ಚಾಮರಾಜನಗರ: ಅವಿಭಜಿತ ಮೈಸೂರು ಜಿಲ್ಲೆಯ ಭಾಗವೇ ಆಗಿರುವ, ಕೃಷಿಯೊಂದಿಗೆ ಪರಿಸರ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಬಹುವಾಗಿ ನೆಚ್ಚಿಕೊಂಡಿರುವ ಚಾಮರಾಜನಗರ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ಕೊಡುಗೆಗಳನ್ನಷ್ಟೆ ನೀಡಿದ್ದಾರೆ.
2025–26ನೇ ಸಾಲಿನ ಬಜೆಟ್‌ನಲ್ಲಿ ‘ವನಸಿರಿ’ಯ ಜಿಲ್ಲೆಗೆ ಮಹತ್ವದ ಯೋಜನೆಗಳು ದೊರೆಯಬಹುದು ಎಂಬ ನಿರೀಕ್ಷೆ ಜನರದಾಗಿತ್ತು. ಉದ್ಯೋಗಗಳ ಸೃಷ್ಟಿಗೆ ಒತ್ತು, ಕೈಗಾರಿಕೆ, ಪರಿಸರ ಮತ್ತು ಧಾರ್ಮಿಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಆದ್ಯತೆ ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಅವರು ಮಂಡಿಸಿದ್ದರು. ಆದರೆ, ಇದಕ್ಕೆ ಮನ್ನಣೆ ದೊರೆತಿಲ್ಲ.
ಸುಧಾರಿತ ಆರೋಗ್ಯ ಸೌಲಭ್ಯವನ್ನು ಕಲ್ಪಿಸಬೇಕು ಎಂಬ ಒತ್ತಾಯಕ್ಕೆ ಮಣೆ ಹಾಕಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ, ರಾಜ್ಯ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳ ಪೈಕಿ ಹನೂರು ತಾಲ್ಲೂಕಿಗೆ ಎರಡು ಯೋಜನೆಗಳು ದೊರೆತಿವೆ.
ರೈತರು ಉತ್ಪಾದಿಸುವ ರೇಷ್ಮೆಗೂಡುಗಳಿಗೆ ಸೂಕ್ತ ಬೆಲೆ ದೊರಕಿಸಲು ಹಾಗೂ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಸಾಧಿಸುವ ದೃಷ್ಟಿಯಿಂದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಗುಣಮಟ್ಟ ಪರೀಕ್ಷೆ ಮತ್ತು ಶ್ರೇಣೀಕರಣದ ಕಾರ್ಯಕ್ಕಾಗಿ ‘ಅಸ್ಸೇಯರ್’ಗಳನ್ನು ನಿಯೋಜಿಸಲಾಗುವುದು ಎಂದು ಪ್ರಕಟಿಸಲಾಗಿದೆ. ಇದು, ರೇಷ್ಮೆನಾಡಾದ ನಗರದಲ್ಲಿ ರೇಷ್ಮೆಗೂಡಿನ ಮಾರುಕಟ್ಟೆ ಇರುವುದರಿಂದ ಇಲ್ಲಿಗೆ ಅನ್ವಯವಾಗಲಿದೆ.
ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ‘ಅಸ್ಸೇಯರ್’ಗಳ ನಿಯೋಜನೆ ಮಾಡಲಾಗುತ್ತದೆ ಎಂಬುದನ್ನು ಹೊರತುಪಡಿಸಿ ಅವರ ಇಲಾಖೆಗಳಿಂದ ಮಹತ್ವದ ಯೋಜನೆಗಳೇನೂ ಸಿಕ್ಕಿಲ್ಲ!
ಹೊಸದಾಗಿ ಘೋಷಣೆಯಾಗಿರುವ ಹನೂರು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಪ್ರಕಟಿಸಲಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ವಸತಿ ಶಾಲೆಗಳನ್ನು ಪಿಯು ಕಾಲೇಜಾಗಿ ಉನ್ನತೀಕರಿಸಲಾಗುವುದು ಎಂದು ಘೋಷಿಸಲಾಗಿದ್ದು, ಇದು ಗಡಿ ಜಿಲ್ಲೆ ಚಾಮರಾಜನಗರಕ್ಕೂ ದೊರೆಯಲಿದೆ. ಈ ಸಂಬಂಧ ಕೇಳಿಬಂದಿದ್ದ ಬೇಡಿಕೆಗೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ.
ಬಡವರ ಹಿತದ ಬಜೆಟ್
ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉತ್ತಮ ಬಜೆಟ್ ನೀಡಿದ್ದಾರೆ. ರಾಜ್ಯದಲ್ಲಿ 16 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆ ಮುಂದೆ ಯಾರೂ ಮಾಡಲಾರರು. ಇದು ರಾಜ್ಯದ ಬಡವರ ಹಿತಕ್ಕಾಗಿ ಮಾಡಿರುವ ಬಜೆಟ್ ಆಗಿದೆ.
