ADVERTISEMENT

ತೆಪ್ಪೋತ್ಸವ, ಉಯ್ಯಾಲೋತ್ಸವ

ಪವಾಡ ಪುರುಷ ಮಾದಪ್ಪನ ಸನ್ನಿಧಿಯಲ್ಲಿ ದಸರಾ ಜಾತ್ರಾ ಮಹೋತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:28 IST
Last Updated 3 ಅಕ್ಟೋಬರ್ 2025, 4:28 IST
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ವಿಜೃಂಭಣೆಯಿಂದ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ವಿಜೃಂಭಣೆಯಿಂದ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು   

ಮಹದೇಶ್ವರ ಬೆಟ್ಟ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ವಿಜೃಂಭಣೆಯಿಂದ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.

ವಿಜಯದಶಮಿಯ ದಿನವಾದ ಗುರುವಾರ ದೇವಾಲಯಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡಿದ್ದರು.  ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.  ಭಕ್ತರು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಧವಸ–ದಾನ್ಯಗಳನ್ನು ಮಾದಪ್ಪನ ಅನ್ನ ದಾಸೋಹಕ್ಕೆ ಸಮರ್ಪಿಸಿದರು.  

ಬೆಳಿಗ್ಗೆ ಬೆಳ್ಳಿ ರಥೋತ್ಸವ, ಹುಲಿ ವಾಹನ, ರುದ್ರಾಕ್ಷಿ ಮಂಟಪ, ಬಸವ ವಾಹನ, ಪಂಜಿನ ಸೇವೆ, ಉರುಳು ಸೇವೆ, ದೂಪದ ಸೇವೆ ಸಹಿತ ಮಾದೇಶ್ವರ ಸ್ವಾಮಿಯ ವಿವಿದ ಸೇವೆಗಳಲ್ಲಿ ಭಾಗಿಯಾದ ಭಕ್ತರು ಮಾದಪ್ಪನ ಸ್ಮರಣೆ ಮಾಡಿದರು.

ADVERTISEMENT

ವೈಭವದ ತೆಪ್ಪೋತ್ಸವ: 6 ವರ್ಷಗಳಿಂದ ಸ್ಥಗಿತಗೊಂಡಿದ್ದ ಮಾದಪ್ಪನ ತೆಪ್ಪೋತ್ಸವ ಸಾವಿರಾರು ಭಕ್ತರು ಸಮ್ಮುಖದಲ್ಲಿ ನೆರವೇರಿತು. ವಿದ್ಯುತ್ ದೀಪಾಲಂಕಾರ ಕಣ್ಮನ ಸೆಳೆಯಿತು. ತೆಪ್ಪೋತ್ಸವಕ್ಕೂ ಮುನ್ನ ಮಾದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದ ಒಳ ಆವರಣದಲ್ಲಿ ಬಿಳಿ ಕುದುರೆಯ ಮೇಲೆ ಪ್ರತಿಷ್ಠಾಪಿಸಿ ದೇಗುಲದ ಒಳ ಆವರಣದಲ್ಲಿ ಪ್ರದಕ್ಷಿಣೆ ಹಾಕಿಸಿ ಕಲ್ಯಾಣಿಯ ಬಳಿ ತರಲಾಯಿತು.

 ಉತ್ಸವ ಮೂರ್ತಿಗೆ ಪೂಜೆ ನೆರವೇರಿಸಿ, ತೆಪ್ಪದಲ್ಲಿ ಪ್ರತಿಷ್ಠಾಪಿಸಿ ಮಂಗಳವಾದ್ಯ ಸಮೇತ, ಸಿಡಿಮದ್ದಿನ ಸದ್ದಿನ ನಡುವೆ ತೆಪ್ಪೋತ್ಸವ ನಡೆಯಿತು. ಸಾವಿರಾರು ಭಕ್ತರು ತೆಪ್ಪೋತ್ಸವ ವೈಭವವನ್ನು ಕಣ್ತುಂಬಿಕೊಂಡರು.

ಬಿಳಿ ಕುದುರೆ ವಾಹನ ಉತ್ಸವ: ರಾತ್ರಿ ಬಿಳಿ ಕುದುರೆ ವಾಹನ ಉತ್ಸವ ನೆರವೇರಿತು. ದೇಗುಲದ ಗರ್ಭ ಗುಡಿಯಲ್ಲಿರುವ ಶಿವ ಶಕ್ತಿ ಪರಂಪರೆಯ ಬೇಡಗಂಪಣ ಬುಡಕಟ್ಟು ಆರಾಧನೆಯ ಸಂಕೇತವಾದ ಮಲೆ ಮಹದೇಶ್ವರ ಸ್ವಾಮಿಯ ಧಾರ್ಮಿಕ ಉತ್ಸವದಲ್ಲಿ ಊರ ಹಟ್ಟಿನ ಸೇವೆ, ತೆಪ್ಪೋತ್ಸವ, ಶಿವರಾತ್ರಿ ಜಾಗರಣೆ, ಕುಂಭೋತ್ಸವ, ಕೊಂಡೋತ್ಸವ, ಹುಲಿವಾಹನ, ಬಸವ ವಾಹನ, ಮಹಾ ರಥೋತ್ಸವ ಸಂದರ್ಭ ಶಿವ, ಪಾರ್ವತಿಯರ ವಿಗ್ರಹ ಪೂಜೆ ನಡೆದುಕೊಂಡು ಬರುತ್ತಿದೆ.

