ಕೊಳ್ಳೇಗಾಲದ ಪ್ರವಾಹಪೀಡಿತ ಗ್ರಾಮಗಳಿಂದ ಗ್ರಾಮಸ್ಥರನ್ನು ತೆಪ್ಪಗಳಲ್ಲಿ ಕಾಳಜಿ ಕೇಂದ್ರಗಳಿಗೆ ಕರೆತರಲಾಯಿತು
ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ 2 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರಬಿಟ್ಟಿರುವ ಪರಿಣಾಮ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೆ ಅಣಗಳ್ಳಿ, ಹರಳೆ, ಯಡಕುರಿಯ, ಗ್ರಾಮಗಳು ಜಲಾವೃತವಾಗಿದೆ.
ಗ್ರಾಮಗಳಲ್ಲಿ ನಾಲ್ಕು ಅಡಿಯಷ್ಟು ನೀರು ತುಂಬಿಕೊಂಡಿದ್ದು ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಇದೆ. ಮುಂಜಾಗ್ರತಾ ಕ್ರಮವಾಗಿ ತೆಪ್ಪಗಳನ್ನು ಬಳಸಿ ಗ್ರಾಮಸ್ಥರನ್ನು ರಕ್ಷಿಸಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸದ್ಯ 575ಕ್ಕೂ ಹೆಚ್ಚು ಗ್ರಾಮಸ್ಥರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಯುವಕನ ರಕ್ಷಣೆ: ಸತ್ತೆಗಾಲ ಸೇತುವೆ ಕೆಳಗೆ ಬೆಳಿಗ್ಗೆ ಬಹಿರ್ದೆಸೆಗೆ ತೆರಳಿದ್ದ ಮಹಮ್ಮದ್ ಮನ್ಸೂರ್ ಎಂಬಾತ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುವಾಗ ಸ್ಥಳೀಯವಾಗಿ ತೆಪ್ಪ ಚಲಾಯಿಸುವವರು ಗಮನಿಸಿ ರಕ್ಷಣೆ ಮಾಡಿದ್ದಾರೆ.
ಜಾನುವಾರುಗಳಿಗೆ ಗ್ರಾಮದ ಹೊರವಲಯಗಳಲ್ಲಿರು ರಸ್ತೆಗಳಲ್ಲಿ ಒಣ ಹುಲ್ಲು ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ. ನೀರು ಅಪಾಯದ ಮಟ್ಟ ತಲುಪುತ್ತಿದ್ದರೂ ಕೆಲವು ಗ್ರಾಮಗಳ ಜನರು ಕಾಳಜಿ ಕೇಂದ್ರಗಳಿಗೆ ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಳ್ಳೆಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರಾತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಉಪ ವಿಭಾಗಾಧಿಕಾರಿ ಮಹೇಶ್ ಹಾಗೂ ಅಧಿಕಾರಿಗಳ ತಂಡ ಗುರುವಾರ ಬೆಳಗಿನ ಜಾವ ಪ್ರವಾವ ಪೀಡಿತ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರ ಮನವೊಲಿಸಿತು.
ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಗ್ರಾಮಗಳಲ್ಲಿ ಉಳಿಯುವುದು ಸುರಕ್ಷಿತವಲ್ಲ ಎಂದು ಮನವರಿಕೆ ಮಾಡಿಕೊಟ್ಟು ಬಹುತೇಕರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿದರು.
ತಾಲ್ಲೂಕಿನ 8 ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದ್ದು ಕಬ್ಬು, ಭತ್ತ ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.
ಕಾಳಜಿ ಕೇಂದ್ರದಲ್ಲಿರುವವರಿಗೆ ಊಟ ಬಡಿಸುತ್ತಿರುವ ಜಿಲ್ಲಾಧಿಕಾರಿ ಶಿಲ್ಪಾ ನಾಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.