
ಚಾಮರಾಜನಗರ: ವಕೀಲರು ವೃತ್ತಿಯಲ್ಲಿ ನೈಪುಣ್ಯತೆ ಸಾಧಿಸಲು ನಿರಂತರ ಅಧ್ಯಯನಶೀಲರಾಗಿರಬೇಕು ಎಂದು ಹೈಕೋರ್ಟ್ ಹಿರಿಯ ವಕೀಲ ಎಸ್.ಶಂಕರಪ್ಪ ಸಲಹೆ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ವಕೀಲರಿಗೆ ಹಮ್ಮಿಕೊಂಡಿದ್ದ ಕ್ರಿಮಿನಲ್ ಹಾಗೂ ಸಿವಿಲ್ ದಾವೆಗಳ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಕೀಲರಿಗೆ ವೃತ್ತಿಯಲ್ಲಿ ಬದ್ಧತೆ ಇರಬೇಕು, ಕಕ್ಷಿದಾರರ ಒಳಿತಿಗಾಗಿ ಪೂರಕವಾಗಿ ಕೆಲಸ ಮಾಡಬೇಕು. ಕ್ರಿಮಿನಲ್ ಪ್ರಕರಣಗಳನ್ನು ನಿಭಾಯಿಸುವಾಗ ಸ್ಥಳ ಪರಿಶೀಲನೆ ಅಗತ್ಯವಾಗಿದ್ದು ಪ್ರಕರಣಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಸಂಗ್ರಹ ಮಾಡಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ ಮಾತನಾಡಿ, ಸಿವಿಲ್ ನ್ಯಾಯಾಧೀಶರ ನೇಮಕಾತಿ ಹಾಗೂ ಸರ್ಕಾರಿ ಅಭಿಯೋಜಕರ ಹುದ್ದೆಗಳಿಗೆ ಪರೀಕ್ಷೆಗಳನ್ನು ಎದುರಿಸುವಾಗ ಇಂತಹ ತರಬೇತಿ ಕಾರ್ಯಾಗಾರಗಳು ತುಂಬಾ ಉಪಯುಕ್ತವಾಗಿದ್ದು ವಕೀಲರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಂಡ್ಯ ಜಿಲ್ಲಾ ವಕೀಲರ ಸಂಘದ ಹಿರಿಯ ಸದಸ್ಯ ಕೆ.ಬಸವಯ್ಯ ಸಿವಿಲ್ ಪ್ರಕ್ರಿಯೆ ಸಂಹಿತೆಯಡಿ ದಾವೆಗಳ ಸಲ್ಲಿಕೆ ಮತ್ತು ದಾಖಲಾತಿಗಳ ಮೇಲೆ ಅಡ್ಡ ವಿಚಾರಣೆ, ಲಿಖಿತ ಹೇಳಿಕೆ ತಯಾರಿ ವಿಚಾರಗಳನ್ನು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಶಿವರಾಮು ಮಾತನಾಡಿದರು. ಆಲ್ ಇಂಡಿಯಾ ಲಾಯರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕುಮಾರ ಹಾಗೂ ಹಿರಿಯ ಹಾಗೂ ಕಿರಿಯ ವಕೀಲರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.