
‘ಚಿರತೆ ಸೆರೆಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಇಲ್ಲ’ | ಜನ ಜಾನುವಾರುಗಳ ಮೇಲೆ ದಾಳಿ: ಜಮೀನಿಗೆ ತೆರಳು ಭಯ | ಚಿರತೆ ಉಪಟಳಕ್ಕೆ ಬೇಸತ್ತ ಗಂಗನದೊಡ್ಡಿ ಗ್ರಾಮಸ್ಥರು
ಹನೂರು: ಅರಣ್ಯದೊಳಗೆ ಪ್ರಾಣಿಗಳು ಮೃತಪಟ್ಟರೆ ಕಾರಣ ಏನು, ಕೊಂದವರು ಯಾರು ಎಂಬುದನ್ನು ಪತ್ತೆ ಹಚ್ಚಲು ತೋರುವ ಉತ್ಸಾಹ ಮಾನವ ಪ್ರಾಣಿ ಸಂಘರ್ಷ ತಡೆಯಲು ತೋರದಿರುವುದು ಬೇಸರದ ಸಂಗತಿ ಎಂದು ರೈತ ಮುಖಂಡರು ಅರಣ್ಯ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಗಂಗನದೊಡ್ಡಿ ಗ್ರಾಮಕ್ಕೆ ಸೋಮವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿನೀಡಿದ ಸಂದರ್ಭ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ಗ್ರಾಮದಲ್ಲಿ ಕಳೆದ 2 ವರ್ಷಗಳಿಂದ ಚಿರತೆ ಹಾವಳಿ ಹೆಚ್ಚಾಗಿದೆ ಎಂದು ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಉಪಟಳ ನೀಡುತ್ತಿರುವ ಚಿರತೆ ಸೆರೆ ಹಿಡಿಯುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಗಂಗನದೊಡ್ಡಿ ಗ್ರಾಮದ ಸುತ್ತಮುತ್ತಲೂ ಚಿರತೆಯ ಉಪಟಳ ಅತಿಯಾಗಿದ್ದು ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿ ಹೊತ್ತೊಯ್ಯುತ್ತಿದೆ. ಚಿರತೆ ದಾಳಿಯಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಚಿರತೆ ಸೆರೆ ಹಿಡಿಯುವಂತೆ ಹಲವು ಬಾರಿ ಒತ್ತಾಯ ಮಾಡಿದರೂ ಸೆರೆ ಕಾರ್ಯಾಚರಣೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚಿರತೆ ಸೇರಿದಂತೆ ಕಾಡುಪ್ರಾಣಿಗಳ ದಾಳಿ ಭಯದಿಂದ ರೈತರು ಬೆಳೆದ ಬೆಳೆಗಳಿಗೆ ನೀರನ್ನು ಹಾಯಿಸಲು ಸಾಧ್ಯವಾಗುತ್ತಿಲ್ಲ. ಜೀವ ಒತ್ತೆಯಿಟ್ಟು ಹಗಲು ರಾತ್ರಿ ಎನ್ನದೆ ನೀರು ಹಾಯಿಸಲು ಜಮೀನುಗಳಿಗೆ ತೆರಳಬೇಕಾಗುತ್ತದೆ. ಗ್ರಾಮದ ಅಲ್ಲಲ್ಲಿ ಚಿರತೆ ಚಲನವಲನ ಕಂಡು ಬರುತ್ತಿದ್ದು ರೈತರು ಪ್ರಾಣ ಭಯದಿಂದ ನರಳುವಂತಾಗಿದೆ.
ಸಾಕು ಪ್ರಾಣಿಗಳ ಜೀವವನ್ನು ಒತ್ತೆ ಇಡಬೇಕಾದ ಅನಿವಾರ್ಯ ಎದುರಾಗಿದ್ದು ಆತಂಕದಲ್ಲೇ ರೈತರು ಬದುಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪ್ರತಿಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಎಸಿಎಫ್ ಉಮಾಪತಿ ಸ್ಥಳಕ್ಕೆ ಭೇಟಿನೀಡಿ, ‘ಚಿರತೆ ಸೆರೆ ಹಿಡಿಯಲು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೂ ಚಿರತೆ ಬೋನಿಗೆ ಬಿದ್ದಿಲ್ಲ. ಸೆರೆಗೆ ನಾನಾರೀತಿಯ ಕಸರತ್ತು ಮಾಡಲಾಗುತ್ತಿದ್ದು ಮುಂದಿನ ವಾರದಲ್ಲಿ ಮೈಸೂರಿನಿಂದ ಚಿರತೆ ಸೆರೆ ಹಿಡಿಯುವ ತಜ್ಞರ ತಂಡವನ್ನು ಕರೆತಂದು ಸೆರೆ ಹಿಡಿಯಲಾಗುವುದು. ಒಂದು ವಾರ ಸಮಯ ನೀಡುವಂತೆ ಮನವಿ ಮಾಡಿದರು.
ಅಧಿಕಾರಿಗಳ ಮನವಿಗೆ ಒಪ್ಪಿಗೆ ಸೂಚಿಸಿದ ರೈತರು ವಾರದೊಳಗೆ ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಅಧಿಕಾರಿಗಳನ್ನು ಕಳುಹಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್, ಗೌರವಾಧ್ಯಕ್ಷ ರಾಜಣ್ಣ, ಸದಸ್ಯರಾದ ಪಳನಿ ಸ್ವಾಮಿ ಹಾಗೂ ಗಂಗನದೊಡ್ಡಿ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.