ADVERTISEMENT

ಮಹದೇಶ್ವರ ಬೆಟ್ಟ: ಮಾದಪ್ಪನ ಸನ್ನಿಧಿಯಲ್ಲಿ ನರಕ ಚತುರ್ದಶಿ

ದೇವರಿಗೆ ಎಣ್ಣೆ ಮಜ್ಜನ ಸೇವೆ; ಭಕ್ತರಿಂದ ಉರುಳು ಸೇವೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 7:48 IST
Last Updated 21 ಅಕ್ಟೋಬರ್ 2025, 7:48 IST
ಮಲೆ ಮಹದೇಶ್ವರ ದೇಗುಲದಲ್ಲಿ ನಡೆಯುತ್ತಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿರುವ ಭಕ್ತರು
ಮಲೆ ಮಹದೇಶ್ವರ ದೇಗುಲದಲ್ಲಿ ನಡೆಯುತ್ತಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿರುವ ಭಕ್ತರು   

ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಸಂಭ್ರಮ ಕಳೆಗಟ್ಟಿದ್ದು ಸೋಮವಾರ ನರಕ ಚತುರ್ದಶಿ ಅಂಗವಾಗಿ ಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಿತು.

ಮಹೋತ್ಸವದಲ್ಲಿ ಪಾಲ್ಗೊಳ್ಳಲು ನಾಡಿನೆಲ್ಲೆಡೆಯಿಂದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು ನಿತ್ಯ ಮಾದಪ್ಪನ ಸ್ಮರಣೆ ನಡೆಯುತ್ತಿದೆ. ಸೋಮವಾರ ಬೆಳ್ಳಿ ರಥೋತ್ಸವ, ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟಪ ಸೇವೆ, ಉರುಳು ಸೇವೆ, ಪಂಜಿನ ಸೇವೆ ನಡೆಯಿತು. ಭಕ್ತರು ಧಾರ್ಮಿಕ ಉತ್ಸವಗಳಲ್ಲಿ ಭಾಗವಹಿಸಿ ಹರಕೆ ಸಲ್ಲಿಸಿ ಕಾಣಿಕೆ ಸಮರ್ಪಿಸಿದರು. 

ಎಣ್ಣೆ ಮಜ್ಜನ ಸೇವೆ: ಮೂಡಲ ಮಲೆಯ ಮಾದೇವನಿಗೆ ಭಾನುವಾರ ಎಣ್ಣೆ ಮಜ್ಜನ ಸೇವೆ ನಡೆಯಿತು. ಮುಂಜಾವಿನ ನಸುಕಿನಲ್ಲಿ ಮಾದೇಶ್ವರನಿಗೆ ಎಣ್ಣೆ ಮಜ್ಜನ ನೆರವೇರಿತು. ಬಳಿಕ ದೇವರಿಗೆ ಪ್ರಿಯವಾದ ಬಿಲ್ವಾರ್ಚನೆ ಮಾಡಲಾಯಿತು. ಮಹಾಮಂಗಳಾರತಿ, ರುದ್ರಾಭಿಷೇಕ, ಪುಷ್ಪಾರ್ಚನೆ, ಗಂದಾಭಿಷೇಕ ಸಹಿತ ಹಲವು ವಿಧಿ ವಿಧಾನಗಳು ನಡೆದವು. ನಂತರ ಭಕ್ತರು ಮಾದಪ್ಪನ ದರ್ಶನ ಪಡೆದು ಧನ್ಯತೆ ಪಡೆದರು.

