ADVERTISEMENT

ಇಂದು ಬರಗೂರು ಮಹಾ ಕೊಂಡೋತ್ಸವ

12 ವರ್ಷಗಳಿಗೊಮ್ಮೆ ನಡೆಯುವ ಉತ್ಸವಕ್ಕೆ ಮಾದಪ್ಪನ ಸನ್ನಿಧಿಯಿಂದ ಸತ್ತಿಗೆ, ನಂದಿಕಂಬಗಳ ರವಾನೆ

ಜಿ ಪ್ರದೀಪ್ ಕುಮಾರ್
Published 1 ಜುಲೈ 2025, 7:42 IST
Last Updated 1 ಜುಲೈ 2025, 7:42 IST
ಬರಗೂರಿನಲ್ಲಿ ನಡೆಯುವ ಮಹಾ ಕೊಂಡೋತ್ಸವದ ಪೂರ್ವಭಾವಿಯಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ದೊಡ್ಡ ಸತ್ತಿಗೆ, ಚಿಕ್ಕ ಸತ್ತಿಗೆ, ಬೆಳ್ಳಿ ಸತ್ತಿಗೆ ಹಾಗೂ ನಂದಿ ಕಂಬಗಳು ಹೊರಟವು
ಬರಗೂರಿನಲ್ಲಿ ನಡೆಯುವ ಮಹಾ ಕೊಂಡೋತ್ಸವದ ಪೂರ್ವಭಾವಿಯಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ದೊಡ್ಡ ಸತ್ತಿಗೆ, ಚಿಕ್ಕ ಸತ್ತಿಗೆ, ಬೆಳ್ಳಿ ಸತ್ತಿಗೆ ಹಾಗೂ ನಂದಿ ಕಂಬಗಳು ಹೊರಟವು   

ಮಹದೇಶ್ವರ ಬೆಟ್ಟ: ತಮಿಳುನಾಡಿನ ಬರಗೂರು ಗ್ರಾಮದ ತುರುಸನ ಪಾಳ್ಯದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕೊಂಡೋತ್ಸವ ಜುಲೈ 1ರಂದು ನಿಗದಿಯಾಗಿದ್ದು ಸಿದ್ಧತೆಗಳು ಭರದಿಂದ ಸಾಗಿವೆ. ಮಲೆ ಮಹದೇಶ್ವರ ಪವಾಡ ಮಾಡಿದ ಸ್ಥಳದಲ್ಲಿ ನಡೆಯುತ್ತಿರುವ ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯ ಸೇರಿದಂತೆ ಹಲವೆಡೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.

ಮಹಾ ಕೊಂಡೋತ್ಸವಕ್ಕೂ ಮಲೆ ಮಹದೇಶ್ವರನ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದ್ದು ಕೊಂಡೋತ್ಸವಕ್ಕೆ ಮಾದಪ್ಪನ ಸನ್ನಿಧಿಯಿಂದಲೇ ಬೆಳ್ಳಿ ಸತ್ತಿಗೆ ಹಾಗೂ ನಂದಿಕಂಬಗಳು ಹೋಗುವುದು ವಿಶೇಷ. ಈಗಾಗಲೇ ಮಹದೇಶ್ವರ ಬೆಟ್ಟದ ಹಲವು ಗ್ರಾಮಗಳಿಂದ ಬೆಳ್ಳಿ ಸತ್ತಿಗೆ ಹಾಗೂ ನಂದಿಕಂಬಗಳು ಕ್ಷೇತ್ರವನ್ನು ತಲುಪಿವೆ. ಅರ್ಚಕರು 30 ಕಿ.ಮೀ ಕಾಲ್ನಡಿಗೆಯಲ್ಲಿ ನಂದಿಕಂಬಗಳನ್ನು ಹೊತ್ತು ಸಾಗಿದ್ದಾರೆ. 

