ADVERTISEMENT

ಶಿಕ್ಷಣದಷ್ಟೆ ಸಾಂಸ್ಕೃತಿಕ ಚಟುವಟಿಕೆಗಳೂ ಮುಖ್ಯ: ಮೋನಾ ರೋತ್

ಜೆಎಸ್‌ಎಸ್‌ ಕಾಲೇಜಿನಲ್ಲಿ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್

​ಪ್ರಜಾವಾಣಿ ವಾರ್ತೆ
Published 6 ಮೇ 2025, 13:27 IST
Last Updated 6 ಮೇ 2025, 13:27 IST
ಜೆಎಸ್‌ಎಸ್‌ ಮಹಾವಿದ್ಯಾಪೀಠ, ಜೆಎಸ್‌ಎಸ್‌ ಮಹಿಳಾ ಕಾಲೇಜು ವತಿಯಿಂದ ಮಂಗಳವಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು  ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಉದ್ಘಾಟಿಸಿದರು
ಜೆಎಸ್‌ಎಸ್‌ ಮಹಾವಿದ್ಯಾಪೀಠ, ಜೆಎಸ್‌ಎಸ್‌ ಮಹಿಳಾ ಕಾಲೇಜು ವತಿಯಿಂದ ಮಂಗಳವಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು  ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಉದ್ಘಾಟಿಸಿದರು   

ಚಾಮರಾಜನಗರ: ವಿದ್ಯಾರ್ಥಿಗಳು ಶಿಕ್ಷಣಕ್ಕೆ ನೀಡುವಷ್ಟೆ ಪ್ರಾಮುಖ್ಯತೆಯನ್ನು ಸಾಂಸ್ಕೃತಿಕ ಚಟುವಟಿಕೆಗಳಿಗೂ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಹೇಳಿದರು.

ಜೆಎಸ್‌ಎಸ್‌ ಮಹಾವಿದ್ಯಾಪೀಠ, ಜೆಎಸ್‌ಎಸ್‌ ಮಹಿಳಾ ಕಾಲೇಜು ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ವ್ಯಕ್ತಿತ್ವ ವಿಕಸನವಾಗುವುದರ ಜೊತೆಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ದೊರೆತಂತಾಗುತ್ತದೆ’ ಎಂದು ಸಲಹೆ ನೀಡಿದರು.

ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಜೆಎಸ್‌ಎಸ್‌ ವಿದ್ಯಾಪೀಠ ನೀಡಿರುವ ಕೊಡುಗೆ ಶ್ಲಾಘನೀಯ. ಹಿಂದೆ ಜಿಲ್ಲೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು.

ADVERTISEMENT

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ದೂರದೃಷ್ಟಿತ್ವ ಹಾಗೂ ಶಿಕ್ಷಣ ಕ್ಷೇತ್ರದ ಮೇಲಿದ್ದ ಕಾಳಜಿಯ ಫಲವಾಗಿ ಜಿಲ್ಲೆಯಲ್ಲಿ ಹಲವು ವಿದ್ಯಾಸಂಸ್ಥೆಗಳು ತಲೆ ಎತ್ತಿದವು. ಹೊರ ಜಿಲ್ಲೆಗಳ ಮೇಲಿನ ಅವಲಂಬನೆಯೂ ಕಡಿಮೆಯಾಯಿತು’ ಎಂದರು.

ದಶಕಗಳಿಂದಲೂ ಅನ್ನ ದಾಸೋಹ ಹಾಗೂ ಅಕ್ಷರ ದಾಸೋಹದಲ್ಲಿ ತೊಡಗಿಸಿಕೊಂಡಿರುವ ಜೆಎಸ್‌ಎಸ್‌ ಸಂಸ್ಥೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಲವು ಕಾಲೇಜುಗಳನ್ನು ತೆರೆದಿರುವುದು ಶ್ಲಾಘನೀಯ. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆಯಲ್ಲೂ ಸಂಸ್ಥೆ ಮುಂದಿದ್ದು ಜಿಲ್ಲೆಯ ಜನಪದ ಶ್ರೀಮಂತಿಕೆಯನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ.

ಚಾಮರಾಜನಗರ ವಿಶ್ವವಿದ್ಯಾಲಯದ ಕುಲಸಚಿವ ಆರ್.ಲೋಕನಾಥ್ ಮಾತನಾಡಿ, ‘ವಿದ್ಯಾರ್ಥಿಗಳೊಳಗಿರುವ ಕ್ರಿಯಾಶೀಲತೆ ಪ್ರದರ್ಶನಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಉತ್ತಮ ವೇದಿಕೆಯಾಗಿದ್ದು ಪ್ರತಿಭಾವಂತ ಮಕ್ಕಳು ಬಳಸಿಕೊಳ್ಳಬೇಕು. ಜೆಎಸ್‌ಎಸ್‌ ಸಂಸ್ಥೆ ಕಲೆ, ಸಾಹಿತ್ಯ, ಸಂಗೀತ ನೃತ್ಯ ಸಹಿತ ಹಲವು ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಂಸ್ಕೃತಿಕ ವೈಭವ ಸಾರುತ್ತಿದೆ’ ಎಂದರು.

ಕಾಲೇಜು ಪ್ರಾಂಶುಪಾಲ ಡಾ.ಎನ್.ಮಹದೇವ ಸ್ವಾಮಿ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ವ್ಯೋಮಿಕಾ ಸಾಂಸ್ಕೃತಿಕ ಉತ್ಸವ ವೇದಿಕೆಯಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕಾಲೇಜಿನಲ್ಲಿ ಪಠ್ಯದ ಜೊತೆಗೆ ಪಠ್ಯೇತ್ತರ ಚಟುವಟಿಕೆಗಳನ್ನು ಆಯೋಜಿಸಿ ಸದೃಢ ವ್ಯಕ್ತಿತ್ವ ನಿರ್ಮಿಸಲಾಗುತ್ತಿದೆ.

ವ್ಯೋಮಿಕಾ ಕಾರ್ಯಕ್ರಮದಲ್ಲಿ ಆಹಾರ ಮೇಳ, ವಿಜ್ಞಾನ ಮಾದರಿಗಳ ತಯಾರಿಕೆ, ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಪರಿಕರಗಳ ಪ್ರದರ್ಶನ,  ಕೌಶಲಗಳ ಗುರುತಿಸುವಿಕೆಗೆ ಒತ್ತು ನೀಡಲಾಗಿದೆ’ ಎಂದರು.

ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ದೇವರಾಜ ಮೂರ್ತಿ ಉಪಸ್ಥಿತರಿದ್ದರು. ಜಮನಾ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.