ADVERTISEMENT

ಹನೂರು: ಹಾಜರಾತಿ ಕೊರತೆ- 3 ಶಾಲೆಗಳಿಗೆ ಬೀಗ

ಹನೂರು: ತಾಲ್ಲೂಕಿನ 17 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಹಾಜರಾತಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 7:05 IST
Last Updated 16 ಮಾರ್ಚ್ 2025, 7:05 IST
ಹನೂರು ತಾಲೂಕಿನ ಗಂಗಧರ ಕಟ್ಟೆ ಹೊಸೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಲ್ಲದೇ ಮುಚ್ಚಿರುವುದು.
ಹನೂರು ತಾಲೂಕಿನ ಗಂಗಧರ ಕಟ್ಟೆ ಹೊಸೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಲ್ಲದೇ ಮುಚ್ಚಿರುವುದು.   

ಹನೂರು: ತಾಲ್ಲೂಕಿನ 175 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 3 ಶಾಲೆಗಳನ್ನು ಮಕ್ಕಳಿಲ್ಲದ ಕಾರಣಕ್ಕಾಗಿ ಶಿಕ್ಷಣ ಇಲಾಖೆ ಬಾಗಿಲು ಮುಚ್ಚಿದೆ.

ಈಗಾಗಲೇ 17 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎಂಬ ಕಾರಣಕ್ಕಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಬಾಗಿಲು ಹಾಕಲು ಸಿದ್ಧತೆ ನಡೆದಿವೆ.

ಶೈಕ್ಷಣಿಕ ವಲಯದ ಗಂಗಾಧರನಕಟ್ಟೆ ಹೊಸೂರು, ಚಂಗಡಿ ಹಾಗೂ ಎಡಳ್ಳಿದೊಡ್ಡಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ವಿದ್ಯಾರ್ಥಿಗಳಿಲ್ಲ ಎಂಬ ಕಾರಣ ನೀಡಿ ಮುಚ್ಚಲಾಗಿದೆ.

ADVERTISEMENT

ತಾಲ್ಲೂಕು ಶೈಕ್ಷಣಿಕವಾಗಿ ಗಮನಾರ್ಹ ಸಾಧನೆ ಮಾಡಿದ್ದರೂ ಮಕ್ಕಳನ್ನು ಆಕರ್ಷಿಸಿ ಅವರಿಗೆ ಶಿಕ್ಷಣ ನೀಡುವಲ್ಲಿ ವಿಫಲವಾಗಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ತಾಲ್ಲೂಕಿನಾದ್ಯಂತ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಲೇ ಇದೆ. ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆದರೂ, ಕಳೆದ ನಾಲ್ಕೈದು ವರ್ಷಗಳಿಂದ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿಲ್ಲ. ಇದೂ ಕೂಡ ಮುಚ್ಚಲು ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳು ದಾಖಲಾಗದಿರಲು ಪ್ರಮುಖ ಕಾರಣ ಪೋಷಕರು ಕೂಲಿ ಕೆಲಸಕ್ಕಾಗಿ ಗ್ರಾಮೀಣ ಭಾಗದಿಂದ ಊಟಿ, ಕೊಡಗು, ಬೆಂಗಳೂರು ಹಾಗೂ ತಮಿಳುನಾಡು ಕಡೆಗಳಿಗೆ ತೆರಳುತ್ತಾರೆ. ಹೀಗೆ ಹೋಗುವಾಗ ತಮ್ಮ ಮಕ್ಕಳನ್ನೂ ಕರೆದುಕೊಂಡು ಹೋಗುತ್ತಾರೆ. ಇದರಿಂದ ಮಕ್ಕಳು ಮಧ್ಯಂತರದಲ್ಲೇ ಶಾಲೆ ಬಿಡುತ್ತಾರೆ. 

