Last Updated 25 ಜುಲೈ 2025, 2:20 IST
ಅರಣ್ಯ ಹುಲ್ಲುಗಾವಲು ನಿರ್ಮಾಣ ಮಾಡಲು ಬಳಕೆ ಮಾಡಿರುವ ಯಂತ್ರೋಪಕರಣಗಳು
ಅರಣ್ಯ ಹುಲ್ಲುಗಾವಲು ನಿರ್ಮಾಣ ಮಾಡಲು ಬಳಕೆ ಮಾಡಿರುವ ಯಂತ್ರೋಪಕರಣಗಳು   

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಗೊಳಪಡುವ ನುಗು ವನ್ಯಜೀವಿ ವಲಯದಲ್ಲಿ ಹುಲ್ಲುಗಾವಲು ನಿರ್ಮಾಣಕ್ಕೆ ಮಾನವ ಶ್ರಮ ಬಳಸುವ ಬದಲು ಭಾರಿ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡು ಅರಣ್ಯ ಪರಿಸರ ವ್ಯವಸ್ಥೆಯನ್ನು ನಾಶ ಮಾಡಲಾಗುತ್ತಿದೆ ಎಂದು ಪರಿಸರವಾದಿ ಜೋಸೆಫ್‌ ಹೂವರ್ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.

‘ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸಲು ಸಸ್ಯಹಾರಿ ಪ್ರಾಣಿಗಳಾದ ಆನೆಗಳು ಮತ್ತು ಜಿಂಕೆಗಳನ್ನು ವನ್ಯಜೀವಿಗಳ ಆವಾಸಸ್ಥಾನಗಳಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಡಿನೊಳಗಿರುವ ಹುಲ್ಲುಗಾವಲುಗಳನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಅದರ ಭಾಗವಾಗಿ ಅರಣ್ಯದೊಳಗೆ ಒಂದು ಹೆಕ್ಟೇರ್ ಹುಲ್ಲುಗಾವಲು ಅಭಿವೃದ್ಧಿಗೆ ₹ 10,000 ವ್ಯಯಿಸಲಾಗುತ್ತಿದೆ. 100 ಹೆಕ್ಟೇರ್‌ಗೆ ಬರೋಬ್ಬರಿ ₹ 1 ಕೋಟಿ ಖರ್ಚು ಮಾಡಲಾಗುತ್ತಿದೆ’ ಎಂದು ದೂರಿದ್ದಾರೆ.

‘ನಿಯಮಗಳ ಪ್ರಕಾರ ಹುಲ್ಲುಗಾವಲನ್ನು ಸ್ಥಳೀಯ ಸಮುದಾಯಗಳನ್ನು ಬಳಸಿಕೊಂಡು ಹಸ್ತಚಾಲಿತವಾಗಿ ಅಭಿವೃದ್ಧಿಪಡಿಸಬೇಕು. ಆದರೂ ಹಿರಿಯ ಅಧಿಕಾರಿಗಳು ತ್ವರಿತವಾಗಿ ಹುಲ್ಲುಗಾವಲು ನಿರ್ಮಿಸಲು, ಹಣ ಮಾಡಲು ದೈತ್ಯ ಹಿಟಾಚಿ, ಜೆಸಿಬಿ ಬಳಸುತ್ತಿದ್ದು ವನ್ಯಜೀವಿಗಳ ಆವಾಸಸ್ಥಾನವನ್ನು ಧ್ವಂಸಗೊಳಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಭಾರಿ ಯಂತ್ರಗಳನ್ನು ಬಳಸಿ ಹುಲ್ಲುಗಾವಲು ನಿರ್ಮಾಣ ಮಾಡಿರುವ ಪರಿಣಾಮ ನುಗು ವನ್ಯಜೀವಿ ಅಭಯಾರಣ್ಯದಲ್ಲಿ ದಿಂಡಲ್, ಥರೆಯಂತಹ ಸ್ಥಳೀಯ ಗಿಡಗಳ ಪ್ರಭೇದಗಳನ್ನು ನಾಶವಾಗಿವೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಮಾರ್ಗಸೂಚಿಯಂತೆ ಹುಲಿ ಮೀಸಲು ಪ್ರದೇಶಗಳಲ್ಲಿ ಭಾರಿ ಯಂತ್ರೋಪಕರಣಗಳ ಬಳಕೆಗೆ ನಿರ್ಬಂಧ ಇದ್ದರೂ ನಿಯಮ ಉಲ್ಲಂಘಿಸಲಾಗಿದೆ’ ಎಂದು ದೂರಿದ್ದಾರೆ.

ಕೂಡಲೇ ಎನ್‌ಟಿಸಿಎ, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮಧ್ಯಪ್ರವೇಶಿಸಿ ಸಂರಕ್ಷಿತ ಪ್ರದೇಶಗಳಲ್ಲಿ ಭಾರಿ ಯಂತ್ರೋಪಕರಣಗಳ ಬಳಕೆ ನಿಲ್ಲಿಸಬೇಕು. ರಾಜ್ಯ ಸರ್ಕಾರ ಹುಲ್ಲುಗಾವಲು ಹಗರಣದ ತನಿಖೆ ನಡೆಸಬೇಕು ಎಂದು ಜೋಸೆಫ್ ಹೂವರ್ ಒತ್ತಾಯಿಸಿದ್ದಾರೆ.

ನೋಟಿಸ್‌

ನುಗು ವನ್ಯಜೀವಿ ವಲಯದ ಬಿಳಿಗಿಂಡಿ ಹಳ್ಳದಲ್ಲಿ ಹಾಗೂ ವಡ್ಡನಹಳ್ಳಿ ಅರಣ್ಯ ಪ್ರದೇಶದಲ್ಲಿ ಹುಲ್ಲುಗಾವಲು ನಿರ್ಮಾಣಕ್ಕೆ ಹಿಟಾಜಿ ಜೆಸಿಬಿ ಬಳಕೆ ಮಾಡಿ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಕಾರಣ ಕೇಳಿ ನುಗು ವನ್ಯಜೀವಿ ವಲಯ ಅರಣ್ಯಾಧಿಕಾರಿಗೆ ಹಾಗೂ ಗುತ್ತಿಗೆದಾರರಿಗೆ ನೀಡಿರುವ ನೋಟಿಸ್‌ನ ಪ್ರತಿಗಳನ್ನು ಪರಿಸರವಾದಿ ಜೋಸೆಫ್ ಹೂವರ್ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.