ADVERTISEMENT

ನಗರಸಭೆ: ಕರಿಬಸವಯ್ಯ ಮತ್ತೆ ಆಯುಕ್ತ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 16:26 IST
Last Updated 5 ಆಗಸ್ಟ್ 2021, 16:26 IST
ಕರಿಬಸವಯ್ಯ
ಕರಿಬಸವಯ್ಯ   

ಚಾಮರಾಜನಗರ: ಇಲ್ಲಿನ ನಗರಸಭೆಯ ಆಯುಕ್ತರಾಗಿ ಕರಿಬಸವಯ್ಯ ಅವರು ಮತ್ತೆ ಅಧಿಕಾರ ಸ್ವೀಕರಿಸಿದ್ದಾರೆ.

ಮೂರು ತಿಂಗಳ ಹಿಂದೆಯಷ್ಟೆ ನಂಜನಗೂಡಿನಿಂದ ನಗರಕ್ಕೆ ವರ್ಗವಾಗಿದ್ದ ಕರಿಬಸವಯ್ಯ ಅವರನ್ನು ಹನೂರು ಪಟ್ಟಣ ಪಂಚಾಯಿತಿಯ ಸಮುದಾಯದ ಸಂಘಟನಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಜುಲೈ 27ರಂದು ಆದೇಶ ಹೊರಡಿಸಿತ್ತು. ಕೊಳ್ಳೇಗಾಲ ನಗರಸಭೆಯಲ್ಲಿ ಸಮುದಾಯ ಸಂಘಟನಾಧಿಕಾರಿ ಆಗಿದ್ದ ಪರಶಿವಯ್ಯ ಅವರನ್ನು ನಗರಸಭೆ ಆಯುಕ್ತರಾಗಿ ನಿಯೋಜಿಸಲಾಗಿತ್ತು.

ಈ ಆದೇಶವನ್ನು ಪ್ರಶ್ನಿಸಿ ಕರಿಬಸವಯ್ಯ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅವಧಿಗಿಂತ ಮೊದಲೇ ವರ್ಗ‌ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಇಲಾಖೆ ಹೊರಡಿಸಿದ್ದ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿದೆ.

ADVERTISEMENT

‘ಜುಲೈ 28ರಂದೇ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಅಷ್ಟರಲ್ಲಾಗಲೇ ವರ್ಗಾವಣೆ ಆದೇಶದ ಅನ್ವಯ ಪರಶಿವಯ್ಯ ಅವರು ಅಧಿಕಾರ ಸ್ವೀಕರಿಸಿದ್ದರು. ಹೈಕೋರ್ಟ್‌ ಆದೇಶದ ಪ್ರತಿ ಸಿಗುವಾಗ ತಡವಾಗಿತ್ತು. ಈಗ ಹೈಕೋರ್ಟ್‌ ಆದೇಶ ಹಾಗೂ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಆಯುಕ್ತನಾಗಿ ಮತ್ತೆ ಅಧಿಕಾರ ಸ್ವೀಕರಿಸಿದ್ದೇನೆ’ ಎಂದು ಕರಿಬಸವಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.