ADVERTISEMENT

ಇಂದಿನಿಂದ ನ.14ರವರೆಗೆ ಕಾನೂನು ಅರಿವು-ನೆರವು

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಜಿಲ್ಲಾ ಪ್ರಧಾನ ನ್ಯಾಯಾಧೀಶರಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 16:30 IST
Last Updated 1 ಅಕ್ಟೋಬರ್ 2021, 16:30 IST
ಸದಾಶಿವ ಎಸ್‌.ಸುಲ್ತಾನ್‌ಪುರಿ
ಸದಾಶಿವ ಎಸ್‌.ಸುಲ್ತಾನ್‌ಪುರಿ   

ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರದಿಂದ (ಅ.2) ನ.14ರವರೆಗೆ 45 ದಿನ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ, ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು.

‘ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವುದು, ಕಾನೂನು ಸಾಕ್ಷರತೆ, ಉಚಿತ ಕಾನೂನಿನ ನೆರವು, ಸಲಹೆ ನೀಡುವುದು, ಜನತಾ ನ್ಯಾಯಾಲಯ ಮೂಲಕ ಪ್ರಕರಣಗಳನ್ನು ಶೀಘ್ರವಾಗಿ ಕಡಿಮೆ ಖರ್ಚಿನಲ್ಲಿ ಇತ್ಯರ್ಥಗೊಳಿಸುವುದು, ಕಾಯಂ ಜನತಾ ನ್ಯಾಯಾಲಯಗಳ ಮೂಲಕ ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ವಿವಾದಗಳ ಇತ್ಯರ್ಥ ಹಾಗೂ ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಸಂಧಾನ ವ್ಯವಸ್ಥೆ ಮತ್ತು ಪರ್ಯಾಯ ವ್ಯಾಜ್ಯ ಪರಿಹಾರ ವ್ಯವಸ್ಥೆ ಮಾಡುವುದೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಧ್ಯೇಯವಾಗಿದೆ’ ಎಂದರು.

ADVERTISEMENT

‘ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನ ಅನ್ವಯ ಗಾಂಧಿ ಜಯಂತಿ ದಿನದಿಂದ ನ.14ರ ಮಕ್ಕಳ ದಿನಾಚರಣೆವರೆಗೂ (ನೆಹರು ಜಯಂತಿ) ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕಾಗಿ ಜಿಲ್ಲೆಯ ಪ್ರತಿ ಗ್ರಾಮದ ಮನೆ ಮನೆಗೆ ತೆರಳಿ ಅರಿವು ಮೂಡಿಸಲಾಗುವುದು. ಎಲ್ಲ ಬಡಾವಣೆಗಳು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರದ ಅಧೀನದಲ್ಲಿರುವ ಎಲ್ಲ ಇಲಾಖೆಗಳ, ವಕೀಲರ ಸಹಯೋಗದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದು ಅವರು ಹೇಳಿದರು.

ಎಲ್ಲ ಗ್ರಾಮ, ಮನೆಗಳಲ್ಲಿ ಕಾನೂನು ಅರಿವು ಶಿಬಿರಗಳನ್ನು ಆಯೋಜಿಸಲಾಗಿದ್ದು, ಇದರ ಯಶಸ್ಸಿಗೆ ಜಿಲ್ಲೆಯ ಎಲ್ಲ ಇಲಾಖೆ, ಅಧಿಕಾರಿಗಳ ಸಹಕಾರ ಅತ್ಯಗತ್ಯ ಎಂದು ಸದಾಶಿವ ಎಸ್‌.ಸುಲ್ತಾನ್‌ಪುರಿ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್‌ ಉಪಸ್ಥಿತರಿದ್ದರು.

ಲೋಕ ಅದಾಲತ್‌: 2289 ಪ್ರಕರಣ ಇತ್ಯರ್ಥ
ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಗುರುವಾರ (ಸೆ.30) ನಡೆದ ಮೆಗಾ ಲೋಕ ಅದಾಲತ್‌ ಬಗ್ಗೆ ಮಾಹಿತಿ ನೀಡಿದ ನ್ಯಾಯಾಧೀಶರು, ‘ಜಿಲ್ಲೆಯಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದ 19,967 ಪ್ರಕರಣಗಳ ಪೈಕಿ 4,355 ಪ್ರಕರಣಗಳನ್ನು ಅದಾಲತ್‌ಗೆ ಗುರುತಿಸಲಾಗಿತ್ತು. ಈ ಪೈಕಿ 2,280 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ₹ 2.74 ಕೋಟಿ ಮೊತ್ತ ಇತ್ಯರ್ಥವಾಗಿ ಸರ್ಕಾರಕ್ಕೆ ಸಂದಾಯವಾಗಿದೆ’ ಎಂದು ಸದಾಶಿವ ಎಸ್‌.ಸುಲ್ತಾನ್‌ಪುರಿ ಹೇಳಿದರು.

‘ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲ ನ್ಯಾಯಾಲಯಗಳಲ್ಲಿ ಅದಾಲತ್‌ ನಡೆದಿದ್ದು, ಹಲವಾರು ವರ್ಷಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿದ್ದ ವ್ಯಾಜ್ಯಗಳು ಇತ್ಯರ್ಥವಾಗಿವೆ’ ಎಂದು ಅವರು ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.