ADVERTISEMENT

ಚಾಮರಾಜನಗರಕ್ಕೆ ಹವ್ಯಾಸಿ ರಂಗ ವೇದಿಕೆ ಬೇಕು

ಜೆಎಸ್‌ಎಸ್‌ ರಂಗೋತ್ಸವ–2019ಕ್ಕೆ ಹಿರಿಯ ಕಲಾವಿದ ಮೈಮ್‌ ರಮೇಶ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 15:48 IST
Last Updated 19 ಡಿಸೆಂಬರ್ 2019, 15:48 IST
ಮೈಸೂರು ರಂಗಾಯಣದ ಹಿರಿಯ ಕಲಾವಿದ ಮೈಮ್‌ ರಮೇಶ್‌ ಅವರು ಡ್ರಮ್‌ ಬಾರಿಸುವ ಮೂಲಕ ಜೆಎಸ್‌ಎಸ್‌ ರಂಗೋತ್ಸವಕ್ಕೆ ಚಾಲನೆ ನೀಡಿದರು
ಮೈಸೂರು ರಂಗಾಯಣದ ಹಿರಿಯ ಕಲಾವಿದ ಮೈಮ್‌ ರಮೇಶ್‌ ಅವರು ಡ್ರಮ್‌ ಬಾರಿಸುವ ಮೂಲಕ ಜೆಎಸ್‌ಎಸ್‌ ರಂಗೋತ್ಸವಕ್ಕೆ ಚಾಲನೆ ನೀಡಿದರು   

ಚಾಮರಾಜನಗರ: ‘ಚಾಮರಾಜನಗರದಲ್ಲಿ ರಂಗಭೂಮಿ ಬೆಳೆಯಲು ಒಂದು ಹವ್ಯಾಸಿ ರಂಗಭೂಮಿ ವೇದಿಕೆ ಬೇಕಾಗಿದೆ’ ಎಂದು ಮೈಸೂರು ರಂಗಾಯಣದ ಹಿರಿಯ ಕಲಾವಿದ ಮೈಮ್ ರಮೇಶ್ ಅವರು ಗುರುವಾರ ಪ್ರತಿಪಾದಿಸಿದರು.

ನಗರದ ಜೆಎಸ್ಎಸ್ ಬಾಲಿಕಾ ಪ್ರೌಢಶಾಲೆಯ ಅವರಣದಲ್ಲಿ ಜೆಎಸ್ಎಸ್ ಕಲಾಮಂಟಪ ಆಯೋಜಿಸಿರುವ ‘ರಂಗೋತ್ಸವ–2019’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರಂಗಭೂಮಿಯು ಜೀವನವನ್ನು ಕಲ್ಪಿಸಿ ಕೊಡುತ್ತದೆ. ವಾಕ್ ಸ್ವಾತಂತ್ರ್ಯವನ್ನೂ ಕಲಿಸಿಕೊಡುತ್ತದೆ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದಕ್ಕೆ ಪೋಷಕರು ಬೆಲೆ ಕೊಡಬೇಕು. ಜೆಎಸ್ಎಸ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಅನೇಕ ಅವಕಾಶಗಳನ್ನು ನೀಡಿದೆ’ ಎಂದು ಹೇಳಿದರು.

ADVERTISEMENT

‘ಮನುಷ್ಯ, ಮನುಷ್ಯನಾಗಿ ಕಾಣುವುದು ರಂಗಭೂಮಿಯಲ್ಲಿ ಮಾತ್ರ. ನಾನು ಕಡುಬಡತನದಿಂದ ಬಂದವನು. ರಂಗಭೂಮಿ ಬದುಕು ಕಟ್ಟಿ ಕೊಟ್ಟಿದೆ’ ಎಂದರು.

