ADVERTISEMENT

ಕೊಂಗಳ್ಳಿ ಬೆಟ್ಟದಲ್ಲಿ ರಾತ್ರಿ ವಾಸ್ತವ್ಯ ನಿಷೇಧ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 8:56 IST
Last Updated 5 ಆಗಸ್ಟ್ 2018, 8:56 IST
ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ
ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ   

ಚಾಮರಾಜನಗರ: ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಇತಿಹಾಸ ಪ್ರಸಿದ್ಧ ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಜನರು ರಾತ್ರಿ ವಾಸ್ತವ ಮಾಡುವುದಕ್ಕೆ ಅಲ್ಲಿನ ಅರಣ್ಯ ಇಲಾಖೆ ನಿರ್ಬಂಧ ಹೇರಿದೆ.

ಈ ದೇವಸ್ಥಾನ ಇರುವ ಪ್ರದೇಶವು ಕೊಂಗಳ್ಳಿ ಬೆಟ್ಟ ಎಂದೇ ಪ್ರಸಿದ್ಧವಾಗಿದ್ದು, ತಾಳವಾಡಿ ಸಮೀಪದಲ್ಲಿರುವ ಈ ದೇವಸ್ಥಾನಕ್ಕೆಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆದರೆ, ಇಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ.

ಐದಾರು ದಿನಗಳ ಹಿಂದಿನಿಂದ ಈ ಆದೇಶ ಜಾರಿಯಾಗಿದ್ದು, ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಭಕ್ತರು ಪ್ರವೇಶಿಸಲು ಅವಕಾಶ ನೀಡಲಾಗಿದೆ. ಈ ಸಂಬಂಧ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ತಮಿಳು ಮತ್ತು ಕನ್ನಡದಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ.

ADVERTISEMENT

ಈ ಭಾಗದಲ್ಲಿ ಆನೆ, ಹುಲಿ, ಚಿರತೆ, ಕಾಡು ಎಮ್ಮೆ ಕರಡಿ ಮುಂತಾದ ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗಿರುವುದರಿಂದ ರಾತ್ರಿ ಸಮಯದಲ್ಲಿ ದೇವಾಲಯದ ಆವರಣದಲ್ಲಿ ಭಕ್ತರು ತಂಗುವುದಕ್ಕೆ ಅವಕಾಶ ಇಲ್ಲ ಎಂದು ಅರಣ್ಯ ಇಲಾಖೆ ಹೇಳಿದೆ.

ದೇವಾಲಯದ ಆವರಣದಲ್ಲಿನ ಪೂಜಾಸಾಮಗ್ರಿ ಮತ್ತು ಹೋಟೆಲ್‌ಗಳಿಗೆ ಬೆಳಿಗ್ಗೆ 6ರಿಂದ ಸಂಜೆ 6ವರೆಗೆ ಮಾತ್ರತೆರೆಯಲು ಸೂಚಿಸಲಾಗಿದೆ.

ಹಳೆ ಮೈಸೂರು ಭಾಗದ ಜಿಲ್ಲೆಗಳಿಂದ ಭಕ್ತರು ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಕಾರ್ತಿಕ ಮಾಸ, ಶ್ರಾವಣ ಮಾಸ, ಅಮಾವಾಸ್ಯೆಗಳ ದಿನಗಳಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ರಾತ್ರಿ ವಾಸ್ತವ್ಯ ಇದ್ದು, ಹರಿಕೆ ಸಲ್ಲಿಸುವುದು, ಹುಲಿವಾಹನ ಉತ್ಸವದಂತಹ ವಿಶೇಷ ಸೇವೆಗಳನ್ನು ಮಾಡಿಸುತ್ತಿದ್ದರು. ಭಕ್ತರ ವಾಸ್ತವ್ಯಕ್ಕೆ ಇಲ್ಲಿ ಅತಿಥಿಗೃಹಗಳ ವ್ಯವಸ್ಥೆಯೂ ಇತ್ತು.

ಜೂಜಾಟ, ಮದ್ಯಪಾನ ನಿಷೇಧ: ದೇವರ ದರ್ಶನದ ನೆಪದಲ್ಲಿ ದೇವಾಲಯಕ್ಕೆ ಬರುವ ಭಕ್ತರು ಮದ್ಯಪಾನ, ಜೂಜಾಟದಂತಹ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು ಎಂದು ಆರೋಪವೂ ಇತ್ತು. ತಮಿಳುನಾಡಿನ ಅರಣ್ಯ ಇಲಾಖೆ ಇದರ ಮೇಲೂ ನಿರ್ಬಂಧ ವಿಧಿಸಿದೆ. ದೇವಸ್ಥಾನದ ಆವರಣ ಬಿಟ್ಟು ಕಾಡಿನೊಳಗೆ ಹೋಗುವಂತಿಲ್ಲ ಎಂದು ಸೂಚಿಸಲಾಗಿದೆ.

ಕರ್ನಾಟಕದ ಬಂಡೀ‍ಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಬರುವ ಹಿಮವದ್‌ಗೋಪಾಲಸ್ವಾಮಿ ಬೆಟ್ಟಕ್ಕೆ ಭಕ್ತರು ರಾತ್ರಿ ಭೇಟಿ ನೀಡುವುದಕ್ಕೆ ನಿಷೇಧ ಹೇರಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ಲಾಸ್ಟಿಕ್‌ ನಿಷೇಧ, ವಾಹನಗಳಿಗೆ ಶುಲ್ಕ
ಕೊಂಗಳ್ಳಿ ಬೆಟ್ಟಕ್ಕೆ ಪ್ಲಾಸ್ಟಿಕ್‌ ವಸ್ತುಗಳನ್ನು ತರುವುದಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೇ, ಅಲ್ಲಿಗೆ ಬರುವ ದ್ವಿಚಕ್ರವಾಹನಗಳಿಗೆ ₹20 ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ₹50 ಶುಲ್ಕ ವಿಧಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.