ADVERTISEMENT

ಹೈನೋದ್ಯಮದಲ್ಲಿ ಯಶಸ್ಸುಕಂಡ ಸೈಯದ್‌ ಅಲಿ

38 ಹಸುಗಳ ಸಾಕಣೆ, ದಿನಕ್ಕೆ ಡೇರಿಗೆ 450ರಿಂದ 500 ಲೀಟರ್‌ ಹಾಲು ಉತ್ಪಾದನೆ

ಮಲ್ಲೇಶ ಎಂ.
Published 14 ಆಗಸ್ಟ್ 2019, 20:15 IST
Last Updated 14 ಆಗಸ್ಟ್ 2019, 20:15 IST
ಸೈಯದ್‌ ಅಲಿ ಅವರ ಫಾರಂನಲ್ಲಿರುವ ಹಸುಗಳು
ಸೈಯದ್‌ ಅಲಿ ಅವರ ಫಾರಂನಲ್ಲಿರುವ ಹಸುಗಳು   

ಗುಂಡ್ಲುಪೇಟೆ: ಹೈನುಗಾರಿಕೆಯನ್ನೇ ಉದ್ಯಮ ಮಾಡಿಕೊಂಡವರೊಬ್ಬರು ತಾಲ್ಲೂಕಿನಲ್ಲಿ ಇದ್ದಾರೆ. ಹೆಸರು ಸೈಯದ್‌ ಅಲಿ (ಕುಂಜುಟಿ).ಮೂಲತಃ ಕೇರಳದವರಾ‌ದ ಅವರು ಈಗ ಭೀಮನಬೀಡುವಿನಲ್ಲಿ ನೆಲೆಸಿದ್ದಾರೆ. ದಿನಂಪ್ರತಿ ಅವರು ಡೇರಿಗೆ 450ರಿಂದ 500 ಲೀಟರ್‌ ಹಾಲು ಹಾಕುತ್ತಾರೆ.

13 ಎಕರೆ ಜಮೀನು ಹೊಂದಿರುವ ಅವರು, ಮಿಶ್ರ ತಳಿಗಳ 38 ಹಸುಗಳನ್ನು ಸಾಕುತ್ತಿದ್ದಾರೆ. ಪ್ರತಿ ದಿನ ಕಣ್ಣೇಗಾಲ ಗ್ರಾಮದಲ್ಲಿರುವ ಡೇರಿಗೆ ಹಾಲು ಹಾಕುತ್ತಾರೆ. ಒಂದರ್ಥದಲ್ಲಿ ಇವರ ಹಾಲನ್ನೇ ನಂಬಿ ನಡೆಯುತ್ತಿದೆ ಡೇರಿ. ಇತರ ಉದ್ಯಮ, ಉದ್ಯೋಗಗಳಿಗೆ ಹೋಲಿಸಿದರೆ ಹಸು ಸಾಗಣೆಗೂ ಕಡಿಮೆ ಅಲ್ಲ ಎಂಬುದನ್ನು ಸೈಯದ್‌ ಅಲಿ ತೋರಿಸಿದ್ದಾರೆ.

‘ತಿಂಗಳಿಗೆ ₹ 3.5 ಲಕ್ಷದಿಂದ ₹ 4 ಲಕ್ಷ ಖರ್ಚು ಮಾಡಿದರೆ ಅರ್ಧದಷ್ಟು ಉಳಿಯುತ್ತದೆ. ಬೇರೆಯವರ ಬಳಿ ಕೈ ಕಟ್ಟಿ ನಿಲ್ಲಬೇಕಿಲ್ಲ. ಹಸುಗಳನ್ನು ಸಮರ್ಪಕವಾಗಿ ಸಾಕಿದರೆ ಯಾವ ಉದ್ಯೋಗವೂ ಬೇಡ’ ಎಂದು ಅನುಭವದ ಮಾತು ಹೇಳುತ್ತಾರೆ ಸೈಯದ್ ಅಲಿ.

ADVERTISEMENT

10 ಹಸುಗಳಿಂದ ಆರಂಭ: 10 ಹಸುಗಳನ್ನು ಕಟ್ಟಿ ಆರಂಭಿಸಿದ್ದ ಫಾರಂನಲ್ಲಿ ಈಗ 38 ಹಸುಗಳಿವೆ. ಈ ಸಂಖ್ಯೆಯನ್ನು 120ಕ್ಕೆ ಹೆಚ್ಚಿಸಬೇಕು ಎಂಬುದು ಅವರ ಆಸೆ.

‘ಪ್ರತಿ ಹಸು ಕರು ಹಾಕಿದ ಆರಂಭದಲ್ಲಿ ಎರಡು ಹೊತ್ತು ಸೇರಿ 20 ಲೀಟರ್ ಹಾಲು ಕೊಡುತ್ತದೆ. ದಿನಕಳೆದಂತೆ ಇದು 10ರಿಂದ 12 ಲೀಟರ್‌ಗೆ ಇಳಿಯುತ್ತದೆ. ಹೆಚ್ಚು ಹಾಲು ಕೊಡುವ ಹಸುಗಳನ್ನು ಮಾತ್ರ ಸಾಕಲಾಗುತ್ತದೆ’ ಎಂದು ಸೈಯದ್‌ ಅಲಿ ಹೇಳಿದರು.