ಡಾ.ಗುರುಮೂರ್ತಿ, ಕೊಳ್ಳೇಗಾಲ
ವಿಶೇಷ ಅನುದಾನವಿಲ್ಲ
ಪರಿಶಿಷ್ಟ ಜಾತಿ, ಪಂಗಡದವರ ಹಣವನ್ನು ಸರ್ಕಾರ ಲೂಟಿ ಮಾಡಿದೆ. ಇದು ಕಾಂಗ್ರೆಸ್ ಪಕ್ಷದ ಜನರಿಗಾಗಿ ಮಾಡಿರುವ ಬಜೆಟ್ ಎಂದು ಹೇಳಿದರೆ ತಪ್ಪಾಗಲಾರದು. ಚಾಮರಾಜನಗರ ಜಿಲ್ಲೆಗೆ ಯಾವ ವಿಶೇಷ ಅನುದಾನಗಳನ್ನೂ ನೀಡಿಲ್ಲ. ಮುಂದಿನ ದಿನಗಳಲ್ಲೂ ನೀಡುವುದು ಅನುಮಾನ. ಒಟ್ಟಾರೆ ಈ ಬಜೆಟ್ ಜಿಲ್ಲೆಗೆ ಶೂನ್ಯವಾಗಿದೆ.
ಸಿದ್ದಪ್ಪಾಜಿ, ಕೊಳ್ಳೇಗಾಲ
ಜಾನುವಾರು ಸಾಕಣೆದಾರರಿಗೆ ಅನುಕೂಲ
ಬಜೆಟ್‌ನಲ್ಲಿ ‘ಅನುಗ್ರಹ’ ಯೋಜನೆಯಡಿ ಜಾನುವಾರು ಆಕಸ್ಮಿಕ ಸಾವಿಗೆ ಪರಿಹಾರ ನೀಡಿರುವುದು ಉತ್ತಮ ಬೆಳವಣಿಗೆ. ₹10 ಸಾವಿರದಿಂದ ₹15 ಸಾವಿರದವರೆಗೆ ನೀಡುವುದರಿಂದ ಜಾನುವಾರು ಸಾಕಣೆದಾರರಿಗೆ ಆರ್ಥಿಕ ನಷ್ಟ ತಪ್ಪಲಿದೆ. ಕುರಿ, ಮೇಕೆ ಮೃತಪಟ್ಟರೆ ₹5ರಿಂದ ಏಳೂವರೆ ಸಾವಿರ ನೆರವು ಸಿಗುವುದರಿಂದ ಕೃಷಿಕ ಕುಟುಂಬಗಳಿಗೆ ನೆರವಾಗಲಿದೆ. ಒಟ್ಟಾರೆ ಈ ಬಾರಿ ಆಶಾದಾಯಕ ಬಜೆಟ್ ಮಂಡನೆಯಾಗಿದೆ.
ಚೇತನ್, ಯರಿಯೂರು ಯಳಂದೂರು
ಮೂಲಸೌಕರ್ಯ ವಿಸ್ತರಣೆ
ಬಜೆಟ್‌ನಲ್ಲಿ ಶಾಲೆಗಳ ಅಡುಗೆ ಮನೆಗಳನ್ನು ಉನ್ನತಿಕರಿಸಲು ಹಾಗೂ ಆಶಾ ಮತ್ತು ಅಡುಗೆ ಸಿಬ್ಬಂದಿಗಳ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿಟ್ಟಿರುವುದು ಉತ್ತಮ ಬೆಳವಣಿಗೆ. ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆತಿದೆ.
ಮಹದೇವಸ್ವಾಮಿ, ವಡಗೆರೆ ಯಳಂದೂರು
ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿತ್ತು
ಆರೋಗ್ಯ, ಕೃಷಿ ಹಾಗೂ ನೀರಾವರಿಗೆ ಹೆಚ್ಚು ಒತ್ತು ನೀಡಲಾಗಿದೆ. ಉದ್ಯೋಗ ಸೃಷ್ಟಿ ಹಾಗೂ ಬಂಡವಾಳ ಹೂಡಿಕೆಗೆ ಪ್ರಾಮುಖ್ಯತೆ ನೀಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ, ನೀರಾವರಿ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಾಗಿತ್ತು.
