ಚಾಮರಾಜನಗರ: ‘ವಕೀಲರು ಮನಸ್ಸನ್ನು ಶುದ್ದವಾಗಿಟ್ಟುಕೊಳ್ಳಬೇಕು. ಸಂಕುಚಿತ ಮನೋಭಾವನೆಯಿಂದ ಇರಬಾರದು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಶುಕ್ರವಾರ ಹೇಳಿದರು.
ನಗರದ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ವಕೀಲರ ಸಂಘ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನ್ಯಾಯಾಲಯದಲ್ಲಿ ಕಾನೂನು ಪ್ರಕಾರ ಆದೇಶ ನೀಡಲಾಗುತ್ತದೆ. . ವಕೀಲರಿಗೆ ಯಾವುದೇ ಜಾತಿ ಇಲ್ಲ. ಜಾತಿಯಿಂದ ಗುರುತಿಸಿಕೊಂಡರೆ ಪ‍್ರಕರಣಗಳು ಬರುವುದಿಲ್ಲ. ವಕೀಲರ ನಡುವೆ ಒಡಕು ಕೂಡ ಉಂಟಾಗುತ್ತದೆ’ ಎಂದರು.
ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶ ಲೋಕಪ್ಪ ಅವರು ಮಾತನಾಡಿ, ‘ಕಾನೂನುಗಳು ಬದಲಾಣೆ ಆಗುತ್ತಿರುವುದರಿಂದ ವಕೀಲರು ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು. ಇದರಿಂದ ಹೆಚ್ಚು ಜ್ಞಾನ ಸಂಪಾದನೆ ಮಾಡಲು ಸಹಕಾರಿಯಾಗುತ್ತದೆ’ ಎಂದರು.
‘ಸೋಲು ಗೆಲುವು ಸಹಜ. ಅದರೆ, ವಕೀಲರಿಂದ ಅನ್ಯಾಯ ಆಯಿತು ಎನ್ನುವ ಮಾತುಗಳು ಬರಬಾರದು. ಕಕ್ಷಿದಾರರಿಗೆ ನ್ಯಾಯ ಸಿಗುವಂತಾಗಬೇಕು. ವಕೀಲರಲ್ಲಿ ಒಗ್ಗಟ್ಟು ಇರಬೇಕು. ವೃತ್ತಿ ಜೀವನದಲ್ಲಿ ಜನ ಸಾಮಾನ್ಯರಿಗೆ ಮಾದರಿ ಆಗಿದ್ದರೆ ಒಳ್ಳೆಯದಾಗುತ್ತದೆ’ ಎಂದು ತಿಳಿಸಿದರು.
ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ‘ವಕೀಲರು ಸಮಾಜದಲ್ಲಿ ಜವಾಬ್ದಾರಿ ಉಳ್ಳವರಾಗಿದ್ದಾರೆ. ಸಮಾಜದ ಅಂಕು ಡೋಂಕು ತಿದ್ದುವ ಕೆಲಸ ಮಾಡುತ್ತಾರೆ. ಹಾಗಾಗಿ, ವಕೀಲರ ನಡವಳಿಕೆ ಬಹಳ ಮುಖ್ಯ’ ಎಂದರು.
‘ವಕೀಲರು ಆದಷ್ಟೂ ಸತ್ಯದ ಪರ ಇರಬೇಕು. ಇತ್ತೀಚೆಗೆ ವಕೀಲರ ಸಂಘಕ್ಕೆ ಕೆಟ್ಟ ಹೆಸರು ಬರುತ್ತಿದೆ. ಅದನ್ನು ಹೋಗಲಾಡಿಸುವ ಕೆಲಸ ಮಾಡಬೇಕು’ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೊನ್ನಸ್ವಾಮಿ, ಶ್ರೀಧರ ಎಂ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂಪಕಾ, ಪ್ರಧಾನ ಸಿವಿಲ್ ನ್ಯಾಯಾಧೀಶ ವೆಂಕಟೇಶ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಯೋಗೇಶ್, ವಕೀಲರ ಸಂಘದ ಸದಸ್ಯರಾದ ಅರುಣ್, ಸಂಘದ ಜಂಟಿ ಕಾರ್ಯದರ್ಶಿ ಮಲ್ಲು, ವಕೀಲ ಬಿ.ಬಿ.ನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.