ಮತ್ತೊಂದು ಪ್ರಮುಖ ಕಾರಣವೆಂದರೆ ಶಾಲೆಗಳಲ್ಲಿ ಶಿಕ್ಷಕರು ದಾಖಲಾತಿ ಹೆಚ್ಚು ಮಾಡುವುದರಲ್ಲಿ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಪೋಷಕರ ಮನವೊಲಿಸುವಲ್ಲಿ ಶಿಕ್ಷಕರು ವಿಫಲರಾಗುತ್ತಿದ್ದಾರೆ. ಜೊತೆಗೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡದ ಪರಿಣಾಮ ಅವರ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳು: ವೆಂಕಟಶೆಟ್ಟಿ ದೊಡ್ಡಿ 3, ಚೆನ್ನೂರು 6, ದೊಡ್ಡಮಾಲಾಪುರ 2, ಶಿವಪುರ 4, ಎಲಚಿಕೆರೆ 5, ತೋಕೆರೆ 4, ಗುರುಮಲ್ಲಪ್ಪ ದೊಡ್ಡಿ 5, ಬಿ.ಜಿ ದೊಡ್ಡಿ 3, ಅಣಗಳ್ಳಿದೊಡ್ಡಿ 9, ಸುಂತರ್ ದೊ‍ಡ್ಡಿ 3, ಆಚಗಳ್ಳಿ ದೊಡ್ಡಿ 8, ಆನಾಪುರ 4, ಆರ್.ಎಸ್ ದೊಡ್ಡಿ (ಉರ್ದು) 6, ಸತ್ತಾರ್ ಮೇಡ್ 7, ಅತ್ತಿಖಾನೆ 7, ಪಳನಿಸ್ವಾಮಿ ದೊಡ್ಡಿ 4, ಪುಷ್ಪಾಪುರ 8 ಮಕ್ಕಳು ಕಲಿಯುತ್ತಿದ್ದಾರೆ.

ಈಗಿರುವ ಶಿಕ್ಷಣ ಇಲಾಖೆಯ ನಿಯಮದಂತೆ 5ಕ್ಕಿಂದ ಕಡಿಮೆ ಇರುವ ಶಾಲೆಗಳನ್ನು ಅಕ್ಕಪಕ್ಕದ ಶಾಲೆಗಳ ಜೊತೆ ವಿಲೀನ ಮಾಡಿ ಒಂದು ಶಾಲೆಯನ್ನು ಮುಚ್ಚಲಾಗುವುದು. ಮುಚ್ಚಿದ ಶಾಲೆಯ ಶಿಕ್ಷಕರನ್ನು ಬೇರೊಂದು ಶಾಲೆಗೆ ವರ್ಗಾಯಿಸಲಾಗುತ್ತಿದೆ. ಒಂದು ವೇಳೆ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಅಕ್ಕಪಕ್ಕದ ಶಾಲೆಯ ಜೊತೆ ವಿಲೀನ ಮಾಡಿದಲ್ಲಿ 17 ಶಾಲೆಗಳು ಮುಚ್ಚುತ್ತವೆ.

‘ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಮ್ಮಿಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ  ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ನರ್ಸರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಇದೆ ಇದನ್ನು ಪೋಷಕರು ಮನಗಾಣಬೇಕು’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಗುರುಲಿಂಗಯ್ಯ ಹೇಳಿದರು.

‘ಕಡಿಮೆ ಹಾಜರಾತಿ ಶಾಲೆ ಪರಿಶೀಲನೆ’

‘ಎಲ್ಲೆಲ್ಲಿ ಶಾಲೆಗಳು ಮುಚ್ಚಿವೆ ಮತ್ತು ಮಕ್ಕಳ ಸಂಖ್ಯೆ ಕಮ್ಮಿಯಾಗುತ್ತಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಕೊಡಿಸಬೇಕು ಎಂಬ ಕಾರಣದಿಂದ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆ ಹಾಗೂ ತಾಲ್ಲೂಕಿನ ಆಯಾ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಶಿಕ್ಷಣ ಸುಧಾರಣಾ ಸಮಿತಿ ರಚಿಸಲಾಗುತ್ತಿದೆ. ಪರೀಕ್ಷೆಗಳು ಮುಗಿದ ನಂತರ ಉಸ್ತುವಾರಿ ಸಚಿವರು ಹಾಗೂ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ ಅಗತ್ಯವಿರುವ ಕಡೆ ಇಂಗ್ಲೀಷ್ ಮಾಧ್ಯಮದ ಶಾಲೆ ತೆರೆಯಲು ಕ್ರಮವಹಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ‘ ಪ್ರಜಾವಾಣಿ’ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.