ADVERTISEMENT

ಮೆಕ್ಕೆಜೋಳ ದರ ಕುಸಿತ: ಕೃಷಿಕರಿಗೆ ಬರೆ

ಲಾಕ್‌ಡೌನ್‌ನಿಂದಾಗಿ ತತ್ತರಿಸಿದ ಕುಕ್ಕುಟೋದ್ಯಮ: ಬೆಲೆ ಕಳೆದುಕೊಂಡ ಜೋಳ

ನಾ.ಮಂಜುನಾಥ ಸ್ವಾಮಿ
Published 28 ಮೇ 2020, 19:45 IST
Last Updated 28 ಮೇ 2020, 19:45 IST
ಯಳಂದೂರು ತಾಲ್ಲೂಕಿನ ವಡಗೆರೆ ಬಳಿ ಮೆಕ್ಕೆಜೋಳವನ್ನು ಬಿಸಿಲಿಗೆ ಒಣಗಲು ಹಾಕಿದ ಬೆಳೆಗಾರ
ಯಳಂದೂರು ತಾಲ್ಲೂಕಿನ ವಡಗೆರೆ ಬಳಿ ಮೆಕ್ಕೆಜೋಳವನ್ನು ಬಿಸಿಲಿಗೆ ಒಣಗಲು ಹಾಕಿದ ಬೆಳೆಗಾರ   

ಯಳಂದೂರು: ಕುಕ್ಕುಟೋದ್ಯಮದಲ್ಲಿ ಬಳಕೆಯಾಗುವ ಪ್ರಮುಖ ಆಹಾರ ಮೆಕ್ಕೆಜೋಳ. ಕೋವಿಡ್‌–19 ಹಾವಳಿ ಆರಂಭವಾದ ನಂತರ ಕೋಳಿ ಸಾಕಣೆ ಮತ್ತುಸೇವನೆ ಇಳಿಮುಖ ಆಗುತ್ತಿದ್ದಂತೆ ಮುಸುಕಿನಜೋಳಕ್ಕೂ ಬೇಡಿಕೆ ಕುಸಿದಿದೆ. ಇದರಿಂದಾಗಿ ದರವೂ ಕಡಿಮೆಯಾಗಿದ್ದು,ಹಲವು ಕೃಷಿಕರು ಮುಸುಕಿನ ಜೋಳದ ಕಟಾವು ಮುಂದೂಡಿದ್ದಾರೆ. ಇನ್ನೂ ಕೆಲವರು ಕಟಾವು ಮಾಡಿ ಉತ್ತಮ ಧಾರಣೆಯ ನಿರೀಕ್ಷೆಯಲ್ಲಿದ್ದಾರೆ.

ಜನವರಿಪೂರ್ವದಲ್ಲಿ ಪ್ರತಿ ಕ್ವಿಂಟಲ್‌ಗೆ ₹1,900ರಿಂದ ₹2,000ರವರೆಗೆ ಬೆಲೆ ಇತ್ತು. ಮಾರ್ಚ್‌ನಲ್ಲಿ ಲಾಕ್‌ಡೌನ್‌ ಜಾರಿಯಾಗುವುದಕ್ಕೂ ಮೊದಲು ₹1,800 ಇದ್ದ ಬೆಲೆ, ಮೇನಲ್ಲಿ ಕ್ವಿಂಟಲ್‌ಗೆ ₹400ರಿಂದ ₹500ರವರೆಗೆ ಕುಸಿದಿದೆ. ಸದ್ಯ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹1,400ರಿಂದ ₹1,500ರವರೆಗೆ ಇದೆ.

‘ಜೋಳದ ಶುಷ್ಕತೆ, ತೂಕ, ಗುಣಮಟ್ಟದ ಆಧಾರದಲ್ಲಿ ಬೆಲೆ ನಿರ್ಧಾರ ಆಗುತ್ತದೆ.ಹೆಚ್ಚು ದಿನ ಸಂಗ್ರಹಿಸಿಟ್ಟರೆ ಬೇಡಿಕೆ ಕಡಿಮೆ ಆಗಬಹುದು. ಇದೇ ರೀತಿ ದರ ಕಡಿಮೆಯಾಗುತ್ತಿದ್ದರೆ ಹಾಕಿದ ಬಂಡವಾಳವೂ ಕೈ ಸೇರುವುದಿಲ್ಲ. ಕನಿಷ್ಠ ₹1,800ರಿಂದ ₹2,000 ದೊರೆತರೆ ಮಾತ್ರಬೆಳೆಗಾರರಿಗೆ ಸ್ವಲ್ಪ ಆದಾಯ ಬರುತ್ತದೆ’ ಎಂದು ವಡಗೆರೆಯ ಕೃಷಿಕರಾದ ಸತೀಶ್‌ ಹಾಗೂಕಿರಣ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮುಂಗಾರಿಗೂ ಮೊದಲು ಧಾನ್ಯ ಕಟಾವು ಮಾಡಬೇಕು. ಮಳೆ ಹೆಚ್ಚಾದರೆ, ನಿರ್ವಹಣೆಯ ವೆಚ್ಚಏರುತ್ತದೆ. ಸಂಗ್ರಹಕ್ಕೂ ಹಿನ್ನಡೆಯಾಗುತ್ತದೆ. ಇದನ್ನು ಅರಿತಿರುವ ಬೆಳೆಗಾರರು ಬೆಲೆಹೆಚ್ಚಾಗುವ ನಿರೀಕ್ಷೆಯಲ್ಲಿ ತೆನೆ ಕತ್ತರಿಸದೆ ಬಿಟ್ಟಿದ್ದಾರೆ. ಮತ್ತೆ ಕೆಲವರು ಕೊಯ್ಲೋತ್ತರ ಕೆಲಸದಲ್ಲಿ ನಿರತರಾಗಿದ್ದಾರೆ.