ಜುಲೈ 1ರಂದು ಬೆಳಗಿನ ಜಾವ ನಡೆಯುವ ಮಹಾ ಕೊಂಡೋತ್ಸವದಲ್ಲಿ ಬೆಟ್ಟದ 9 ಗ್ರಾಮಗಳ ದೇವಾಲಯಗಳ ಸತ್ತಿಗೆಗಳು ಹಾಗೂ ಅರ್ಚಕರು ಬಾಗವಹಿಸಲಿದ್ದಾರೆ. ತಮಿಳುನಾಡು ಹಾಗೂ ಕರ್ನಾಟಕ ಭಾಗದ 60 ಹಳ್ಳಿಗಳಿಂದ 30,000ಕ್ಕೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ. ಮಹದೇಶ್ವರ ಬೆಟ್ಟದ ಪ್ರಾಧಿಕಾರದ ವತಿಯಿಂದ ಮಹಾ ಕೊಂಡೋತ್ಸವಕ್ಕೆ ಬರುವ 10,000 ಭಕ್ತರಿಗೆ ಊಟದ ವ್ಯವಸ್ಥೆ ಮಾಡಿದೆ.

ADVERTISEMENT

ಐತಿಹಾಸಿಕ ಹಿನ್ನೆಲೆಯುಳ್ಳ ಪವಾಡ ಪುರುಷ ಮಾದೇಶ್ವರ ಸ್ವಾಮಿ ಕತ್ತಲ ರಾಜ್ಯದಿಂದ ಉತ್ತರ ನಾಡಿಗೆ ಬರುವಾಗ ಹಲವಾರು ಸ್ಥಳಗಳಲ್ಲಿ ಪವಾಡ ಮಾಡಿದ್ದಾರೆ ಎಂಬ ಐತಿಹ್ಯಗಳಿವೆ. ಮಹದೇಶ್ವರ ಕ್ಷೇತ್ರದಲ್ಲಿ ನೆಲೆಸುವ ಮುನ್ನ ತಮಿಳುನಾಡಿನ ಈರೋಡ್ ಜಿಲ್ಲೆಯ ಅಂದಿಯೂರಿಗೆ ಸೇರಿದ ಬರಗೂರು ತುರುಸನ ಪಾಳ್ಯದಲ್ಲಿ ಶ್ರವಣ ಎಂಬ ರಾಕ್ಷಸನನ್ನು ಸಂಹಾರ ಮಾಡಿ 8 ದೇವರನ್ನು ಬಂಧಮುಕ್ತಗೊಳಿಸಿದ ನೆನಪಿಗೆ ಪ್ರತಿ 12 ವರ್ಷಕ್ಕೊಮ್ಮೆ ಮಹಾ ಕೊಂಡೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.

ಕೊಂಡೋತ್ಸವ ಜರುಗಬೇಕಾದರೆ ಮಾದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿರುವ ನಂದಿಕಂಬಗಳು ಕಡ್ಡಾಯವಾಗಿ ಇರಲೇಬೇಕು. ಕೊಂಡೋತ್ಸವದ ಮೇಲುಸ್ತುವಾರಿಯನ್ನು ದೊಡ್ಡಪಾಲಿನ 6 ಹಾಗೂ ಚಿಕ್ಕಪಾಲಿನ 5 ಅರ್ಚಕರು ನಿರ್ವಹಿಸುತ್ತಾರೆ. 9 ಗ್ರಾಮಗಳಾದ ಅರಬಗೆರೆ ಕಂಬಾಳ ಸಿದ್ದೇಶ್ವರ, ಸುಳ್ವಾಡಿ ಭ್ರಮ್ಮೇಶ್ವರ, ನೆಲ್ಲೂರು ಶಿವಲಿಂಗೇಶ್ವರ, ಮಾಕನಪಾಳ್ಯ ಭದ್ರಕಾಳಮ್ಮ, ದೇವರಮಲೆ ಪಂದೇಶ್ವರ, ಸುಂಡಾಪುರ ವೀರಭದ್ರೇಶ್ವರ, ಪಾಲವಾಡಿ ಸಿದ್ದೇಶ್ವರ, ತಾವರಕೆರೆ ವಿರಭದ್ರಸ್ವಾಮಿ ದೇವಸ್ಥಾನದ ಸತ್ತಿಗೆ ಹಾಗೂ ಅರ್ಚಕರು ಭಾಗವಹಿಸುತ್ತಾರೆ.

