ಕೊಳ್ಳೇಗಾಲ: ‘ಚಂದಾಪುರದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ನ ಕನ್ನಡ ವಿರೋಧಿ ವರ್ತನೆ ಖಂಡಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣದ) ಪದಾಧಿಕಾರಿಗಳು ನಗರದ ಎಲ್ಲಾ ಬ್ಯಾಂಕ್‌ಗಳಿಗೆ ತೆರಳಿ ಕನ್ನಡದಲ್ಲಿ ವ್ಯವಹರಿಸಬೇಕು’ ಎಂದು ಮನವಿ ಮಾಡಿದರು.
ನಗರದ ಎಸ್‌ಬಿಐ ಬ್ಯಾಂಕ್, ಕೆನರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಬರೋಡ ಬ್ಯಾಂಕ್‌ಗಳಿಗೆ ಭೇಟಿ ನೀಡಿ ವ್ಯವಹಾರಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಬೇಕು ಎಂದು ಬಲವಾಗಿ ಆಗ್ರಹಿಸಿದರು.
ತಾಲ್ಲೂಕು ಅಧ್ಯಕ್ಷ ಅಯಾಜ್ ಕನ್ನಡಿಗ ಮಾತನಾಡಿ, ‘ರಾಜ್ಯದಲ್ಲಿ ಕನ್ನಡ ಭಾಷೆಗೆ ಗೌರವ ನೀಡದವರ ವಿರುದ್ಧ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು. ಬ್ಯಾಂಕ್‌ಗಳಲ್ಲಿ ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡುವುದು ಮತ್ತು ಎಲ್ಲಾ ಚಲನ್‌ಗಳು ಕನ್ನಡದಲ್ಲಿಯೂ ಲಭ್ಯವಾಗುವಂತೆ ಮಾಡುವುದೂ ಸೇರಿದಂತೆ ಅನೇಕ ನೀತಿ ನಿಯಮ ಜಾರಿ ಮಾಡಬೇಕು. ಕರ್ನಾಟಕದಲ್ಲಿ ಹುಟ್ಟಿ ಕನ್ನಡಕ್ಕೆ ಅವಮಾನ ಮಾಡುವುದನ್ನು ಸಹಿಸುವುದಿಲ್ಲ. ಬ್ಯಾಂಕ್ ವ್ಯವಹಾರ ಮಾಡುವ ಪ್ರತಿಯೊಬ್ಬರೂ ಕನ್ನಡವನ್ನು ಕಡ್ಡಾಯವಾಗಿ ಕಲಿತಿರಬೇಕು. ಇಲ್ಲದಿದ್ದರೆ ಅವರನ್ನು ಕಡ್ಡಾಯವಾಗಿ ರಜೆ ಮೇಲೆ ಮನೆಗೆ ಕಳುಹಿಸುವುದು ಸೂಕ್ತ’ ಎಂದರು.
‘ವಿದ್ಯಾವಂತರಿಗೆ ಹಿಂದಿ ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳು ಬರುತ್ತದೆ. ಆದರೆ, ಕೆಲ ಮುಗ್ಧರಿಗೆ ಕನ್ನಡ ಭಾಷೆ ಬಿಟ್ಟರೆ ಬೇರೆ ಯಾವ ಭಾಷೆಯೂ ಬರುವುದಿಲ್ಲ. ಅಂತವರು ಬ್ಯಾಂಕ್‌ನಲ್ಲಿ ಹೇಗೆ ಮಾತನಾಡಬೇಕು. ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಅವಮಾನ ಆಗುವುದು ಅಥವಾ ಬ್ಯಾಂಕ್ ಮ್ಯಾನೇಜರ್‌ಗಳು ಸಿಬ್ಬಂದಿ ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ಕಂಡರೆ ತಕ್ಷಣ ಬ್ಯಾಂಕ್ ಸಿಬ್ಬಂದಿಯನ್ನು ವಜಾ ಮಾಡಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ(ನಾರಾಯಣಗೌಡ ಬಣ) ಗೌರವಾಧ್ಯಕ್ಷ ಇದ್ರೀಶ್ ಪಾಷಾ, ನಿಶಾರ್ ಅಹಮದ್, ಉಪಾಧ್ಯಕ್ಷ ಕುಮಾರ್, ಮಹೇಂದ್ರ, ಮೂರ್ತಿ, ಶಾಸ್ತ್ರಿ, ತೌಸಿಫ್, ಸಂಘಟನಾ ಕಾರ್ಯದರ್ಶಿ ಸತ್ಯರಾಜ್, ನವೀನ್, ಸಿದ್ದು, ಇಫ್ರಾಜ್, ಬಸವಣ್ಣ, ಸಮೀರ್, ಮಹಿಳಾ ಘಟಕ ಅಧ್ಯಕ್ಷೆ ರಾಜೇಶ್ವರಿ, ಭಾಗ್ಯಲಕ್ಷ್ಮೀ, ಕವಿತಾ ಹಾಗೂ ರೈತ ಮುಖಂಡ ರಾಮಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.