ಚಂದನ್, ಬಾಗಳಿ
ಹಗ್ಗದ ಮೇಲಿನ ನಡಿಗೆ
ಗ್ಯಾರಂಟಿ ಯೋಜನೆಗಳನ್ನು ಹರಸಾಹಸಪಟ್ಟು ಮುಂದುವರೆಸುವುದರ ಜೊತೆಗೆ ಅಭಿವೃದ್ಧಿಗೂ ಹೆಚ್ಚಿನ ಒತ್ತು ಕೊಡುವ ನಿಟ್ಟಿನಲ್ಲಿ ಹಗ್ಗದ ಮೇಲಿನ ನಡಿಗೆ ಅಥವಾ ಸರ್ಕಸ್ ತರಹ ಬ್ಯಾಲೆನ್ಸ್ ಮಾಡಿದಂತೆ ಕಾಣುತ್ತದೆ. ಚಾಮರಾಜನಗರಕ್ಕೆ ಅಂತರರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಘೋಷಣೆ ಸ್ವಾಗತಾರ್ಹ. ಚಿತ್ರೋದ್ಯಮದ ಉಳಿವಿಗೆ ಒಟಿಟಿ ಸ್ಥಾಪನೆಯಿಂದ ಸದಭಿರುಚಿಯ ಸಿನಿಮಾ ನೋಡಲು ಪ್ರೇಕ್ಷಕರಿಗೂ ಅನುಕೂಲ. ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ ಸ್ವಾಗತ, ಆದರೆ ಉನ್ನತ ಶಿಕ್ಷಣಕ್ಕೆ ಮತ್ತಷ್ಟು ಅನುದಾನ ಬೇಕಿತ್ತು. ಬೆಂಗಳೂರು ವಿವಿಗೆ ವ್ಯಕ್ತಿ ಹೆಸರಿನ ನಾಮಕರಣ ಬೇಡ. ಸರ್ಕಾರಿ ನೌಕರರಿಗೆ ಎನ್‌ಪಿಎಸ್ ರದ್ದು ಪಡಿಸಿ; ಒಪಿಎಸ್ ಜಾರಿಮಾಡುವ ಘೋಷಣೆ ಮಾಡಬೇಕಿತ್ತು. ಒಟ್ಟಾರೆ ಬಜೆಟ್ ಗ್ಯಾರಂಟಿ ಭಾರದಿಂದ ನಲುಗಿದೆ. ಕಲ್ಯಾಣ ರಾಜ್ಯದ ದೃಷ್ಟಿಯಿಂದ ನೋಡಿದರೆ ಇದು ಸ್ವಾಗತಾರ್ಹ.
ಪ್ರೊ.ಕೆ. ಚಾಮರಾಜು, ಆರ್ಥಿಕ ತಜ್ಞ, ಗುಂಡ್ಲುಪೇಟೆ
ಪೂರ್ಣ ಕಡೆಗಣನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟರ ಪರ ಎಂದು ಭಾಷಣ ಮಾಡುತ್ತಾರೆ. ಪರಿಶಿಷ್ಟರು ಸ್ವಾಭಿಮಾನದಿಂದ ಬದುಕಲು, ಉದ್ಯಮಗಳಿಗೆ, ಅಭಿವೃದ್ಧಿ ನಿಗಮಗಳಿಗೆ ನಿರೀಕ್ಷೆಯ ಪ್ರಮಾಣದ ಹಣ ಬಿಡುಗಡೆ ಮಾಡದೆ ಇರುವುದು ದುರದೃಷ್ಟಕರ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ರೈತಾಪಿ ವರ್ಗಕ್ಕೆ ಸ್ವಾವಲಂಬನೆಯಿಂದ ಬದುಕಲು ಯಾವುದೇ ಯೋಜನೆಗಳು ಘೋಷಣೆ ಯಾಗಿಲ್ಲ. ಜಿಲ್ಲೆಗೆ ಯಾವುದೇ ಅನುದಾನ ನೀಡದೆ ಪೂರ್ಣ ಪ್ರಮಾಣದಲ್ಲಿ ಕಡೆಗಣಿಸಿದ್ದಾರೆ.
ನವೀನ್ ಮೌರ್ಯ, ಸಂಶೋಧಕ, ಗುಂಡ್ಲುಪೇಟೆ
ಪರಿಶಿಷ್ಟರಿಗೆ ಅನ್ಯಾಯ
ಪರಿಶಿಷ್ಟ ಜಾತಿ, ಪಂಗಡದವರಿಗೆ ಹೇಳಿಕೊಳ್ಳುವಂಥ ಯಾವುದೇ ಕೊಡುಗೆಗಳನ್ನು ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬಜೆಟ್ ಪೂರ್ವ ಚರ್ಚೆ ನಡೆಸಲಾಗಿತು, ಈ ಸಭೆಗೆ ಎಲ್ಲಾ ಪ್ರಗತಿಪರ ಸಂಘಟನೆಗಳು ಹಾಗೂ ದಲಿತಪರ ಸಂಘಟನೆಗಳ ಮುಖಂಡರು ಭಾಗವಹಿಸಿ ರಾಜ್ಯದ ಹಿತಕ್ಕಾಗಿ ಮುಖ್ಯಮಂತ್ರಿಗೆ ಬಜೆಟ್ ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದರು. ನೂರಾರು ದಲಿತಪರ ಸಂಘಟನೆಗಳು ಸೇರಿ ಚರ್ಚಿಸಿ ನೀಡಿದ್ದ ಕೆಲವು ಸಲಹೆಗಳನ್ನೂ ಘೋಷಿಸಿಲ್ಲ.
ಮಹೇಂದ್ರ, ಶಾಗ್ಯ ಹನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.