ADVERTISEMENT

ಇಂದು ಹಾಲರವಿ ಉತ್ಸವ: ಮಂಗಳವಾರ ದೀಪಾವಳಿ ಜಾತ್ರಾ ಮಹೋತ್ಸವದ ಪ್ರಮುಖ ಆಚರಣೆಗಳಲ್ಲೊಂದಾದ ಹಾಲರವಿ ಉತ್ಸವ ನಡೆಯಲಿದೆ. ಬೇಡಗಂಪಣ ಸಮುದಾಯದ ಪುಟ್ಟ ಬಾಲೆಯರು ಮಹದೇಶ್ವರನ ಬೆಟ್ಟದಿಂದ 7 ಕಿ.ಮೀ ದೂರವಿರುವ ಹಾಲಹಳ್ಳವನ್ನು ತಲುಪಿ ಪೂಜೆ ಮಾಡಿದ ಕಳಸಗಳನ್ನು ಹೊತ್ತು ದೇವಾಲಯಕ್ಕೆ ಪಾದಯಾತ್ರೆಯಲ್ಲಿ ಬಂದು ಸೇರಲಿದ್ದಾರೆ.

ತಲತಲಾಂತರಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಸ್ಥಳೀಯ ಬೇಡಗಂಪಣ ಸಮುದಾಯದ 10 ರಿಂದ 12 ವರ್ಷದೊಳಗಿನ 100 ಮಂದಿ ಹೆಣ್ಣುಮಕ್ಕಳು ಹಾಲರವಿ ಉತ್ಸವದಲ್ಲಿ ಭಾಗವಹಿಸುವುದು ವಿಶೇಷ. ಅರಣ್ಯದ ಕಾಲು ದಾರಿಯಲ್ಲಿ ಬಾಲಕಿಯರು ಕಳಸ ಹೊತ್ತು ಬರುವಾಗ ವಾದ್ಯ ಮೇಳಗಳು ಮೇಳೈಸಲಿವೆ.

ಮಲೆ ಮಹದೇಶ್ವರನ ಸನ್ನಿಧಿ ತಲುಪುತ್ತಿದ್ದಂತೆ ಪಟ್ಟದ ಆನೆ, ಡೊಳ್ಳು ಕುಣಿತ, ಛತ್ರಿ ಚಾಮರದ ಜತೆಗೂಡಲಿದ್ದು ದೇವಾಲಯವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿ ಕಳಸಗಳಲ್ಲಿ ತಂದ ನೀರನ್ನು ಮಾದಪ್ಪನಿಗೆ ಅಭಿಷೇಕ ಮಾಡುವ ಮೂಲಕ ಹಾಲರವಿ ಉತ್ಸವ ಸಂಪನ್ನಗೊಳ್ಳಲಿದೆ.

ಅ.22ರಂದು ಬೆಳಿಗ್ಗೆ ಮಹದೇಶ್ವರ ಸ್ವಾಮಿಯ ಮಹಾ ರಥೋತ್ಸವ ಜರುಗಲಿದೆ. ಈ ಸಂದರ್ಭ ಲಕ್ಷಾಂತರ ಭಕ್ತರು ಭಾಗವಹಿಸಿ ಉಘೇ ಉಘೇ ಮಾದಪ್ಪನ ಉದ್ಘೋಷ ಮೊಳಗಿಸಲಿದ್ದಾರೆ. ನಂತರ ಗುರು ಬ್ರಹ್ಮೋತ್ಸವ, ಅನ್ನ ಬ್ರಹ್ಮೋತ್ಸವ ನಡೆಯಲಿದ್ದು ರಾತ್ರಿ ಕಲ್ಯಾಣಿಯಲ್ಲಿ ‌ಸಂಭ್ರಮದ  ತೆಪ್ಪೋತ್ಸದ ನಡೆಯುವ ಮೂಲಕ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ನರಕ ಚತುರ್ದಶಿ ದಿನ ಭಕ್ತರು ಉರುಳುಸೇವೆ ಮೂಲಕ ಮಾದಪ್ಪನಿಗೆ ಹರಕೆ ತೀರಿಸಿದರು

Highlights - ಮಲೆ ಮಹದೇಶ್ವರನ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ಭಕ್ತಸಾಗರ ಪ್ರತಿನಿತ್ಯ ದಾಸೋಹ; ವಿಶೇಷ ಪೂಜೆ, ಪುನಸ್ಕಾರ 22ರಂದು ಮಹಾ ರಥೋತ್ಸವ, ತೆಪ್ಪೋತ್ಸವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.