ADVERTISEMENT

ಸಾಂಬಾರ ಈರುಳ್ಳಿ ಒಣಗಿಸಲು ಬಿಸಿಲ ಕೊರತೆ

ಹಬ್ಬಗಳ ಸಾಲಿನಲ್ಲಿ ಸಣ್ಣ ಈರುಳ್ಳಿ ಧಾರಣೆ ಕುಸಿತ: ರೈತ ಕಂಗಾಲು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 3:17 IST
Last Updated 28 ಸೆಪ್ಟೆಂಬರ್ 2025, 3:17 IST
ಯಳಂದೂರು ತಾಲ್ಲೂಕಿನ ಅಂಬಳೆ ಹೊರವಲಯದ ತಾಕಿನಲ್ಲಿ ರೈತರು ಸಾಂಬಾರ ಈರುಳ್ಳಿ ಸಂಗ್ರಹಿಸಿ ಮಾರಾಟಕ್ಕೆ ಅಣಿಗೊಳಿಸಿದ್ದಾರೆ.
ಯಳಂದೂರು ತಾಲ್ಲೂಕಿನ ಅಂಬಳೆ ಹೊರವಲಯದ ತಾಕಿನಲ್ಲಿ ರೈತರು ಸಾಂಬಾರ ಈರುಳ್ಳಿ ಸಂಗ್ರಹಿಸಿ ಮಾರಾಟಕ್ಕೆ ಅಣಿಗೊಳಿಸಿದ್ದಾರೆ.   

ಯಳಂದೂರು: ದಸರಾ ಮತ್ತು ನವರಾತ್ರಿ ಹಬ್ಬಗಳ ಸಾಲು ಬಂದಿದೆ. ಆದರೂ, ಸಾಂಬಾರ ಈರುಳ್ಳಿ ಧಾರಣೆ ಏರಿಕೆ ಕಂಡಿಲ್ಲ. ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ, ಸಣ್ಣ ಈರುಳ್ಳಿ ಇಳುವರಿ ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಮತ್ತು ಬೇಡಿಕೆ ಕುಸಿತ ಕಂಡಿದೆ. ಇದು ಬೆಳೆಗಾರರ ಆದಾಯದ ಕುಸಿತಕ್ಕೂ ಕಾರಣವಾಗಿದೆ.

ತಾಲ್ಲೂಕಿನ ನೀರಾವರಿ ಭೂಮಿಯಲ್ಲಿ ರೈತರು ಈರುಳ್ಳಿ ನಾಟಿ ಮಾಡುತ್ತಾರೆ. ಅರಿಶಿನ ಬೆಳೆ ಮತ್ತು ತೋಟಗಾರಿಕಾ ತಾಕಿನ ನಡುವೆಯೂ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ. ಆಗಸ್ಟ್ ತಿಂಗಳಲ್ಲಿ ಬಿದ್ದ ಒಂದೆರಡು ಮಳೆಗೆ ಈರುಳ್ಳಿ ಸಮೃದ್ಧವಾಗಿ ಬೆಳೆದಿದೆ. ಸೆಪ್ಟೆಂಬರ್ ತಿಂಗಳ ಮೊದಲವಾರ ಬಿಸಿಲಿನ ವಾತಾವರಣ ಇದ್ದು, ರೈತರು ಕಟಾವಿಗೆ ಮುಂದಾಗಿದ್ದರು. ಆದರೆ. ಈಚಿನ ದಿನಗಳಲ್ಲಿ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಹಾಗಾಗ ಹನಿಯುತ್ತಿದ್ದು ಕೊಯ್ಲಿಗೂ ಹಿನ್ನಡೆ ತಂದಿತ್ತಿದೆ.

