ADVERTISEMENT

ಚಾಮರಾಜನಗರ: ಲೋಕೋಪಯೋಗಿ ಇಲಾಖೆಯ ಇಬ್ಬರು ಎಂಜಿನಿಯರ್‌ಗಳು ಲೋಕಾಯುಕ್ತ ಬಲೆಗೆ

ಸರ್ಕಾರಿ ಶಾಲಾ ಕಟ್ಟಡದ ಕಾಮಗಾರಿಯ ಬಿಲ್‌ ಮಂಜೂರಾತಿಗಾಗಿ ಗುತ್ತಿಗೆದಾರನಿಂದ ₹30 ಸಾವಿರ ಲಂಚ ಪಡೆಯುತ್ತಿದ್ದರು

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 15:31 IST
Last Updated 9 ಜೂನ್ 2023, 15:31 IST
ಎಡದಿಂದ ಮೂರನೆಯವರು ಕೆಂಪರಾಜು, ಬಲದಿಂದ ಎರಡನೆಯವರು ಮಧುಸೂದನ್‌
ಎಡದಿಂದ ಮೂರನೆಯವರು ಕೆಂಪರಾಜು, ಬಲದಿಂದ ಎರಡನೆಯವರು ಮಧುಸೂದನ್‌   

ಚಾಮರಾಜನಗರ: ಸರ್ಕಾರಿ ಶಾಲಾ ಕಟ್ಟಡದ ಕಾಮಗಾರಿಯ ಬಿಲ್‌ ಮಂಜೂರಾತಿಗಾಗಿ ಗುತ್ತಿಗೆದಾರನಿಂದ ₹30 ಸಾವಿರ ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆಯ ಇಬ್ಬರು ಎಂಜಿನಿಯರ್‌ಗಳು ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. 

ಇಲಾಖೆಯ ಚಾಮರಾಜನಗರ ತಾಲ್ಲೂಕಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆಂಪರಾಜು ಮತ್ತು ಕಿರಿಯ ಎಂಜಿನಿಯರ್‌ ಮಧುಸೂದನ್‌ ಬಲೆಗೆ ಬಿದ್ದವರು. ಲೋಕಾಯುಕ್ತ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡು ಇಬ್ಬರನ್ನೂ ಬಂಧಿಸಿದ್ದಾರೆ. 

‌ನಗರದ ಸೂರ್ಯ ಬಿಲ್ಡರ್‌ ಅಂಡ್‌ ಡೆವೆಲಪರ್‌ ಸಂಸ್ಥೆಯು ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ಶಾಲೆ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಲೋಕೋಪಯೋಗಿ ಇಲಾಖೆಯು ಬಿಲ್‌ ಹಣ ಮಂಜೂರು ಮಾಡಬೇಕಿತ್ತು.

ADVERTISEMENT

‘ಬಿಲ್‌ ಪಾವತಿಗಾಗಿ ಇಬ್ಬರೂ ಎಂಜಿನಿಯರ್‌ಗಳು ₹30 ಸಾವಿರ ಲಂಚ ಕೇಳಿದ್ದರು. ಈ ಸಂಬಂಧ ಗುತ್ತಿಗೆದಾರ ದೂರು ನೀಡಿದ್ದರು. ಶುಕ್ರವಾರ ಸಂಜೆ ಕಾಮಗಾರಿ ನಡೆದ ಸ್ಥಳದಲ್ಲಿ ಮಧುಸೂದನ್‌ ಅವರು ಗುತ್ತಿಗೆದಾರನಿಂದ ₹30 ಸಾವಿರ ಲಂಚ ಪಡೆದಿದ್ದಾರೆ. ಅಲ್ಲಿಂದ ಕಾರಿನಲ್ಲಿ ಬರುತ್ತಿದ್ದಾಗ ಕುದೇರು ಚಾಮುಲ್‌ ಘಟಕದ ಬಳಿ ಅಡ್ಡ ಕಟ್ಟಿ ವಶಕ್ಕೆ ಪಡೆಯಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು. 

ಚಾಮರಾಜನಗರ ಲೋಕಾಯುಕ್ತ ಡಿವೈಎಸ್‌ಪಿ ಕೆ.ಟಿ.ಮ್ಯಾಥ್ಯೂ ಥಾಮಸ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.