ಶೇ 25ರಷ್ಟು ಕೃಷಿಕರು ಜೋಳ ಮಾರಾಟ ಮಾಡಿದ್ದಾರೆ. ಶೇ 75ರಷ್ಟು ರೈತರು ಮಾರಾಟ ಮುಂದೂಡಿದ್ದಾರೆ. ನೆರೆ ರಾಜ್ಯದ ವ್ಯಾಪಾರಿಗಳು ಕೊಳ್ಳಲು ಮುಂದಾಗುತ್ತಿಲ್ಲ. ಕೋವಿಡ್‌–19ನಿಂದಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಆದರೆ, ಬಿಹಾರವು ಕಡಿಮೆ ಬೆಲೆಗೆ ತಮಿಳುನಾಡಿಗೆ ಜೋಳ ಪೂರೈಸುತ್ತಿದೆ. ಈ ಎಲ್ಲ ಕಾರಣಗಳಿಂದ ಮೆಕ್ಕೆಜೋಳ ಬೆಳೆಗಾರರು ಲಾಕ್‌ಡೌನ್‌ ಸಂಪೂರ್ಣ ತೆರವುಗೊಳ್ಳುವ ತನಕ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ಸ್ಥಳೀಯ ಫಾರಂಗಳಿಗೆ ಮಾರಾಟ

‘ಕೋವಿಡ್‌–19 ಮತ್ತು ಹಕ್ಕಿಜ್ವರದ ಭೀತಿಯಿಂದ ಕುಕ್ಕುಟೋದ್ಯಮ ನಂಬಿದವರು ಉತ್ಪಾದನೆಯನ್ನು ನಿಲ್ಲಿಸಿದರು. ಇಲ್ಲಿಗೆ ಪೂರೈಕೆ ಆಗುತ್ತಿದ್ದ ಮೆಕ್ಕೆಜೋಳಕ್ಕೆ ಬೇಡಿಕೆತಗ್ಗಿತು. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಉತ್ಪಾದಕರು ಕೋಳಿ ಸಾಕಣೆಮುಂದೂಡಿದರು. ಈಗ ಯಾರೂ ಕೂಡ ಮೆಕ್ಕೆಜೋಳವನ್ನು ಕೊಳ್ಳಲು ಮುಂದಾಗುತ್ತಿಲ್ಲ. ಇದರಿಂದಾಗಿ ಸ್ಥಳೀಯಫಾರಂಗಳಿಗೆ ಧಾನ್ಯ ಮಾರಾಟ ಮಾಡಬೇಕಿದೆ’ ಎಂದು ರೈತ ಅಂಬಳೆ ನಂದೀಶ್ ಹೇಳಿದರು.

ಹೊಲದ ಸಿದ್ಧತೆ, ಬಿತ್ತನೆ, ಗೊಬ್ಬರ, ಕೀಟನಾಶಕ, ಯಂತ್ರದ ಕೊಯ್ಲು, ಸಂಸ್ಕರಣಾವೆಚ್ಚಗಳು ಸೇರಿ ಒಂದು ಎಕರೆಗೆ ₹25 ಸಾವಿರಕ್ಕೂ ಹೆಚ್ಚಿನ ಖರ್ಚು ಬರುತ್ತದೆ. ಬೆಲೆಏರಿಕೆ ಹಂಬಲದಲ್ಲಿ ಹೆಚ್ಚು ದಿನ ಧಾನ್ಯ ಸಂಗ್ರಹಿಸಿದರೆ ತೇವಾಂಶ ಕಳೆದುಕೊಂಡು, ತೂಕಕುಸಿಯುತ್ತದೆ. ಇದರಿಂದ ದರದಲ್ಲಿ ಏರಿಕೆ ಆದರೂ, ಸರಾಸರಿ ಬೆಲೆ ತಗ್ಗುತ್ತದೆ.

ಸರ್ಕಾರ ಮೆಕ್ಕೆಜೋಳಕ್ಕೆ ಕನಿಷ್ಠ ₹2,500 ಬೆಂಬಲ ಬೆಲೆ ಘೋಷಿಸಬೇಕು. ಇದರಿಂದ ರೈತರ ಬದುಕು ಹಸನಾಗುತ್ತದೆ ಎಂಬುದು ಬೆಳೆಗಾರರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.