ಅದ್ಭುತ ಕಲೆ:ಸಾನಿಧ್ಯ ವಹಿಸಿದ್ದ ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಜೆಎಸ್ಎಸ್‌ ಕಲಾಮಂಟಪಕ್ಕೆ 50 ವರ್ಷಗಳ ಇತಿಹಾಸ ಇದೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ನಾಟಕಗಳನ್ನು ಮಾಡಿ ಪ್ರಶಸ್ತಿ ಗಳಿಸಿದೆ ಎಂದರು. ಸುತ್ತೂರಿನಲ್ಲಿ ಕಲಾಮಂಟಪ ಹೇಗೆ ಸಾಗಬೇಕು ಎಂದು ಚರ್ಚೆ ನಡೆದಾಗ, ಮಕ್ಕಳನ್ನು ಇಟ್ಟುಕೊಂಡು ತರಬೇತಿ ಕೊಡಬೇಕು ಎಂದು ಅನೇಕ ರಂಗಕರ್ಮಿಗಳು ಹೇಳಿದ್ದರು. ಅದರಂತೆ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಮಕ್ಕಳು ನಾಟಕಪ್ರದರ್ಶನ ನೀಡುತ್ತಾ ಬಂದಿದ್ದಾರೆ’ ಎಂದರು.

‘ಮನುಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ಕಲೆ ಸಹಕಾರಿ. ಅದರಲ್ಲೂ ರಂಗಕಲೆಗೆ ಅದ್ಭುತ ಶಕ್ತಿ ಇದೆ. ಅದು ಎಲ್ಲಿ, ಎಷ್ಟರ ಮಾತನಾಡಬೇಕು ಎಂದು ತಿಳಿಸುತ್ತದೆ. ಎಲ್ಲ ಮಕ್ಕಳಲ್ಲೂ ಒಂದಲ್ಲ ಒಂದು ಸುಪ್ತ ಪ್ರತಿಭೆ ಇರುತ್ತದೆ. ಅದಕ್ಕೆ ಅವಕಾಶ ಕೊಟ್ಟರೆ ಅವರು ಬೆಳೆಯುತ್ತಾರೆ’ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗಕರ್ಮಿಕೆ.ವೆಂಕಟರಾಜು ಅವರು ಮಾತನಾಡಿ, ‘ಜೆಎಸ್ಎಸ್‌ ಕಾಲೇಜು ಪ್ರಾರಂಭ ಆದ ವರ್ಷದಿಂದಲೇ ರಂಗಭೂಮಿಯ ಪ್ರಗತಿಗೆ ತನ್ನದೇ ಅದ ಕೆಲಸ ಮಾಡುತ್ತಿದೆ. ಕುವೆಂಪು ಅವರ ‘ಜಲಗಾರ’ ನಾಟಕ ಕೂಡ ಇಲ್ಲಿ ಪ್ರದರ್ಶನಗೊಂಡಿದೆ’ ಎಂದರು.

ಜೆಎಸ್‌ಎಸ್‌ ಕಲಾ ಮಂಟಪದ ಸಂಚಾಲಕ ಚಂದ್ರಶೇಖರಾಚಾರ್‌ ಪ್ರಸ್ತಾವಿಕವಾಗಿ ಮಾತನಾಡಿದರು.

ಸನ್ಮಾನ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ದೊಡ್ಡಗವಿ ಬಸಪ್ಪ ಅವರನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ಬನಶಂಕರಿ ಜೆಎಸ್ಎಸ್ ಪಬ್ಲಿಕ್ ಶಾಲೆಯ ಮಕ್ಕಳು ಚಂದ್ರಮುಖಿ ನಾಟಕ ಪ್ರದರ್ಶನ ಮಾಡಿದರು.

ರಂಗೋತ್ಸವದಲ್ಲಿ ಇಂದು, ನಾಳೆ

ಶುಕ್ರವಾರ: ಬೆಂಗಳೂರು ಎಚ್‌ಎಸ್‌ಆರ್‌ ಬಡಾವಣೆಯ ಜೆಎಸ್‌ಎಸ್‌ ಪಬ್ಲಿಕ್‌ ಶಾಲೆಯ ಮಕ್ಕಳಿಂದ ‘ತಿರುಕನ ಕನಸು ಹಾಗೂ ಮಂಗಳಗಳ ಉಪವಾಸ’

ಶನಿವಾರ:ಚಾಮರಾಜನಗರದ ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿಗಳಿಂದ ‘ಮಂಟೇಸ್ವಾಮಿ ಕಥಾಪ್ರಸಂಗ’

ಸಮಯ:ಬೆಳಿಗ್ಗೆ 11 ಮತ್ತು ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.