ಕೊಂಡೋತ್ಸವದಲ್ಲಿ ಅರ್ಚಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಕೊಂಡವು 18 ಅಡಿ ಉದ್ದ ಹಾಗೂ 3 ಅಡಿ ಅಗಲ ಹೊಂದಿದೆ.

ಮಹಾ ಕೊಂಡೋತ್ಸವದಲ್ಲಿ ಭಾಗವಹಿಸಲು ದೊಡ್ಡ ಸತ್ತಿಗೆ ಚಿಕ್ಕ ಸತ್ತಿಗೆ ಬೆಳ್ಳಿ ಸತ್ತಿಗೆಯನ್ನು ಹೊತ್ತು ತಮಿಳುನಾಡಿನ ನಾಲ್ ರೋಡ್ ತಲುಪಿದ ಅರ್ಚಕರನ್ನು ಬರ ಮಾಡಿಕೊಳ್ಳಲು ಸೇರಿದ ಜನರು

Highlights - 30,000ಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಮಲೆ ಮಹದೇಶ್ವರ ಕ್ಷೇತ್ರದಿಂದ 10,000 ಮಂದಿಗೆ ಭೋಜನದ ವ್ಯವಸ್ಥೆ 30 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗುವ ಅರ್ಚಕರು, ಭಕ್ತರು 

ಕೊಂಡೋತ್ಸವ ತಯಾರಿ ಹೇಗೆ

ಕೊಂಡೋತ್ಸವ ಆರಂಭವಾಗುವ ನಾಲ್ಕು ತಿಂಗಳು ಮುಂಚಿತವಾಗಿ ತಯಾರಿ ಆರಂಭವಾಗು‌ತ್ತವೆ. 60 ಹಳ್ಳಿಗಳಿಗೆ ಭೇಟಿ ನೀಡಿ ಜಾತ್ರಾ ಮಹೋತ್ಸವಕ್ಕೆ ಚಂದಾ ವಸೂಲಿ ಮಾಡಿ ಊಟದ ವ್ಯವಸ್ಥೆಗೆ ದಾನಿಗಳನ್ನು ಆರಿಸಲಾಗುತ್ತದೆ. ಕೊಂಡೋತ್ಸವ ಕೆಲವೇ ದಿನಗಳು ಇರುವಂತೆ ಮಾದೇಶ್ವರನ ಸತ್ತಿಗೆ ಹೊತ್ತ ದೊಡ್ಡ ಪಾಲು ಹಾಗೂ ಚಿಕ್ಕ ಪಾಲಿನ ಅರ್ಚಕರು ದೊಡ್ಡಣೆ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಪೂಜೆ ನೆರವೇರಿಸಿ ಕಾಡಿನ ಹಾದಿಯಲ್ಲಿ ಸಾಗಿ ಪಾಲಾರ್ ನದಿ ಮಾರ್ಗವಾಗಿ ಬರಗೂರು ಮುಖ್ಯ ರಸ್ತೆಯ ಮೂಲಕ ಹಲವು ಗ್ರಾಮದ ಸತ್ತಿಗೆಗಳ ಜತೆಗೂಡಿ ತುರುಸನ ಪಾಳ್ಯ ಪ್ರವೇಶಿಸುತ್ತಾರೆ. ಕೊಂಡೋತ್ಸವದ ಬಳಿಕ ಮಹದೇಶ್ವರ ಬೆಟ್ಟಕ್ಕೆ ಬಂದು ತಂಬಡಿಗೇರಿಯ ಮೇಗಳ ಕೇರಿ ಹಾಗೂ ಕೆಳಗಲ ಕೇರಿಯಲ್ಲಿ ಎರಡು ದಿನ ಪೂಜೆ ನೆರವೇರಿಸಿ ನಂತರ ಮಾದಪ್ಪನ ಸನ್ನಿಧಿಗೆ ಸೇರಲಿದ್ದಾರೆ ಎಂದು ಬೇಡಗಂಪಣ ಸಮುದಾಯದ ಪುಟ್ಟಣ್ಣ ಧಾರ್ಮಿಕ ವಿಧಿವಿಧಾನಗಳ ಕುರಿತು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.