ಹೈಟೆಕ್ ಫಾರಂ: ಹಸುಗಳ ಲಾಲನೆಪಾಲನೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.ಹಸುಗಳಿಗೆ ಕುಡಿಯಲು ನೀರು, ಮೈತೊಳೆಯಲು ಯಂತ್ರ, ಬಿಸಿ ಹೆಚ್ಚಾದಾಗ ಮಂಜಿನಂತೆ ನೀರು ಚುಮುಕಿಸುವ ಸ್ಪೈಯರ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹಸುಗಳನ್ನು ಕಾಲಕಾಲಕ್ಕೆ ವೈದ್ಯರಿಂದ ತಪಾಸಣೆ ಮಾಡಿ ಆರೋಗ್ಯ ಕಾಳಜಿ ಮಾಡಲಾಗುತ್ತದೆ. ಕಟ್ಟಿ ಹಾಕಿದ ಜಾಗಕ್ಕೆ ಮೇವು ನೀಡಲಾಗುತ್ತದೆ. ದಿನಕ್ಕೆ ಒಂದು ಗಂಟೆ ಅವುಗಳನ್ನು ಹೊರಗೆ ಬಿಡಲಾಗುತ್ತದೆ.

‘ಮೇವಾಗಿ ಜೋಳದಕಡ್ಡಿ, ಒಣ ಮತ್ತು ಹಸಿ ಹುಲ್ಲು ಜತೆಗೆ, ಪಶುಆಹಾರ ನೀಡಲಾಗುತ್ತದೆ.ಜೋಳದ ಕಡ್ಡಿಗಳನ್ನು ತುಂಡು ಮಾಡಿ ಒಂದು ದೊಡ್ಡ ತೊಟ್ಟಿಯಲ್ಲಿ ಹಾಕಿ ಅದರ ಮೇಲೆ ಮೊಸರು, ಬೆಲ್ಲ, ಸ್ವಲ್ಪ ಪ್ರಮಾಣದಲ್ಲಿ ಯೂರಿಯಾ ಹಾಕಿ 25 ದಿನಗಳವರೆಗೆ ಮುಚ್ಚಲಾಗುತ್ತದೆ. ಬಳಿಕ ಅದನ್ನು ಹಸುಗಳಿಗೆ ನೀಡಲಾಗುತ್ತದೆ. ಇದರಿಂದ ಹೆಚ್ಚಿನ ಪೌಷ್ಟಿಕಾಂಶ ದೊರೆಯುತ್ತದೆ’ ಎಂದು ಅವರು ವಿವರಿಸಿದರು.

‘ಸಣ್ಣ ವಯಸ್ಸಿನಲ್ಲಿ ಪ್ರಾಣಿಗಳ ಮೇಲಿದ್ದ ಪ್ರೀತಿ ಇಂದು ಅಗಾಧವಾಗಿ ಬೆಳೆದು ಫಾರಂ ಮಾಡುವಂತಾಯಿತು. ಇಷ್ಟು ಹಸುಗಳನ್ನು ಒಬ್ಬರೇ ನೋಡಿಕೊಳ್ಳಲು ಆಗುವುದಿಲ್ಲ. ಇದಕ್ಕೆಂದೇ ಎರಡು ಕುಟುಂಬಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೆಚ್ಚು ಕೆಲಸ ಇದ್ದರೆ ಕೂಲಿಯಾಳುಗಳನ್ನು ಕರೆಯುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ಕೆಜಿ ಮುಸುಕಿನ ಜೋಳದಿಂದ 10 ಕೆಜಿ ಮೇವು

ಸೈಯದ್‌ ಅಲಿ ಅವರು ಮುಸುಕಿನ ಜೋಳದ ಪೈರನ್ನು ಹಸುಗಳಿಗೆ ಮೇವಾಗಿ ಕೊಡುತ್ತಾರೆ. ಈ ಮೇವನ್ನು ಮಾಡಲು ವಿಶಿಷ್ಟ ವಿಧಾನವನ್ನು ಅನುಸರಿಸುತ್ತಾರೆ.

‘ಮುಸುಕಿನ ಜೋಳವನ್ನು ಗೋಣಿಚೀಲದಲ್ಲಿ ಹಾಕಿ ನಮ್ಮವರು ನೀರು ಹಾಕುತ್ತಾರೆ. ಮೊಳಕೆ ಬಂದ ಮೇಲೆ ಅದನ್ನು ಪ್ಲಾಸ್ಟಿಕ್ ಟ್ರೇ ಒಳಗೆ ಹಾಕಿ ಗಂಟೆಗೆ ಒಂದು ಸಲ ಹತ್ತು ಸೆಕೆಂಡ್ ಕಾಲ ನೀರನ್ನು ಸಿಂಪಡಿಸುತ್ತಾರೆ. ವಾರದ ಬಳಿಕ ಏಳೆಂಟು ಇಂಚಿನಷ್ಟು ಬೆಳೆದಿರುವ ಪೈರನ್ನು ಹಸುಗಳಿಗೆ ನೀಡುತ್ತಾರೆ. ಈ ರೀತಿ ಮಾಡುವುದರಿಂದ ಒಂದು ಕೆಜಿ ಮುಸುಕಿನ ಜೋಳದಿಂದ ಹತ್ತು ಕೆಜಿಯಷ್ಟು ಮೇವು ಮಾಡಬಹುದು’ ಎಂದು ಸೈಯದ್‌ ಅಲಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.