ಸಾಂಬಾರ ಈರುಳ್ಳಿ ಫಲಸಿಗೆ ಕಳೆ ನಿಯಂತ್ರಣಕ್ಕೆ ಹೆಚ್ಚು ಖರ್ಚು ತಗುಲುತ್ತದೆ. ಗೆಡ್ಡೆ ನಾಟಿಯಿಂದ ಕೊಯ್ಲಿವರೆಗೆ ಎಕೆರೆಗೆ ರೂ 30 ಸಾವಿರ ಖರ್ಚು ಬರುತ್ತದೆ. ನಂತರ ಬೆಲೆ ಮತ್ತು ಬೇಡಿಕೆ ನೋಡಿಕೊಂಡು ಮೈಸೂರು ಇಲ್ಲವೆ ತಮಿಳುನಾಡು ಮಾರುಕಟ್ಟೆಗೆ ಸಾಗಿಸುವ ಸಾಗಣೆ ವೆಚ್ಚವನ್ನು ಪ್ರತ್ಯೇಕವಾಗಿ ಬೇಸಾಯಗಾರರು ಭರಿಸಬೇಕಿದೆ ಎನ್ನುತ್ತಾರೆ ಅಂಬಳೆ ಕೃಷಿಕ ಉಮೇಶ್.

ADVERTISEMENT

ಮೈಸೂರು ಬಂಡಿಪಾಳ್ಯದ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿಗೆ ಕ್ವಿಂಟಲ್ ಒಂದಕ್ಕೆ ಧಾರಣೆ ರೂ 2500 ರಿಂದ 3 ಸಾವಿರ ಇದೆ. ಈರುಳ್ಳಿ ಕಿತ್ತು ಸಂಸ್ಕರಿಸಿ ಮಾರಾಟದ ತನಕ ಎಣಿಸಿದರೆ ಹಾಕಿದ ಬಂಡವಾಳ ಮಾತ್ರ ಕೈಸೇರುವ ನಿರೀಕ್ಷೆ ಇದೆ. ಸೂಕ್ತ ಬೆಲೆ ಸಿಕ್ಕರೆ ಮಾತ್ರ ಲಾಭದ ಮುಖ ನೋಡಬಹುದು ಎನ್ನುತ್ತಾರೆ ಇವರು.

ಕೊಯ್ಲಿನ ಹಂತದಲ್ಲಿ ಮೋಡ ಕಾಣಿಸಿಕೊಂಡಿದೆ. ಮಳೆ ಸುರಿದರೆ ಈರುಳ್ಳಿ ಗುಣಮಟ್ಟ ಕುಸಿಯಲಿದೆ. ಆಳು ಕಾಳಿನ ಖರ್ಚಿನಲ್ಲೂ ಏರಿಕೆ ಕಾಣಲಿದೆ. ಹಾಗಾಗಿ, ಸರ್ಕಾರ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸುವ ಬಗ್ಗೆ ಒತ್ತು ನೀಡಬೇಕು. ಇದರಿಂದ ರೈತರಿಗೆ ಹಾಕಿದ ಬಂಡವಾಳ ವಾಪಸ್ ಲಾಭದ ಕೈಸೇರಲಿದೆ ಎನ್ನುತ್ತಾರೆ ಬೆಳೆಗಾರರು.

ರೈತರು ಮಿಶ್ರ ಬೆಳೆಯಾಗಿ ಸಾಂಬಾರ ಈರುಳ್ಳಿ, ಮೆಣಸಿನಕಾಯಿ ಹಾಗೂ ಬಾಳೆ ನೆಡಬೇಕು. ಇದರಿಂದ ಬೆಲೆ ಕುಸಿತದಿಂದ ಉಂಟಾಗುವ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಸ್ಥಳೀಯ ಮತ್ತು ಅಂತರರಾಜ್ಯ ಮಾರುಕಟ್ಟೆಯ ಧಾರಣೆಗಳನ್ನು ಪರಿಶೀಲಿಸಿ ಮಾರಾಟದ ಬಗ್ಗೆ ರೈತರು ನಿರ್ಧಾರ ತೆಗೆದುಕೊಳ್ಳಬೇಕು ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್. ರಾಜು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.