ಚಾಮರಾಜನಗರ: ಕಾಂಗ್ರೆಸ್ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇದ್ದರೆ ತಕ್ಷಣ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ದಲಿತ ಮುಖಂಡ ಮೂಡಹಳ್ಳಿ ಮೂರ್ತಿ ಒತ್ತಾಯಿಸಿದರು.
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಜಿಲ್ಲಾ ಮಾದಿಗ ಒಳ ಮೀಸಲಾತಿ ಹೋರಾಟ ಒಕ್ಕೂಟದಿಂದ ಜಿಲ್ಲಾಡಳಿತ ಭವನದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಒಳ ಮೀಸಲಾರಿ ಜಾರಿಮಾಡುವ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿ ಒಂದು ವರ್ಷ ಕಳೆದರೂ ಕಾಂಗ್ರೆಸ್ ಸರ್ಕಾರ ಕುಂಟುನೆಪ ಹೇಳುತ್ತಿರುವುದು ಖಂಡನೀಯ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಆಶ್ವಾಸನೆ ನೀಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಜಾರಿ ಮಾಡಿಲ್ಲ. ಸಾಮಾಜಿಕ ನ್ಯಾಯ, ಸಮಾನತೆ, ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರ್ಕಾರ ಒಳಮೀಸಲಾರಿ ಜಾರಿಗೆ ವಿಳಂಬ ಮಾಡುತ್ತಿದೆ. ಎಚ್.ಎನ್.ನಾಗಮೋಹನ್‌ದಾಸ್ ನೇತೃತ್ವದ ಆಯೋಗದ ವರದಿ ಸ್ವೀಕರಿಸಿ ಅನುಷ್ಠಾನಗೊಳಿಸಲು ಹಿಂದೇಟು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಒಳಮೀಸಲಾತಿ ಹೋರಾಟದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಒಳ ಮೀಸಲಾತಿ ಜಾರಿಯಾದರೆ ಮಾದಿಗರಿಗೆ ಮಾತ್ರವಲ್ಲ; 101 ಜಾತಿಗಳಿಗೆ ಅನುಕೂಲವಾಗಲಿದೆ. ಮಾದಿಗ, ಹೊಲೆಯ, ಕೊರಮ, ಕೊರಚ, ಭೋವಿ, ಲಂಬಾಣಿ, ಅಲೆಮಾರಿಗಳಿಗೂ ಮೀಸಲಾತಿ ಸೌಲಭ್ಯ ದೊರೆಯಲಿದೆ ಎಂದರು.
ಒಕ್ಕೂಟದ ಅಧ್ಯಕ್ಷ ಅರಕಲವಾಡಿ ನಾಗೇಂದ್ರ ಮಾತನಾಡಿ, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾರಿ ಜಾರಿಗೊಳಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳದಿದ್ದರೆ ಕರ್ನಾಟಕ ಬಂದ್ ಮಾಡಬೇಕಾಗುತ್ತದೆ. ಅಸಹಕಾರ ಚಳವಳಿ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿ ಮಾಡಲಾಗಿದೆ. ಕರ್ನಾಟಕದಲ್ಲಿ ಮಾತ್ರ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಮೂರೂವರೆ ದಶಕಗಳಿಂದ ಒಳ ಮೀಸಲಾರಿಗೆ ಹೋರಾಟ ನಡೆಯುತ್ತಿದ್ದು ಜಾರಿಯಾಗದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದರು.
ಜಿಲ್ಲಾ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನೆಲೆಗಟ್ಟಿನಲ್ಲಿ ಮೀಸಲಾತಿ ನೀಡಿದ್ದು, ಪರಿಶಿಷ್ಟ ಜಾರಿಯೊಳಗಿರುವ 101 ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಸಮಾನ ಹಂಚಿಕೆ ಆಗಬೇಕು. ಒಳ ಮೀಸಲಾತಿ ಜಾರಿಗೆ ಮಾದಿಗ ಸಮುದಾಯ ದಶಕಗಳಿಂದ ಹೋರಾಟ ಮಾಡುತ್ತಿದ್ದು ಸರ್ಕಾರ ಸ್ಪಂದಿಸದಿದ್ದರೆ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಪ್ರತಿಭಟನೆಯಲ್ಲಿ ಮುಖಂಡರಾದ ರಂಗಸ್ವಾಮಿ, ಸುಂದರ್ ರಾಮಸಮುದ್ರ, ಚಾ.ಗು.ನಾಗರಾಜ್, ಬೂದಿತಿಟ್ಟು ರಾಜೇಂದ್ರ, ಮಹದೇವಯ್ಯ, ಜವರಯ್ಯ, ಶಿವಣ್ಣ, ಶಿವಕುಮಾರ್, ಸಿದ್ದಯ್ಯ, ಮಹೇಶ್, ಮಹದೇವು, ಬೆಳ್ಳಿಯಪ್ಪ, ಸಂತೇಮರಹಳ್ಳಿ ರಾಜು, ಚೆನ್ನಬಸಪ್ಪ, ರವಿ, ಬಸವಣ್ಣ, ಮಹದೇವ, ಸಂಪತ್, ಅಪ್ಪು, ದೇವರಾಜು, ಗುರುಲಿಂಗಯ್ಯ ಸೇರಿದಂತ ಇತರರು ಭಾಗವಹಿಸಿದ್ದರು.
ಪ್ರತಿಭಟನಾ ಮೆರವಣಿಗೆ
ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಮೆರವಣಿಗೆ ಮೂಲಕ ಭುವನೇಶ್ವರಿ ವೃತ್ತಕ್ಕೆ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.