ಆಯುಧ ಪೂಜೆ: ಬೇಡಗಂಪಣ ಸಮುದಾಯದ ದೊಡ್ಡಪಾಲಿನ ಮುಖಂಡರು ದೇವಾಲಯದಲ್ಲಿರುವ ಪಟ್ಟದ ಕತ್ತಿ, ದೊಡ್ಡ ಸತ್ತಿಗೆ, ಸೂರಿಪಾನಿ ಹಾಗೂ ಇತರ ಆಯುಧ ಹಾಗೂ ಮಹಾರಾಜರು ಮಲೆ ಮಾದಪ್ಪನ ಸನ್ನಿಧಿಗೆ ಕಾಣಿಕೆಯಾಗಿ ನೀಡಿರುವ ವಿವಿಧ ಸಲಕರಣೆಗಳಿಗೆ ಪೂಜೆ ಸಲ್ಲಿಸಲಾಯಿತು.

 ಆಯುಧಗಳನ್ನು ಮಂಗಳವಾದ್ಯಗಳ ಸಹಿತ ಮೆರವಣಿಗೆಯಲ್ಲಿ ದೇವಾಲಯದ ಪಕ್ಕದಲ್ಲಿರುವ ನಂದಾವನದ ಮಜ್ಜನ ಬಾವಿಗೆ ತಂದು ಶುಚಿಗೊಳಿಸಿ, ಪುಷ್ಪಗಳಿಂದ ಸಿಂಗರಿಸಲಾಯಿತು.  ಅವುಗಳನ್ನು ದೇವಾಲಯಕ್ಕೆ ತಂದು ಮಹಾನವಮಿಯ ವಿಶೇಷ ಪೂಜೆ ಸಲ್ಲಿಸಿ, ಹೋಮ ಹವನ ನೆರವೇರಿಸಲಾಯಿತು. ಭಕ್ತರ ವಾಹನಗಳಿಗೆ ಪೂಜೆ ನಡೆಯಿತು.

ಮಲೆ ಮಹದೇಶ್ವರನ ಕ್ಷೇತ್ರದಲ್ಲಿ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಆಯುಧ ಪೂಜೆ ನೆರವೇರಿತು

Highlights - ದಸರಾ ಜಾತ್ರೋತ್ಸವಕ್ಕೆ ಹರಿದುಬಂದ ಭಕ್ತ ಸಾಗರ ಮಾದಪ್ಪನ ಸ್ಮರಣೆ ಮಾಡಿದ ಭಕ್ತರು 6 ವರ್ಷಗಳ ಬಳಿಕ ನಡೆದ ತೆಪ್ಪೋತ್ಸವ 

Cut-off box - ಸಾಲೂರು: ಉತ್ಸವಕ್ಕೆ ತೆರೆ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ವಿಜಯದಶಮಿಯ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಮಾದಪ್ಪನ ದೇಗುಲದ ಪಶ್ಚಿಮ ದಿಕ್ಕಿನ ಕಂಠಶಾಲೆಯ ಆವರಣದಲ್ಲಿ ತೂಗುಯ್ಯಾಲೆ ಮಂಟಪದಲ್ಲಿ ಶಿವ ಪಾರ್ವತಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ಶರನ್ನವರಾತ್ರಿ ಉಯ್ಯಾಲೋತ್ಸವ ನಡೆಸಲಾಯಿತು. ಸಂಪ್ರದಾಯದಂತೆ 9 ದಿನಗಳ ಕಾಲ ಕೈವಾರ ರುದ್ರಾಭಿಷೇಕ ಮಹಾಮಂಗಳಾರತಿ ಮಹಾ ನೈವೇದ್ಯ ನಡೆಯಿತು. ದೇಗುಲದ ಒಳ ಆವರಣದಲ್ಲಿ ಸಾಲೂರು ಶ್ರೀಗಳ ಸಾನ್ನಿಧ್ಯದಲ್ಲಿ ಅರ್ಚಕರು ವಿಶೇಷ ಪೂಜೆ ಸಲ್ಲಿಸಿ ಉಯ್ಯಾಲೋತ್ಸವ ನೆರವೇರಿಸಿದರು. ಬಳಿಕ ತೆಪ್ಪೋತ್ಸವ ನಡೆಯಿತು. ಈ ಸಂದರ್ಭ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಬೇಡಗಂಪಣ ಅರ್ಚಕರು ಹಾಗೂ ದೇವಾಲಯದ ನೌಕರರು ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.